ರಾಜ್ಯಾದ್ಯಂತ ಹವಾಮಾನದಲ್ಲಿನ ವ್ಯತ್ಯಾಸದಿಂದ ‘ಮದ್ರಾಸ್ ಐ’ (ಕಂಜಕ್ಟಿವೈಟಿಸ್- ಕಣ್ಣಿನ ಉರಿಯೂತ) ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ.
ಬೆಂಗಳೂರು (ಆ.4) : ರಾಜ್ಯಾದ್ಯಂತ ಹವಾಮಾನದಲ್ಲಿನ ವ್ಯತ್ಯಾಸದಿಂದ ‘ಮದ್ರಾಸ್ ಐ’ (ಕಂಜಕ್ಟಿವೈಟಿಸ್- ಕಣ್ಣಿನ ಉರಿಯೂತ) ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ.
ರಾಜ್ಯದಲ್ಲಿ ಸಾವಿರಾರು ಜನರಿಗೆ ಸೋಂಕು ಉಂಟಾಗಿದೆ. ಕಣ್ಣಿನ ಆಸ್ಪತ್ರೆಗಳಿಗೆ ಸೋಂಕಿನ ಸಮಸ್ಯೆಯಿಂದ ಬರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಸಾರ್ವಜನಿಕರು ಎಚ್ಚರವಹಿಸಬೇಕು. ಸೋಂಕಿತರ ಕಣ್ಣು ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗಿ ಕಾಡುತ್ತಿದ್ದು, ಸೋಂಕಿತರು ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
undefined
ಅಲ್ಲದೆ, ಈ ಬಗ್ಗೆ ವೈದ್ಯರಿಗೂ ಸೂಚನೆ ನೀಡಿರುವ ರಾಜ್ಯ ಅಂಧತ್ವ ನಿವಾರಣಾ ವಿಭಾಗವು, ರಾಜ್ಯದಲ್ಲಿ ಹಲವು ದಿನಗಳಿಂದ ಹವಾಮಾನ ವ್ಯತ್ಯಾಸ ಹಾಗೂ ನಿರಂತರ ಮಳೆಯಿಂದಾಗಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಕಣ್ಣಿನ ಉರಿಯೂತ (ಕಂಜಕ್ಟಿವೈಟಿಸ್) ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸಾರ್ವಜನಿಕರಿಗೆ ಅಗತ್ಯ ಚಿಕಿತ್ಸೆ ನೀಡಲು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದೆ.
ಕಣ್ಣಿನ ಸೋಂಕಿಗೆ ಮನೆ ಮದ್ದು: ಅನಾರೋಗ್ಯಕ್ಕೆ ಹೇಳಿ ಗುಡ್ ಬೈ
ಪಿಂಕ್ ಐ ಅಥವಾ ರೆಡ್ ಐ ಅಂತಲೂ ಹೇಳುವ ಈ ಸೋಂಕು ತೀವ್ರವಾಗಿ ಕಾಡುತ್ತಿದೆ. ಕಂಜಕ್ಟಿವೈಟಿಸ್ (ಮದ್ರಾಸ್) ಎಂಬ ಹೆಸರಿನ ಈ ಸೋಂಕಿನಿಂದಾಗಿ ಕಣ್ಣಿನ ಬಿಳಿ ಭಾಗ ಬಣ್ಣ ಬದಲಾಗುವುದು, ಕಣ್ಣಿನ ರೆಪ್ಪೆಗಳು ಅಂಟಿಕೊಳ್ಳುವುದು, ಉರಿ, ನೀರು ಸೋರುವಂತಹ ಸಮಸ್ಯೆಯಾಗುತ್ತದೆ. ಕೆಲವರಲ್ಲಿ ಸಾಮಾನ್ಯ ಪ್ರಮಾಣದಲ್ಲಿರುವ ಸೋಂಕು ಕೆಲವರಿಗೆ ತೀವ್ರವಾಗಿ ಕಾಡುತ್ತದೆ.
ಏನಿದು ಮದ್ರಾಸ್ ಐ?:
ಒಟ್ಟು ಪ್ರಕರಣಗಳಲ್ಲಿ ಶೇ.90 ರಷ್ಟುಅಡೆನೊವೈರಸ್ ಸೋಂಕಿನಿಂದ ಉಂಟಾಗುತ್ತದೆ. ಮದ್ರಾಸ್ ಐ ಸೋಂಕಿಗೆ ಒಳಗಾದ ಜನರು ತಮ್ಮ ಕಣ್ಣುಗಳಲ್ಲಿ ಕೆಂಪು, ತುರಿಕೆ, ಕಿರಿಕಿರಿ ಮತ್ತು ಒರಟುತವನ್ನು ಅನುಭವಿಸಬಹುದು. ಕಣ್ಣೀರಿನಂತೆಯೇ ಕಣ್ಣುಗಳಿಂದ ವಿಸರ್ಜನೆಯ ಸಮಸ್ಯೆಯನ್ನು ಎದುರಿಸಬೇಕು. ಮಕ್ಕಳಲ್ಲಿ ಈ ಸೋಂಕು ವೇಗವಾಗಿ ಹರಡುತ್ತದೆ. ಈ ರೋಗ ಲಕ್ಷಣಗಳ ತೀವ್ರತೆಯು ಸೌಮ್ಯದಿಂದ ತೀವ್ರವಾಗಬಹುದು. ಹೀಗಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯಬೇಕು.
ಕಟ್ಟೆಚ್ಚರಕ್ಕೆ ವೈದ್ಯರಿಗೆ ಸೂಚನೆ:
ಈ ಬಗ್ಗೆ ವೈದ್ಯರಿಗೂ ಸೂಚನೆ ನೀಡಿದ್ದು, ಕಣ್ಣಿನ ಉರಿ ಊತದ ರೋಗಿಗಳಿಗೆ ವೈದ್ಯರು ನೋವು ನಿವಾರಕ ಮಾತ್ರೆ, ಕಣ್ಣಿನ ಡ್ರಾಫ್ಸ್ ಚಿಕಿತ್ಸೆ ನೀಡುವುದು. ಮೂಗಿನ ಮತ್ತು ಗಂಟಲಿನ ಸೋಂಕು ಇದ್ದರೆ ಅದಕ್ಕೆ ಬೇಕಾದ ಚಿಕಿತ್ಸೆ ನೀಡುವುದು. ಶಸ್ತ್ರಚಿಕಿತ್ಸೆ ಒಳಪಟ್ಟಿರುವ ರೋಗಿಗಳು ಮತ್ತು ಕಣ್ಣಿನ ಉರಿಊತ ಇರುವ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ನೀಡಬೇಕು ಎಂದು ವೈದ್ಯರಿಗೆ ತಿಳಿಸಲಾಗಿದೆ.
ರೋಗ ಲಕ್ಷಣ
ಕಣ್ಣಿನ ಬಿಳಿ ಭಾಗ ಕೆಂಪಾಗುವುದು, ರೆಪ್ಪೆ ಅಂಟಿಕೊಳ್ಳುವುದು, ಕಣ್ಣಿನ ಬಣ್ಣ ಗುಲಾಬಿ ಅಥವಾ ಕೆಂಪಿಗೆ ತಿರುವುದು, ಕಣ್ಣುಗಳಲ್ಲಿ ಉರಿ, ನೋವು ಕಾಣಿಸುವುದು. ಕಣ್ಣುಗಳಿಂದ ನಿರಂತರ ನೀರು ಸೋರುವಿಕೆ, ಕಣ್ಣುಗಳು ಊದಿಕೊಳ್ಳುವುದು.
ಮುನ್ನೆಚ್ಚರಿಕಾ ಕ್ರಮ
ಜನದಟ್ಟಣೆ ಪ್ರದೇಶಗಳಿಗೆ ಹೋಗಬಾರದು. ಪದೇ ಪದೇ ಕಣ್ಣುಗಳನ್ನು ಮುಟ್ಟಬಾರದು. ಸೋಪ್‌ನಲ್ಲಿ ಆಗಾಗ್ಗೆ ಕೈ ತೊಳೆಯಬೇಕು ಕಣ್ಣಿನ ಉರಿ ಊತ ಬಂದ ವ್ಯಕ್ತಿಯಿಂದ ನಿಕಟ ಸಂಪರ್ಕ ಹೊಂದಬಾರದು. ಅವರು ಬಳಸುವ ಟವೆಲ್, ತೆಲೆದಿಂಬಿನಂತಹ ವಸ್ತುಗಳನ್ನು ಬಳಸಬಾರದು.
ಕಣ್ಣಿನ ಸೋಂಕಿಗೆ ಮನೆ ಮದ್ದು: ಅನಾರೋಗ್ಯಕ್ಕೆ ಹೇಳಿ ಗುಡ್ ಬೈ
ಕಂಜಕ್ಟಿವೈಟಿಸ್ (ಮದ್ರಾಸ್) ಸೋಂಕಿತರು ಏನು ಮಾಡಬೇಕು?
ಕಣ್ಣುರಿ, ಕಣ್ಣಿನಲ್ಲಿ ನೀರು, ತುರಿಕೆ, ಕಣ್ಣು ಕೆಂಪಾಗುವುದು, ಕಣ್ಣಿನ ಊತ ಸೇರಿ ವಿವಿಧ ಸಮಸ್ಯೆಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಕಣ್ಣುಗಳ ಆಯಾಸ ಕಡಿಮೆ ಮಾಡಲು ಟಿವಿ ಹಾಗೂ ಮೊಬೈಲ್ ವೀಕ್ಷಣೆ ಕಡಿಮೆ ಮಾಡಬೇಕು. ಸೋಂಕು ಹೊಂದಿದ್ದರೆ ಹೊರಗಡೆ ಸಂಚರಿಸಬಾರದು. ಬೇರೊಬ್ಬರಿಗೆ ಸೋಂಕು ಹರಡದಂತೆ ಎಚ್ಚರವಹಿಸಲು ಕನ್ನಡಕ ಧರಿಸಬೇಕು. ವೈದ್ಯರ ಸಲಹೆ ಪಡೆದು ಕಣ್ಣಿನ ಔಷಧಗಳನ್ನು ಬಳಸಬೇಕು. ಸೋಂಕನ್ನು ನಿರ್ಲಕ್ಷ್ಯ ಮಾಡಬಾರದು. ಡ್ರಾಫ್ಸ್‌ಗಳನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳಬಾರದು.