ಧ್ವನಿ ಇಲ್ಲದವರಿಗೆ ಧ್ವನಿ ನೀಡುವುದೇ ಪತ್ರಿಕಾ ವೃತ್ತಿಯ ಉದ್ದೇಶ: ಸಿದ್ದರಾಮಯ್ಯ

Published : Jul 25, 2023, 03:40 AM IST
ಧ್ವನಿ ಇಲ್ಲದವರಿಗೆ ಧ್ವನಿ ನೀಡುವುದೇ ಪತ್ರಿಕಾ ವೃತ್ತಿಯ ಉದ್ದೇಶ: ಸಿದ್ದರಾಮಯ್ಯ

ಸಾರಾಂಶ

ಸಾಮಾಜಿಕ ಜವಾಬ್ದಾರಿ ಪತ್ರಕರ್ತರಿಗೆ ಮಾತ್ರವಲ್ಲದೆ ರಾಜಕಾರಣಿಗಳು, ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೂ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು (ಜು.25): ಸಾಮಾಜಿಕ ಜವಾಬ್ದಾರಿ ಪತ್ರಕರ್ತರಿಗೆ ಮಾತ್ರವಲ್ಲದೆ ರಾಜಕಾರಣಿಗಳು, ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೂ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಪತ್ರಿಕಾ ವೃತ್ತಿಯ ಆಶಯಕ್ಕೆ ತಕ್ಕಂತೆ ನಾವು ನಡೆದುಕೊಳ್ಳುತ್ತಿದ್ದೇವಾ ಅಥವಾ ಇಲ್ಲವಾ ಎಂಬುದನ್ನು ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.

ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರು ಪ್ರೆಸ್‌ಕ್ಲಬ್‌ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಪತ್ರಕರ್ತರ ಸಾಮಾಜಿಕ ಜವಾಬ್ದಾರಿ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮಗಾಂಧಿ, ಅಂಬೇಡ್ಕರ್‌ ಅವರೂ ಪತ್ರಕರ್ತರಾಗಿ ಪತ್ರಿಕಾ ವೃತ್ತಿಗೆ ಮಾದರಿ ರೂಪಿಸಿಕೊಟ್ಟಿದ್ದಾರೆ. ಧ್ವನಿ ಇಲ್ಲದವರಿಗೆ ಧ್ವನಿ ನೀಡುವುದೇ ಪತ್ರಿಕಾ ವೃತ್ತಿಯ ಉದ್ದೇಶ, ಆಶಯ, ಜವಾಬ್ದಾರಿಯಾಗಿದೆ. ಆದರೆ ನಾವು ಹೀಗೆ ನಡೆದುಕೊಳ್ಳುತ್ತಿದ್ದೇವೆಯೇ ಎಂದು ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಮೊಬೈಲ್‌ ನೋಡಿಕೊಂಡೇ ಬಸ್‌ ಚಲಾಯಿಸಿದ ಚಾಲಕ: ವೀಡಿಯೋ ವೈರಲ್‌

ಸಾಮಾಜಿಕ ಜವಾಬ್ದಾರಿ ಪತ್ರಕರ್ತರಿಗೆ ಮಾತ್ರ ಇದ್ದರೆ ಸಾಲದು. ರಾಜಕಾರಣಿಗಳು, ಸಾರ್ವಜನಿಕ ಕ್ಷೇತ್ರದಲ್ಲಿರುವ ಎಲ್ಲರಿಗೂ ಇದ್ದರೆ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ. ಸಮಾಜದಲ್ಲಿ ಸಾಮಾಜಿಕ ಅಸಮಾನತೆ ಹಿಂದಿನಿಂದಲೂ ಬಂದಿದ್ದು ಬಹಳಷ್ಟುಮಂದಿ ಆರ್ಥಿಕ, ಸಾಮಾಜಿಕ ಅಸಮಾನತೆ ಮತ್ತು ತಾರತಮ್ಯಕ್ಕೆ ಬಲಿಯಾಗಿದ್ದಾರೆ. ಇದನ್ನು ನಿವಾರಿಸಲು ರಾಜ್ಯ ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದ ಅವರು, ನನ್ನ ಬಗ್ಗೆ ಸುಳ್ಳು ಸುದ್ದಿ ಬರೆದ ಯಾರನ್ನೂ ನಾನು ಯಾಕಪ್ಪಾ ಹೀಗೆ ಬರೆದಿದ್ದೀಯಾ ಎಂದು ಪ್ರಶ್ನಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿರಿಯ ಪತ್ರಕರ್ತೆ ಡಾ.ಆರ್‌.ಪೂರ್ಣಿಮಾ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರೀಯತೆ ಮೂಡಿಸುವ ಕಾರ್ಯವನ್ನು ಪತ್ರಿಕೆಗಳು ಯಶಸ್ವಿಯಾಗಿ ನಿರ್ವಹಿಸಿದವು. ನಂತರ ಭಾರತದಲ್ಲಿ ಪತ್ರಿಕೋದ್ಯಮವು ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸಿದೆ. ಆದರೆ ಇಂದಿಗೂ ಸಂಪ್ರದಾಯದ ಹೆಸರಿನಲ್ಲಿ ಋುತುಚಕ್ರದ ಸಮಯದಲ್ಲಿ ಮಹಿಳೆಯರನ್ನು ಊರಿನಿಂದ ಹೊರಗೆ ಕಳುಹಿಸುವ ಅನಾಗರಿಕ ಪದ್ಧತಿ ಸಮಾಜದಲ್ಲಿ ಜಾರಿಯಲ್ಲಿದ್ದು, ಇನ್ನಷ್ಟುಪರಿಣಾಮಕಾರಿಯಾಗಿ ಮಾಧ್ಯಮಗಳು ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಡಿ.ಉಮಾಪತಿ ಮಾತನಾಡಿ, ಪ್ರಶ್ನೆ ಕೇಳುವುದನ್ನೇ ಪತ್ರಕರ್ತರು ಮರೆತಿದ್ದಾರೆ. ಪ್ರಶ್ನೆಗಳ ಕೊಲೆಯಾಗಿದೆ. ಪತ್ರಿಕೋದ್ಯಮ ಎತ್ತ ಸಾಗುತ್ತಿದೆ ಎಂಬ ಬಗ್ಗೆ ವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದೆ. ಸಂಘಗಳು ಸನ್ಮಾನ ಮಾಡುವಾಗ ಮಹಿಳೆಯರನ್ನೂ ಪರಿಗಣಿಸಬೇಕು. ಅರ್ಧ ನಾರೀಶ್ವರನ ಪರಿಕಲ್ಪನೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

‘ಕನ್ನಡಪ್ರಭ’ದ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಮಾತನಾಡಿ, ಸಾಮಾಜಿಕ ಹೊಣೆಗಾರಿಕೆಯನ್ನು ಬಿಟ್ಟು ಮಾಧ್ಯಮ ಇರಲು ಸಾಧ್ಯವೇ ಇಲ್ಲ. ಸತ್ಯ ಎತ್ತಿ ಹಿಡಿಯುವುದು ಪತ್ರಕರ್ತರ ಮೊಟ್ಟಮೊದಲ ಆದ್ಯತೆ ಆಗಬೇಕು. ಎಡಪಂಥೀಯ, ಬಲಪಂಥೀಯ ಧೋರಣೆಯಿಂದಾಗ ಸತ್ಯಕ್ಕೆ ಇಂದು ಎರಡು ಮುಖ ಕಾಣಿಸುತ್ತಿದೆ. ಇವೆರಡರ ನಡುವಿನ ಧೋರಣೆ ಅನುಸರಿಸಬೇಕು. ಜರ್ನಲಿಸಂ ಅನ್ನು ಪತ್ರಿಕೋದ್ಯಮ ಎಂದು ಕರೆಯಲಾಗುತ್ತಿದ್ದು, ನಮ್ಮನ್ನು ನಿಯಂತ್ರಿಸುತ್ತಿದೆ. ಆದರೆ ಇದು ಪತ್ರಿಕಾ ಧರ್ಮ ಆಗಬೇಕಿತ್ತು. ಸುಳ್ಳು ಸುದ್ದಿಗಳ ಹಾವಳಿ ಇಂದು ಹೆಚ್ಚಾಗಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮ ಶ್ಲಾಘನೀಯ. ಸುಳ್ಳು ಸುದ್ದಿ ತಡೆಗಟ್ಟುವುದು ಮುಖ್ಯವಾಹಿನಿ ಪತ್ರಿಕೋದ್ಯಮದ ಹೊಣೆಗಾರಿಕೆಯೂ ಹೌದು ಎಂದು ಅವರು ಹೇಳಿದರು.

ಅನುದಾನಕ್ಕೆ ಕೈಯೊಡ್ಡಬೇಡಿ- ರಾಮಯ್ಯ: ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಪಿ.ರಾಮಯ್ಯ ಮಾತನಾಡಿ, ಮಾಧ್ಯಮಗಳು ವಸ್ತುನಿಷ್ಠವಾಗಿ ವರದಿ ಮಾಡುತ್ತೇವೆ ಎಂಬ ಸಂಕಲ್ಪ ತೊಡುವ ಕಾಲ ಈಗ ಬಂದಿದೆ. ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು. ಸರ್ಕಾರದ ಅನುದಾನಕ್ಕೆ ಪತ್ರಕರ್ತರ ಸಂಘಟನೆಗಳು ಕೈಯೊಡ್ಡಬಾರದು. ಎಲ್ಲರೂ ಸೇರಿ 30 ಕೋಟಿ ರುಪಾಯಿ ಸಂಗ್ರಹಿಸಿ ಇದರಿಂದ ಬರುವ ಬಡ್ಡಿ ಹಣವನ್ನು ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಬಳಸಬೇಕು ಎಂದು ಸಲಹೆ ನೀಡಿದರು.

ಕೆಆರ್‌ಎಸ್‌ ಜಲಾಶಯದ ಒಳಹರಿವಿನಲ್ಲಿ ಅಲ್ಪಪ್ರಮಾಣದ ಹೆಚ್ಚಳ

‘ಕನ್ನಡಪ್ರಭ’ದ ಸಮನ್ವಯ ಮತ್ತು ವಿಶೇಷ ಯೋಜನೆಯ ಸಂಪಾದಕ ಬಿ.ವಿ.ಮಲ್ಲಿಕಾರ್ಜುನಯ್ಯ ಸೇರಿದಂತೆ ಹಿರಿಯ ಪತ್ರಕರ್ತರಾದ ಆರ್‌.ಪಿ.ಜಗದೀಶ್‌, ಅರಕೆರೆ ಜಯರಾಂ, ಸಾರಂಗ ಪಾಣಿ, ಸಿದ್ದರಾಜು ಮತ್ತಿತರರನ್ನು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸನ್ಮಾನಿಸಿದರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌, ವಾರ್ತಾ ಇಲಾಖೆ ಆಯುಕ್ತ ಡಾ.ಹೇಮಂತ್‌ ಎಂ.ನಿಂಬಾಳ್ಕರ್‌, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರೆಸ್‌ಕ್ಲಬ್‌ ಅಧ್ಯಕ್ಷ ಆರ್‌.ಶ್ರೀಧರ್‌, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!