
ಧಾರವಾಡ (ಜ.18): ಮೊಬೈಲ್ ಟವರ್ ಏರಿ ಕುಳಿತಿದ್ದ ವ್ಯಕ್ತಿ ಬಿರಿಯಾನಿ, ಸಿಗರೇಟ್ ಕೊಟ್ಟರೆ ಮಾತ್ರ ಇಳಿಯುವುದಾಗಿ ಡಿಮಾಂಡ್ ಇಡುವ ಮೂಲಕ ಸುಮಾರು ಮೂರು ಗಂಟೆ ರಕ್ಷಣಾ ಸಿಬ್ಬಂದಿಗೆ ಸತಾಯಿಸಿದ ಘಟನೆ ಇಲ್ಲಿನ ಜ್ಯುಬಿಲಿ ವೃತ್ತದ ಬಳಿ ಮಂಗಳವಾರ ಸಂಜೆ ನಡೆದಿದೆ. ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಇಲ್ಲಿನ ಮಾಳಮಡ್ಡಿಯ ಜಾವೇದ್ ಎಂಬಾತ ಈ ಹೈಡ್ರಾಮಾ ನಡೆಸಿದ್ದ. ಸಂಜೆ ಹೊತ್ತಿಗೆ ವ್ಯಕ್ತಿಯೊಬ್ಬ ಟವರ್ ಏರಿದ್ದಾನೆಂಬ ಮಾಹಿತಿ ಅರಿತ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ, ಆತನನ್ನು ಇಳಿಸಲು ಮನವೊಲಿಸಿದ್ದಾರೆ. ಆತ ಬೇಡಿಕೆ ಇಡುತ್ತಲೇ ಅವರನ್ನು ಕಾಡಿದ್ದಾನೆ.
ಬಳಿಕ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲಿಗೆ ಮಾನಸಿಕ ಅಸ್ವಸ್ಥ ಟವರ್ ಏರಿರಬಹುದು ಎಂದು ಶಂಕಿಸಲಾಗಿತ್ತು. ನಂತರ ಆತ ಕಳ್ಳ ಎಂಬುದು ಗೊತ್ತಾಗಿದೆ. ಆತ ರಕ್ಷಣೆಗೆ ಆಗಮಿಸಿದ್ದ ಸಿಬ್ಬಂದಿಗೆ ಕಬ್ಬಿಣದ ಸಲಾಕೆಯಿಂದ ಹೊಡೆಯುವ ಬೆದರಿಕೆ ಸಹ ಒಡ್ಡಿದ್ದ. ಆದಾಗ್ಯೂ ಕೆಳಗಿಳಿಯುವಂತೆ ಮನವೊಲಿಸಿದ್ದಾರೆ. ಆಗ ನಾನು ಕೇಳಿದ್ದನ್ನು ಕೊಟ್ಟರೆ ಮಾತ್ರ ಇಳಿಯುವೆ ಎಂದು ಹೇಳಿದ್ದಾನೆ. ಅವನ ಮಾತಿಗೆ ರಕ್ಷಣಾ ಸಿಬ್ಬಂದಿ ಒಪ್ಪಿದಾಗ ಮೊದಲು ನೀರಿಗೆ ಬೇಡಿಕೆ ಇಟ್ಟಿದ್ದಾನೆ. ನೀರು ಕುಡಿದ ಬಳಿಕ ಆತ ಕೇಳಿದಂತೆ ಬಿರಿಯಾನಿ ಸಹ ತಂದು ಕೊಟ್ಟಿದ್ದಾರೆ.
'ಯುವ ಸಂಭಾಷಣೆ ಚರ್ಚೆ ವಿತ್ ಕಾಮನ್ ಮ್ಯಾನ್ ಸಿಎಂ': ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ
ನಂತರ ಸಿಗರೆಟ್ ಕೊಟ್ಟರೆ ಇಳಿಯುವುದಾಗಿ ಹೇಳಿದ್ದ. ಅದಕ್ಕೂ ಸೈ ಎಂದ ಸಿಬ್ಬಂದಿ ಸಿಗರೆಟ್ ಪೂರೈಸಿದ್ದಾರೆ. ಟವರ್ ಮೇಲೆಯೇ ಒಂದು ಸಿಗರೆಟ್ ಸೇದಿದ್ದಾನೆ. ಇಷ್ಟೆಲ್ಲ ಆದ ಬಳಿಕ ನ್ಯಾಯಾಧೀಶರು ಬಂದರೆ ಮಾತ್ರ ಬರುವುದಾಗಿ ನಾಟಕ ಶುರು ಮಾಡಿದ್ದಾನೆ. ಅವನ ನಾಟಕ ಅರಿತ ಸಿಬ್ಬಂದಿ, ಜಿಲ್ಲಾ ನ್ಯಾಯಾಧೀಶರು ಹಾಗೂ ನಿನ್ನ ಪತ್ನಿ ಬಂದಿದ್ದಾರೆ ಎಂದು ಪುಸಲಾಯಿಸಿದ್ದು, ಅದನ್ನು ನಂಬಿ ಕೆಳಗಿಳಿದಿದ್ದಾನೆ. ಆಗ ವಶಕ್ಕೆ ಪಡೆದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಜಾವೇದ್ ಟವರ್ ಏರಲು ಕಾರಣ ಏನೆಂಬುದು ಪೊಲೀಸ್ ತನಿಖೆಯಿಂದಲೇ ಗೊತ್ತಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ