ಮಂಗಳೂರಿನ ಉಚ್ಚಿಲ ಕಡಲ ತೀರದಲ್ಲಿ ಚೈನಾದ ಹಡಗು ಮುಳುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಬರೋಬ್ಬರಿ ಆರು ತಿಂಗಳ ಬಳಿಕ ಹಡಗಿನ ತೈಲ ತೆರವು ಕಾರ್ಯ ಆರಂಭವಾಗಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಜ.18): ಮಂಗಳೂರಿನ ಉಚ್ಚಿಲ ಕಡಲ ತೀರದಲ್ಲಿ ಚೈನಾದ ಹಡಗು ಮುಳುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಬರೋಬ್ಬರಿ ಆರು ತಿಂಗಳ ಬಳಿಕ ಹಡಗಿನ ತೈಲ ತೆರವು ಕಾರ್ಯ ಆರಂಭವಾಗಿದೆ. ಸರಕು ಹಡಗಿನಲ್ಲಿದ್ದ ಸುಮಾರು 220 ಟನ್ ತೈಲ ತೆರವು ಕಾರ್ಯ ನಡೀತಾ ಇದ್ದು, ಚೀನದಿಂದ ಲೆಬನಾನ್‌ಗೆ 8 ಸಾವಿರ ಟನ್ ತೂಕದ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದ ಹಡಗು ಇದಾಗಿತ್ತು.
2022ರ ಜೂನ್ 21ರಂದು ಉಳ್ಳಾಲದ ಬಟ್ಟಪಾಡಿ ಬಳಿ ಮುಳುಗಿದ್ದ ಪ್ರಿನ್ಸೆಸ್ ಮಿರಾಲ್ ಹಡಗು ಮುಳುಗಡೆಯಾಗಿತ್ತು. ಸದ್ಯ ಗುಜರಾತ್ ಮೂಲದ ಬನ್ಸಲ್ ಎಂಡೆವರ್ಸ್ ಸಂಸ್ಥೆಗೆ ತೈಲ ತೆರವು ಗುತ್ತಿಗೆ ನೀಡಲಾಗಿದೆ. 160 ಟನ್ ಫರ್ನೆಸ್ ಆಯಿಲ್, 60 ಟನ್ ಡೀಸೆಲ್ ಸೇರಿದಂತೆ 220 ಟನ್ ತೈಲ ಇದರಲ್ಲಿದೆ. ಹೋಸ್‌ಪೈಪ್ ಅಳವಡಿಸಿ ವ್ಯಾಕ್ಯೂಂ ಪಂಪ್ ಮೂಲಕ ತೈಲವನ್ನು ಹೊರಕ್ಕೆಳೆಯುವ ಕಾರ್ಯ ಆರಂಭವಾಗಿದೆ.
320 ಟನ್ ಸಾಮರ್ಥ್ಯದ ಬಂಕರ್ ಬಾರ್ಜ್ ಮೂಲಕ ತೈಲವನ್ನು ಪೂರ್ಣ ವರ್ಗಾಯಿಸಿ ಹಳೆಬಂದರಿಗೆ ತರಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಅಕ್ಟೋಬರ್‌ನಲ್ಲಿ ಯುಎಇಗೆ ಸೇರಿದ ಮೊಂಜಾಸಾ ಡಿಎಂಸಿಸಿ ಎಂಬ ಕಂಪೆನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ತನಗೆ ಶಿಪ್ ಬಂಕರಿಂಗ್ ಕಾರ್ಯಕ್ಕಾಗಿ ಬರಬೇಕಾದ 1,71,301 ಅಮೆರಿಕನ್ ಡಾಲರ್ (ಸುಮಾರು 1.39 ಕೋಟಿ ರೂ.) ಮೊತ್ತ ಬಂದಿಲ್ಲ ಎಂದಿತ್ತು. ಅದು ಬರುವವರೆಗೆ ಈ ಹಡಗನ್ನು ತಡೆಹಿಡಿಯುವಂತೆ ಕೋರಿತ್ತು.
'ಯುವ ಸಂಭಾಷಣೆ ಚರ್ಚೆ ವಿತ್ ಕಾಮನ್ ಮ್ಯಾನ್ ಸಿಎಂ': ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ
ಅದನ್ನು ಹೈಕೋರ್ಟ್ ಮಾನ್ಯ ಮಾಡಿದ್ದ ಹಿನ್ನೆಲೆ ದ.ಕ ಜಿಲ್ಲಾಡಳಿತಕ್ಕೆ ಹಿನ್ನೆಡೆಯಾಗಿತ್ತು. ಬಳಿಕ ಜಿಲ್ಲಾಡಳಿತ ಹೈಕೋರ್ಟ್‌ಗೆ ಪರಿಸರ ಮಾಲಿನ್ಯ ಭೀತಿ ಹಿನ್ನೆಲೆ ತೈಲ ತೆರವಿಗೆ ಅರ್ಜಿ ಸಲ್ಲಿಸಿತ್ತು. ಇದೀಗ ತೈಲ ತೆರವಿಗೆ ಹೈಕೋರ್ಟ್ ಅನುಮತಿ ಹಿನ್ನೆಲೆ ತೈಲ ತೆರವು ಆರಂಭವಾಗಿದೆ. ಸುಮಾರು 15 ದಿನಗಳ ಕಾಲ ನಡೆಯಲಿರುವ ತೈಲ ತೆರವು ಕಾರ್ಯಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ ಮತ್ತು ಕೋಸ್ಟ್‌ಗಾರ್ಡ್‌ನಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆಯಲಾಗಿದೆ.