
ಶಿವಮೊಗ್ಗ (ಜೂ.30): ಕಳೆದ 11 ವರ್ಷಗಳಿಂದ ದೇಶ ಎಲ್ಲ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ವಿಶ್ವಗುರು ಸ್ಥಾನದತ್ತ ದಾಪುಗಾಲು ಇಟ್ಟಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಜಿಲ್ಲಾ ಬಿಜೆಪಿಯಿಂದ ಭಾನುವಾರ ಶಿವಮೊಗ್ಗ ನಗರ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ದೀನದಯಾಳು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಶತ್ರು ರಾಷ್ಟ್ರಗಳಿಗೆ ಕೂಡಲೇ ತಕ್ಕ ಉತ್ತರವನ್ನು ಕೊಡುವ ಮಟ್ಟಿಗೆ ಬೆಳೆದು ನಿಂತಿದೆ ಎಂದರು.
11 ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ಕೃಷಿ ಕ್ಷೇತ್ರ ಪ್ರಗತಿ, ಕೈಗಾರಿಕಾ ವಲಯ ಆಧುನೀಕರಣ, ರಾಜತಾಂತ್ರಿಕ ವ್ಯವಸ್ಥೆ ಸುಧಾರಣೆ, ಪ್ರವಾಸೋದ್ಯಮಕ್ಕೆ ಬಲ, ರಕ್ಷಣಾ ವಿಭಾಗ ಉನ್ನತಿಕರಣ, ಯುವ ಮತ್ತು ಮಹಿಳಾ ಸಬಲೀಕರಣ, ದೇಶದ ಅಮೂಲಾಗ್ರ ಆರ್ಥಿಕ ಸುಧಾರಣೆ ಸೇರಿದಂತೆ ಇನ್ನೂ ಅನೇಕ ವಿಭಾಗಗಳಲ್ಲಿ ಐತಿಹಾಸಿಕ ಬದಲಾವಣೆಯನ್ನು ದೇಶ ಕಂಡಿದೆ ಎಂದು ತಿಳಿಸಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಆಡಳಿತದ ಚುಕ್ಕಾಣಿ ಹಿಡಿದು 11ನೇ ವಸಂತಕ್ಕೆ ದಾಪುಗಾಲು ಇಟ್ಟಿರುವ ಈ ಐತಿಹಾಸಿಕ ಕ್ಷಣವನ್ನು ಮತದಾರರ ನಡುವೆ ಇನ್ನಷ್ಟು ಸಾಕ್ಷಿಕರಿಸಲು ಭಾರತೀಯ ಜನತಾ ಪಕ್ಷ ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯ ರಾಷ್ಟ್ರವಾಗಿದ್ದು, ಕಳೆದ 11 ವರ್ಷಗಳಲ್ಲಿ ಮೋದಿ ಸರ್ಕಾರ ಅಂತ್ಯೋದಯ ಪರಿಕಲ್ಪನೆಯಡಿ ಎಲ್ಲಾ ವರ್ಗದ ಜನ ಸಾಮಾನ್ಯರ ಹಿತ ಕಾಪಾಡಲು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಹಾಗೂ ಸ್ವಾವಲಂಬಿ ಜೀವನ ನಡೆಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದು ಅರ್ಹ ಫಲಾನುಭವಿಗಳಿಗೆ ತಲುಪಿಸಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಆಡಳಿತದಲ್ಲಿ ಭಾರತದ ಸಮಗ್ರ ಚಿತ್ರಣವನ್ನೇ ಬದಲಾಯಿಸಿದ್ದಾರೆ. ದೇಶದ ನಾಗರಿಕರ ಜೀವನ ಮಟ್ಟವನ್ನು ಸುಧಾರಿಸುತ್ತಾ, ಭಾರತ ಇಂದು ಒಂದು ಪ್ರಮುಖ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ. ಜಗತ್ತಿನ 10ನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತ, ಇಂದು ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯಾಗಿ ರೂಪುಗೊಂಡಿದೆ ಎಂದರು.
ಭಾರತದಿಂದ ಹಲವಾರು ರಾಷ್ಟ್ರಗಳಿಗೆ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದೇವೆ, ಹಿಂದೆಂದಿಗಿಂತಲೂ ಹೆಚ್ಚಾಗಿ ಬಾಹ್ಯಾಕಾಶ ಅನ್ವೇಷಣೆ ನಡೆಸುತ್ತಿದ್ದೇವೆ, ಜಾಗತಿಕ ಗುಣಮಟ್ಟದ ರಸ್ತೆಗಳು, ರೈಲ್ವೇ, ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಿದ್ದೇವೆ. 2014ರ ಭಾರತ ಮತ್ತು 2025ರ ಭಾರತವನ್ನು ಹೋಲಿಸಿ ನೋಡಿದಾಗ, ನಮ್ಮ ದೇಶ ಎಷ್ಟರಮಟ್ಟಿಗೆ ಬೆಳವಣಿಗೆ ಸಾಧಿಸಿದೆ ಎನ್ನುವುದು ನಮ್ಮ ಗಮನಕ್ಕೆ ಬರುತ್ತದೆ. ಇಂದು ಭಾರತೀಯರಿಗೆ ಹೆಚ್ಚಿನ ಅವಕಾಶಗಳಿದ್ದು, ಅವರು ದೇಶದ ಕುರಿತು ಹೆಮ್ಮೆ ಮತ್ತು ಭವಿಷ್ಯದ ಕುರಿತು ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ತಾಲೂಕು ಅಧ್ಯಕ್ಷರು, ಹಿರಿಯ ಮುಖಂಡರು, ಗಣ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ