
ಬೆಂಗಳೂರು (ಆ.4) : ಕರ್ನಾಟಕದ ಸದನದಲ್ಲಿ ಬಹಳ ಕಡಿಮೆ ಬಾರಿ ಅಮಾನತುಗಳಾಗಿವೆ. ಮೊನ್ನೆ ದುರ್ಬೀನು ಹಾಕಿಕೊಂಡು ಹುಡುಕಿದರೆ ಸಿಗುವಷ್ಟುಚಿಕ್ಕ ವಿಷಯಕ್ಕೆ 10 ಬಿಜೆಪಿ ಶಾಸಕರ ಅಮಾನತು ಘಟನೆ ನಡೆದಿದೆ. ಇದು ಅಕ್ಷಮ್ಯ ಕ್ರಮ ಎಂದು ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ಬೆಂಗಳೂರಿನ ಸಿಟಿಜನ್ಸ್ ಫಾರ್ ಡೆಮಾಕ್ರೆಸಿ ವತಿಯಿಂದ ಗುರುವಾರ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ‘ಶಾಸಕರ ಅಮಾನತು ಒಂದು ಚರ್ಚೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕ ವಿಷಯವನ್ನೇ ದೊಡ್ಡ ವಿಷಯ ಮಾಡಿ ಸ್ಪೀಕರ್ ಮತ್ತು ಸರ್ಕಾರ ಶಾಸಕರನ್ನು ಅಮಾನತು ಮಾಡಿದ್ದು ಅಕ್ಷಮ್ಯ. ಇದರಲ್ಲಿ ಮುಖ್ಯಮಂತ್ರಿ, ಸಂಸದೀಯ ವ್ಯವಹಾರ ಸಚಿವರ ಪ್ರಮುಖ ಪಾತ್ರವೂ ಇದೆ. ಇದು ಸದನದ ರಾಜಕೀಯ ದುರ್ಬಳಕೆಗೆ ಸ್ಪಷ್ಟಉದಾಹರಣೆ ಎಂದರು.
ಹೊರಗಿನಿಂದ ಅಲ್ಲ, ಕಾಂಗ್ರೆಸ್ ಒಳಗಿನಿಂದಲೇ ಅಭದ್ರತೆ ನಿರ್ಮಾಣ: ಮಾಜಿ ಸ್ಪೀಕರ್ ಕಾಗೇರಿ
ಸುಗಮ ಕಲಾಪ ನಡೆಯಲು ಆಡಳಿತ ಪಕ್ಷದ ಹೊಣೆಯೂ ಪ್ರಮುಖವಾದುದು. ದೇಶದಲ್ಲಿ ಕಾಂಗ್ರೆಸ್ ಪಕ್ಷ 50-60 ವರ್ಷ ಆಡಳಿತ ಮಾಡಿದೆ. ಪೇಪರ್ ಹರಿದು ಹಾಕಿದ ಚಿಕ್ಕ ಘಟನೆಗೆ ಅಮಾನತಿನ ಶಿಕ್ಷೆ ಕೊಡುವುದು ಸರಿಯಲ್ಲ. ಇದು ವ್ಯವಸ್ಥೆಗೆ ಹೊಡೆತ ನೀಡುತ್ತದೆ. ಊಟಕ್ಕೆ ವಿರಾಮ ಕೊಟ್ಟಿದ್ದರೆ ಘಟನೆಯೇ ನಡೆಯುತ್ತಿರಲಿಲ್ಲ. ಯೋಗೀಶ್ ಭಟ್ ಅವರು ಡೆಪ್ಯುಟಿ ಸ್ಪೀಕರ್ ಇದ್ದಾಗ ಪೇಪರ್‌ವೇಟ್ ಅನ್ನೇ ಅವರತ್ತ ಒಗೆದಿದ್ದರು. ಫೈಲುಗಳನ್ನೇ ಕಿತ್ತೆಸೆದಿದ್ದರು. ಆಗೆಲ್ಲ ಸಸ್ಪೆಂಡ್ ಮಾಡಿದ್ದರೇ? ಇದು ಕ್ಷಮಾರ್ಹವಲ್ಲ. ಹಿರಿಯ ಸಚಿವರು ವಿಪಕ್ಷದವರಿಗೂ ಮಾತಿನ ಅವಕಾಶ ಕೊಡಬೇಕೆಂದು ತಿಳಿಸಬೇಕಿತ್ತು. ಉಗುರು ತುದಿಯಲ್ಲಿ ಹೋಗುವುದನ್ನು ಖಡ್ಗ ತೆಗೆದುಕೊಂಡು ಕತ್ತರಿಸುವುದು ಶೋಭೆ ತರುವ ವಿಚಾರವಲ್ಲ ಎಂದು ಹೇಳಿದರು.
ತಪ್ಪುಗಳಾದಾಗ ಸರಿಪಡಿಸಲು ನೂರೆಂಟು ವಿಧಾನಗಳಿವೆ. ಆ ಬಗ್ಗೆ ಯೋಚಿಸಬೇಕೇ ಹೊರತು ಕಾಲಿಗೆ ಮುಳ್ಳು ಚುಚ್ಚಿದೆ ಎಂದು ಕಾಲನ್ನೇ ತುಂಡರಿಸುವ ವೈದ್ಯಕಿಐ ಪ್ರವೃತ್ತಿ ಜಾರಿಯಾದರೆ, ಅದು ಸಮರ್ಪಕವಲ್ಲ. ಕರ್ನಾಟಕದ ಶಾಸಕ ಅಮಾನತು ಘಟನೆ ಪ್ರಜಾಪ್ರಭುತ್ವ ವಿರೋಧಿ ನಿಲುವು ಎನ್ನದೇ ಬೇರೆ ಹೇಳಲು ಸಾಧ್ಯವಿಲ್ಲ ಎಂದರು.
ಜೇಬುಗಳ್ಳನಿಗೆ ಮರಣ ದಂಡನೆ ಕೊಟ್ಟಂತೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನಪರಿಷತ್ತಿನ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ಸದನದಿಂದ 10 ಶಾಸಕರ ಅಮಾನತು ಮಾಡಿದ್ದು, ಸಭೆಯಿಂದ ಹೊರಕ್ಕೆ ಹಾಕಿದ್ದನ್ನು ನೋಡಿದರೆ, ಅದು ಜೇಬುಗಳ್ಳನಿಗೆ ಮರಣ ದಂಡನೆ ಕೊಟ್ಟಂತೆ ಎಂದು ಹೇಳಿದರು.
ಇವತ್ತಿನ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ವಿಧಾನಸಭೆಯಲ್ಲಿ ಪೈಲ್ವಾನರಂತೆ ತೊಡೆ ತಟ್ಟಿದವರು ಅವರು. ಸಂಸದೀಯ ವ್ಯವಹಾರಗಳ ಸಚಿವರ ನಡೆ ಬೇಸರ ತಂದಿದೆ. ಅವರು ನಿರ್ಣಯ ಮಂಡಿಸಿದ್ದಾರೆ. ಮುಂದಿನ ಬಾರಿ ವಜಾ ಕೂಡ ಮಾಡಬಹುದೇನೋ. ನಾವೇನೂ ಎದೆಗುಂದಬೇಕಿಲ್ಲ. ಕ್ಷುಲ್ಲಕ ರಾಜಕಾರಣದಿಂದ ನಿರಾಶರಾಗದಿರಿ ಎಂದರು.
ಕೊಲೆ ಮಾಡಿದವರಿಗೂ ಯಾಕೆ ಕೊಲೆ ಮಾಡಿದ ಎಂದು ಕೇಳುತ್ತಾರೆ. ಆದಷ್ಟುಕಡಿಮೆ ಅಂದರೆ, ಜೀವಂತ ಇರುವಷ್ಟುದಿನ ಜೈಲಿಗೆ ಹಾಕುತ್ತಾರೆ. ಪ್ರಜಾಪ್ರಭುತ್ವ ಎಂದರೆ ಕಾಂಗ್ರೆಸ್ ಎಂದು ಎಲ್ಲಿದೆ ಸ್ವಾಮಿ ಎಂದು ಕೇಳಿದ ಅವರು, ಪೇಪರ್ ಹರಿದೆಸೆದುದನ್ನಷ್ಟೇ ನೋಡಿದರೆ ಅಪರಾಧ ಎನಿಸುತ್ತದೆ. ಅದರ ಹಿನ್ನೆಲೆ ಗಮನಿಸಬೇಕು. 2009ರ ಡಿಸೆಂಬರ್ 30ರಂದು ಪೇಪರ್‌ವೇಟ್ ಎಸೆದುದ್ದನ್ನೇ ಕ್ಷಮಿಸಿದ್ದರು. ತೊಡೆ ತಟ್ಟಿದ್ದು, ಬಾಗಿಲು ಒದ್ದಿದ್ದು ಮರೆತು ಹೋಗಿದೆಯೇ? ಎಂದರು.
ಎಡಪಂಥೀಯರ ಓಲೈಕೆಗೆ ಶಾಲಾ ಪಠ್ಯ ಬದಲು: ಸಿಎಂ ಸಿದ್ದು ವಿರುದ್ಧ ಕಾಗೇರಿ ಅಸಮಾಧಾನ
ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ತಪ್ಪನ್ನು ತಪ್ಪೆಂದು ಹೇಳದಿದ್ದರೆ ಈಗಾಗಲೇ ಕೆಟ್ಟು ಹೋದ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಹೇಗೆ? ಕೆಟ್ಟವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮೆಲ್ಲರ ಜವಾಬ್ದಾರಿ ಪ್ರಮುಖವಾಗಿದೆ. ಸಾಂವಿಧಾನಿಕ ಸಂಸ್ಥೆ, ಅಂಗಗಳಲ್ಲಿ, ಲೋಕಾಯುಕ್ತದಂತಹ ಸ್ವಾಯತ್ತ ಸಂಸ್ಥೆಗಳಲ್ಲಿ ಕ್ರಮೇಣ ಕುಸಿತ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಬೆಂಗಳೂರಿನ ಸಿಟಿಜನ್ಸ್ ಫಾರ್ ಡೆಮಾಕ್ರೆಸಿಯ ಅಧ್ಯಕ್ಷ ಚಂದ್ರಶೇಖರ್, ಅಜಯ… ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ