
ಬೆಂಗಳೂರು (ಅ.15): ರೈತರ ಸಮಸ್ಯೆಗಳನ್ನು ತಳಮಟ್ಟದಲ್ಲಿ ಪರಿಹರಿಸಲು ಕೃಷಿ ಪರಿಕರ ಮಾರಾಟಗಾರರಿಗೆ ರಾಜ್ಯದಲ್ಲಿ ನೀಡುತ್ತಿರುವ ‘ದೇಸಿ’ ತರಬೇತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೀಟನಾಶಕ, ರೋಗನಾಶಕ, ರಸಗೊಬ್ಬರ ಮತ್ತಿತರ ಕೃಷಿ ಪರಿಕರಗಳ ಮಾರಾಟದ ಅಂಗಡಿ ಆರಂಭಿಸಬೇಕೆಂದರೆ ಅಥವಾ ಈಗಾಗಲೇ ಆರಂಭಿಸಿದ್ದರೆ ‘ದೇಸಿ’ ತರಬೇತಿ ಪಡೆಯುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿರುವುದು ತರಬೇತಿ ಪಡೆಯಲು ಬೇಡಿಕೆ ಹೆಚ್ಚಾಗಿದೆ. ದೇಶದಲ್ಲಿ 76,301 ತರಬೇತಿ ಪಡೆದ ಕೃಷಿ ಮಾರಾಟಗಾರರಿದ್ದು, ಪ್ರಸ್ತುತ 20 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.
ಬೆಂಗಳೂರು ಕೃಷಿ ವಿವಿ ವ್ಯಾಪ್ತಿಯ 16 ಜಿಲ್ಲೆಯ 8727 ಮಂದಿ ತರಬೇತಿ ಪಡೆದಿದ್ದು 1760 ಅಭ್ಯರ್ಥಿಗಳ ತರಬೇತಿ ಮುಂದುವರೆದಿದೆ. ಧಾರವಾಡ ಕೃಷಿ ವಿವಿಯಿಂದ 14 ಜಿಲ್ಲೆಯ 6219 ಅಭ್ಯರ್ಥಿಗಳು ಈಗಾಗಲೇ ತರಬೇತಿ ಪಡೆದಿದ್ದು 2080 ಮಂದಿ ತರಬೇತಿ ಪಡೆಯುತ್ತಿದ್ದಾರೆ.
ಎಎಪಿ ರಾಜ್ಯದಲ್ಲಿ ಪರ್ಯಾಯ ಶಕ್ತಿಯಾಗಿ ಉದಯವಾಗಲಿದೆ: ಮುಖ್ಯಮಂತ್ರಿ ಚಂದ್ರು
ಏಕೆ ಈ ತರಬೇತಿ?: ಬಹುತೇಕ ಕೃಷಿ ಪರಿಕರ ಮಾರಾಟಗಾರರು ಔಪಚಾರಿಕ ಕೃಷಿ ಶಿಕ್ಷಣ ಪಡೆದಿರುವುದಿಲ್ಲ. ಆದ್ದರಿಂದ ಇವರಿಗೆ ವೈಜ್ಞಾನಿಕ ಜ್ಞಾನ ನೀಡಿದರೆ ರೈತರಿಗೆ ಅಗತ್ಯವಾದ ಮಾಹಿತಿ ನೀಡಲಿದ್ದಾರೆ ಎಂಬ ಉದ್ದೇಶದಿಂದ ಈ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆಯಲಿಚ್ಛಿಸುವವರು ಆಯಾ ಜಿಲ್ಲೆಯ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಒಂದು ವರ್ಷದ ಡಿಪ್ಲೊಮೊ ಕೋರ್ಸ್ ಇದಾಗಿದೆ. 10 ನೇ ತರಗತಿ ತೇರ್ಗಡೆ ಹೊಂದಿರುವವರು ಅರ್ಹರಾಗಿದ್ದಾರೆ. ವರ್ಷದಲ್ಲಿ 40 ದಿನ ತರಗತಿ, 8 ದಿವಸ ಕ್ಷೇತ್ರ ಭೇಟಿ ಒಳಗೊಂಡಿದೆ.
ಏನೇನು ಬೋಧನೆ?: ಕೃಷಿ-ಪರಿಸರ ಸ್ಥಿತಿ, ಮಣ್ಣಿನ ಆರೋಗ್ಯ ನಿರ್ವಹಣೆ, ಮಳೆಯಾಶ್ರಿತ ಕೃಷಿ, ಬೀಜೋತ್ಪಾದನೆ, ನೀರಾವರಿ ತಂತ್ರ ಮತ್ತು ನಿರ್ವಹಣೆ, ಕಳೆ ನಾಶ, ಯಂತ್ರೋಪಕರಣಗಳ ಬಳಕೆ, ಕೀಟ-ರೋಗ ನಿಯಂತ್ರಣ, ಕ್ಷೇತ್ರ ಭೇಟಿ, ಕೃಷಿ ಕಾಯ್ದೆಗಳು, ಕೃಷಿಗೆ ಸಂಬಂಧಿಸಿದ ಯೋಜನೆಗಳು ಸೇರಿದಂತೆ ಹಲವು ವಿಷಯಗಳನ್ನು ತರಬೇತಿಯು ಒಳಗೊಂಡಿದೆ.
ಸಣ್ಣ ನೀರಾವರಿ ಇಲಾಖೆಯಲ್ಲಿ 17 ಕೋಟಿ ಭ್ರಷ್ಟಾಚಾರ: ಜನಾರ್ದನ ರೆಡ್ಡಿ ಹೇಳಿದ್ದೇನು?
ಕರ್ನಾಟಕವು ದೇಸಿ ಡಿಪ್ಲೊಮೊ ತರಬೇತಿಯಲ್ಲಿ ದೇಶದಲ್ಲೇ ಪಾರಮ್ಯ ಸಾಧಿಸಿದೆ. ಇಲ್ಲಿ ಅನುಸರಿಸುವ ತರಬೇತಿ, ಪರೀಕ್ಷಾ ಪದ್ಧತಿಗೆ ಕೇಂದ್ರ ಸರ್ಕಾರ ಮೆಚ್ಚುಗೆ ಸೂಚಿಸಿದೆ.
- ಡಾ.ವಿ.ಎಲ್.ಮಧುಪ್ರಸಾದ್, ಬೆಂಗಳೂರು ಕೃಷಿ ವಿವಿ ವಿಸ್ತರಣಾ ನಿರ್ದೇಶಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ