Bengaluru Animal Crematorium: ಪ್ರಾಣಿಗಳ ಅಂತ್ಯಕ್ರಿಯೆಗೆ ಜನರು ಪರದಾಟ: ಮೂಕ ಜೀವಿಗಳಿಗೆ ಇದ್ದ ಏಕೈಕ ಚಿತಾಗಾರವೂ ಸ್ಥಗಿತ!

Kannadaprabha News   | Kannada Prabha
Published : Jun 30, 2025, 07:34 AM ISTUpdated : Jun 30, 2025, 11:16 AM IST
Bengaluru

ಸಾರಾಂಶ

ಬೆಂಗಳೂರಿನಲ್ಲಿ ಮೃತಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ದುರಸ್ತಿಯಲ್ಲಿರುವ ಏಕೈಕ ಪ್ರಾಣಿ ಚಿತಾಗಾರ ಹಾಗೂ ಪರ್ಯಾಯ ವ್ಯವಸ್ಥೆಯ ಕೊರತೆಯಿಂದಾಗಿ ಸಮಸ್ಯೆ ಉಲ್ಬಣಗೊಂಡಿದೆ. ಮನುಷ್ಯರ ಚಿತಾಗಾರ ಬಳಕೆ ಅಥವಾ ದುಬಾರಿ ಖಾಸಗಿ ಚಿತಾಗಾರಗಳ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಜೂ.30): ರಾಜಧಾನಿ ಬೆಂಗಳೂರಿನಲ್ಲಿ ಮೃತಪಟ್ಟ ಪ್ರಾಣಿಗಳನ್ನು ಗೌರವಿತವಾಗಿ ಅಂತ್ಯಸಂಸ್ಕಾರ ಮಾಡುವುದಕ್ಕೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಮನುಷ್ಯರು ಮೃತಪಟ್ಟರೆ ಅಂತ್ಯ ಸಂಸ್ಕಾರ ಮಾಡುವುದಕ್ಕೆ 12 ವಿದ್ಯುತ್‌ ಚಿತಾಗಾರ ಸೇರಿದಂತೆ ಜಾತಿ ಹಾಗೂ ಧರ್ಮಾಧಾರಿತವಾದ ಸ್ಮಶಾನಗಳಿವೆ. ಆದರೆ, ಸಾಕು ಪ್ರಾಣಿಗಳು ಮೃತಪಟ್ಟರೆ ಅಂತ್ಯ ಸಂಸ್ಕಾರ ಮಾಡುವುದಕ್ಕೆ ಇರುವ ಒಂದೇ ಒಂದು ಚಿತಾಗಾರ ಇದೆ. ಅದೂ ಸಹ ಕಳೆದ ಒಂದೂವರೆ ತಿಂಗಳಿನಿಂದ ಸ್ಥಗಿತವಾಗಿದೆ.

ಚಿತಾಗಾರ ದುರಸ್ತಿಗೆ ಇದೀಗ ಆರ್‌ಆರ್‌ ನಗರ ವಲಯದ ಯೋಜನಾ ವಿಭಾಗದಿಂದ ಟೆಂಡರ್‌ ಆಹ್ವಾನಿಸಲಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು, ಕಾರ್ಯಾದೇಶ ನೀಡಿದ ಬಳಿಕ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸುವುದಕ್ಕೆ ಸುಮಾರು ಎರಡರಿಂದ ಮೂರು ತಿಂಗಳು ಸಮಯ ಬೇಕಾಗಲಿದೆ. ಅಲ್ಲಿಯ ವರೆಗೆ ಮೃತಪಟ್ಟ ಸಾಕು ಪ್ರಾಣಿಗಳನ್ನು ಗೌರವಿತವಾಗಿ ಅಂತ್ಯಕ್ರಿಯೆ ನಡೆಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

ನಗರದಲ್ಲಿ ರಸ್ತೆ ಅಪಘಾತ ಅಥವಾ ಇನ್ನಿತರೆ ಕಾರಣದಿಂದ ಮೃತಪಟ್ಟ ಅನಾಥ ನಾಯಿ, ಬೆಕ್ಕು ಸೇರಿದಂತೆ ಮೊದಲಾದ ಪ್ರಾಣಿಗಳನ್ನು ಅಂತ್ಯಕ್ರಿಯೆ ಮಾಡಲು ವ್ಯವಸ್ಥೆ ಇಲ್ಲದಿರುವುದರಿಂದ ಬಿಬಿಎಂಪಿಯ ಕಸದ ಆಟೋ ಅಥವಾ ರಾಜಕಾಲುವೆಗೆ ಎಸೆಯುವ ದುಸ್ಥಿತಿ ಎದುರಾಗಿದೆ.

ಮತ್ತೊಂದೆಡೆ ಅನೇಕ ಪ್ರಾಣಿ ಪ್ರಿಯರು ತಮ್ಮ ಸಾಕು ಪ್ರಾಣಿಗಳನ್ನು ಕುಟುಂಬ ಸದಸ್ಯರಂತೆ ನೋಡಿಕೊಳ್ಳುತ್ತಿದ್ದು, ಅವುಗಳು ಸತ್ತಾಗ ಸರಿಯಾಗಿ ವಿಲೇವಾರಿ ಮಾಡಲು ನಗರದಲ್ಲಿ ವ್ಯವಸ್ಥೆ ಇಲ್ಲವಾಗಿದೆ. ಕಾಲುವೆಗೆ. ಕಸದ ಆಟೋಗೆ ಹಾಕುವ ನೋವಿನ ಪರಿಸ್ಥಿತಿ ಎದುರಿಸಬೇಕಾಗಿದೆ. ಇಲ್ಲದೇ ದುಬಾರಿ ಹಣಕೊಟ್ಟು ಖಾಸಗಿ ಪ್ರಾಣಿ ಚಿತಾಗಾರಗಳ ಮೊರೆ ಹೋಗಬೇಕಿದೆ.

ಮನುಷ್ಯರ ಚಿತಾಗಾರ ಬಳಕೆಗೆ ತಯಾರಿ:

ಇಡೀ ನಗರಕ್ಕೆ ಇರುವ ಒಂದೇ ಒಂದು ಚಿತಾಗಾರ ಇದೀಗ ದುರಸ್ತಿಯಲ್ಲಿ ಇರುವುದರಿಂದ ಬಿಬಿಎಂಪಿಯು ಮಾನವ ಮೃತದೇಹವನ್ನು ಅಂತ್ಯಕ್ರಿಯೆ ಮಾಡುವುದಕ್ಕೆ ಬಳಕೆ ಮಾಡುತ್ತಿರುವ 12 ಚಿತಾಗಾರದಲ್ಲಿ ಒಂದು ಚಿತಾಗಾರವನ್ನು ತಾತ್ಕಾಲಿಕವಾಗಿ ಸಾಕು ಪ್ರಾಣಿಗಳ ಮೃತದೇಹವನ್ನು ಅಂತ್ಯಕ್ರಿಯೆ ಮಾಡುವುದಕ್ಕೆ ಬಳಕೆ ಮಾಡಿಕೊಳ್ಳುವುದಕ್ಕೆ ಪಶುಪಾಲನೆ ವಿಭಾಗ ಪ್ರಸ್ತಾವನೆ ಸಿದ್ಧಪಡಿಸಿಕೊಂಡಿದೆ. ಒಂದು ವೇಳೆ ಅವಕಾಶ ನೀಡಿದರೆ ಈ ಬಗ್ಗೆ ಸಾರ್ವಜನಿಕರು ಸಾಕಷ್ಟು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ.

ವಲಯವಾರು ಪ್ರಾಣಿ ಚಿತಾಗಾರಕ್ಕೆ ಸಿದ್ಧತೆ:

ಈ ನಡುವೆ ಬಿಬಿಎಂಪಿಯ ಪಶುಪಾಲನೆ ವಿಭಾಗವು ಬಿಬಿಎಂಪಿಯ ಎಲ್ಲಾ ವಲಯದಲ್ಲಿ ತಲಾ ಒಂದು ಪ್ರಾಣಿ ಚಿತಾಗಾರ ಸ್ಥಾಪಿಸುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಸ್ಥಳ ಗುರುತಿಸುವ ಕಾರ್ಯ ಮಾಡುತ್ತಿರುವ ಪಶುಪಾಲನೆ ವಿಭಾಗದ ಅಧಿಕಾರಿಗಳು, ಮೃತಪಟ್ಟ ಪ್ರಾಣಿಗಳ ದೇಹವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಾಣಿ ಚಿತಾಗಾರ ಪೂರೈಕೆಗಾರರಿಂದ ದರ ನಮೂನೆ ಸಲ್ಲಿಸುವುದಕ್ಕೆ ಸೂಚಿಸಿದೆ.

ಇಡೀ ನಗರದಲ್ಲಿ ಒಂದೇ ಸರ್ಕಾರಿ ಪ್ರಾಣಿ ಚಿಗಾತಾರ ಸುಮ್ಮನಹಳ್ಳಿಯಲ್ಲಿ ₹2 ಕೋಟಿ ವೆಚ್ಚದಲ್ಲಿ ಪ್ರಾಣಿಗಳ ಚಿತಾಗಾರವನ್ನು ಬಿಬಿಎಂಪಿ ಸ್ಥಾಪನೆ ಮಾಡಿದೆ. ಹಸು, ಎಮ್ಮೆ, ನಾಯಿ, ಬೆಕ್ಕು, ಪಾರಿವಾಳ, ಕೋತಿ ಸೇರಿದಂತೆ ಎಲ್ಲಾ ವಿಧವಾದ ಪ್ರಾಣಿಗಳನ್ನೂ ಚಿತಾಗಾರದಲ್ಲಿ ದಹನ ಮಾಡಬಹುದಾಗಿದೆ. ದೊಡ್ಡಪ್ರಾಣಿಗಳ ಮೃತದೇಹವನ್ನು ಕತ್ತರಿಸಲು ಚಿತಾಗಾರದಲ್ಲಿ ಕಸಾಯಿಖಾನೆ ಕೊಠಡಿಯನ್ನು ಸ್ಥಾಪಿಸಲಾಗುತ್ತಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಪ್ರಾಣಿಗಳ ಮರಣೋತ್ತರ ಪರೀಕ್ಷೆ ನಡೆಸಲು ಪಶು ವೈದ್ಯರ ಕೊಠಡಿಯನ್ನು ನಿರ್ಮಿಸಲಾಗಿದೆ. ಈ ಒಂದು ಪ್ರಾಣಿ ಚಿತಾಗಾರ ಬಿಟ್ಟರೆ ರಾಜಧಾನಿಯಲ್ಲಿ ಸರ್ಕಾರಿ ಸಂಸ್ಥೆಗಳ ಬೇರೆ ಪ್ರಾಣಿ ಚಿತಾಗಾರವಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಸಂಸ್ಥೆಗಳು ಸಾವಿರಾರು ರು. ಪ್ರಾಣಿಪ್ರಿಯರಿಂದ ವಸೂಲಿ ಮಾಡಲಾಗುತ್ತಿದೆ.

ಸುಮ್ಮನಹಳ್ಳಿ ಚಿತಾಗಾರ ರಿಪೇರಿಗೆ ಕ್ರಮ ವಹಿಸಲಾಗಿದೆ. ಜುಲೈ 3ಕ್ಕೆ ಟೆಂಡರ್‌ ತೆರೆದು ಕಾಮಗಾರಿ ನಡೆಸುವುದಕ್ಕೆ ಕಾರ್ಯಾದೇಶ ನೀಡಲಾಗುವುದು. ಜತೆಗೆ, 400 ರಿಂದ 500 ಚದರಡಿ ವಿಸ್ತೀರ್ಣದಲ್ಲಿ ಎಲ್ಲಾ ವಲಯದಲ್ಲಿ ಪ್ರಾಣಿ ಚಿತಾಗಾರ ಸ್ಥಾಪಿಸುವುದಕ್ಕೆ ತಯಾರಿ ಮಾಡಿಕೊಂಡಿದ್ದೇವೆ.

- ಸುರಳ್ಕರ್ ವಿಕಾಸ್ ಕಿಶೋರ್, ವಿಶೇಷ ಆಯುಕ್ತರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!