ರಾಜ್ಯದಲ್ಲಿ ಪುನರ್ವಸು ಮಳೆಯ ಆರ್ಭಟ ಮುಂದುವರಿದಿದ್ದು ಕೊಡಗು, ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಈ ಭಾಗದ ನದಿಗಳಲ್ಲಿ ಒಳಹರಿವು ಹೆಚ್ಚುತ್ತಿದ್ದು, ಪ್ರವಾಹದ ಆತಂಕ ಎದುರಾಗಿದೆ.
ಬೆಂಗಳೂರು (ಜು.06): ರಾಜ್ಯದಲ್ಲಿ ಪುನರ್ವಸು ಮಳೆಯ ಆರ್ಭಟ ಮುಂದುವರಿದಿದ್ದು ಕೊಡಗು, ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಈ ಭಾಗದ ನದಿಗಳಲ್ಲಿ ಒಳಹರಿವು ಹೆಚ್ಚುತ್ತಿದ್ದು, ಪ್ರವಾಹದ ಆತಂಕ ಎದುರಾಗಿದೆ. ಇದೇ ವೇಳೆ, ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನದಿಗಳು ಮೈದುಂಬಿರುವುದರಿಂದ ಜೋಗ, ಗೋಕಾಕ್ ಸೇರಿದ ರಾಜ್ಯದ ಹಲವು ಜಲಪಾತಗಳು ಧುಮ್ಮಿಕ್ಕುತ್ತಿವೆ.
ಈ ಮಧ್ಯೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬೈಸೆ ಗ್ರಾಮದಲ್ಲಿ ಕಾಲುಸಂಕ ದಾಟುವಾಗ ಕಾಲುವೆಗೆ ಜಾರಿ ಬಿದ್ದು ಚೀಕಳಿ ಗ್ರಾಮದ ನಿವಾಸಿ ಶಶಿಕಲಾ (43) ಎಂಬುವರು ನೀರು ಪಾಲಾಗಿದ್ದಾರೆ. ಇದೇ ವೇಳೆ, ಕರಾವಳಿ ಭಾಗದಲ್ಲಿ ಇನ್ನೆರಡು ದಿನ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಶಾಲಾ-ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.
ಸಿಡಿ ಫ್ಯಾಕ್ಟರಿ ಬಂದ್ ಆಯ್ತು ಎಂಡಿಎ ಫ್ಯಾಕ್ಟರಿ ಶುರುವಾಯ್ತು: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ಆರೋಪ
ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಮಲಪ್ರಭಾದ ಪ್ರವಾಹದಿಂದಾಗಿ ಖಾನಾಪುರ ತಾಲೂಕಿನ ಹಬ್ಬನಹಟ್ಟಿಯ ಆಂಜನೇಯ ದೇವಾಲಯ ಸಂಪೂರ್ಣ ಜಲಾವೃತವಾಗಿದೆ. ತಾಲೂಕಿನ ಎಂಟು ಗ್ರಾಮಗಳ ಸಂಪರ್ಕ ರಸ್ತೆಗಳ ಸೇತುವೆ ಮೇಲೆ ಇನ್ನೂ ನೀರು ಹರಿಯುತ್ತಿದೆ. ಘಟಪ್ರಭಾ ನದಿಯ ಪ್ರವಾಹದಿಂದಾಗಿ ಗೋಕಾಕ ಫಾಲ್ಸ್ ಧುಮ್ಮಿಕ್ಕುತ್ತಿದೆ. ಕಲ್ಯಾಣ ಕರ್ನಾಟಕದ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಕಳೆದ 24 ತಾಸುಗಳಲ್ಲಿ 1.5 ಟಿಎಂಸಿಗೂ ಅಧಿಕ ನೀರು ಹರಿದು ಬಂದಿದೆ. ಕೊಡಗಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದ ಒಳಹರಿವು 9,686 ಕ್ಯುಸೆಕ್‌ಗಳಿಗೆ ಏರಿದೆ.
ಜಲಾಶಯದ ನೀರಿನ ಮಟ್ಟ ಶುಕ್ರವಾರ 100 ಅಡಿಗಳಿಗೆ ಏರಿದೆ. ಮಳೆಯಿಂದಾಗಿ ಕಾರವಾರ ಸಮೀಪದ ಬೈತಖೋಲದಲ್ಲಿ ಕೆಲವು ಮನೆಗಳು ಜಲಾವೃತವಾಗಿವೆ. ಕದ್ರಾ ಜಲಾಶಯದಿಂದ 4 ಗೇಟ್ ಗಳ ಮೂಲಕ 6 ಸಾವಿರ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಮಳೆಯಾಗುತ್ತಿದ್ದು, ತುಂಗಾ ನದಿ ತೀರದಲ್ಲಿರುವ ಶೃಂಗೇರಿಯ ಕಪ್ಪೆಶಂಕರ ದೇಗುಲ ಇನ್ನೂ ಮುಳುಗಡೆಯಾಗಿಯೇ ಇದೆ. ಕರಾವಳಿ ಭಾಗದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ಕುಳಾಯಿಯಲ್ಲಿ ನಿರ್ಮಾಣ ಹಂತದ ಮೀನುಗಾರಿಕಾ ಬಂದರಿನ ಕಲ್ಲುಗಳು ಕೊಚ್ಚಿಹೋಗಿವೆ.
ಎಚ್‌ಡಿಕೆ ಹುಚ್ಚ, ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ: ಡಿಕೆಶಿ
ಜಲಪಾತಗಳಿಗೆ ಜೀವಕಳೆ: ರಾಜ್ಯದ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತ ಮೈದುಂಬಿದೆ. ಮತ್ತೊಂದೆಡೆ ಘಟಪ್ರಭಾ ನದಿಯಲ್ಲಿ ನೀರು ಹೆಚ್ಚಾಗಿರುವುದರಿಂದ ಗೋಕಾಕ್‌ನ ಜಲಪಾತ ಭೋರ್ಗರೆಯುತ್ತಿದೆ.