ಕರ್ನಾಟಕದ ಗಡಿಗೆ ಹೊಂದಿಕೊಂಡು ಗೋವಾದಲ್ಲಿರುವ ಮಹದಾಯಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿ 3 ತಿಂಗಳೊಳಗೆ ಅಧಿಸೂಚನೆ ಹೊರಡಿಸುವಂತೆ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಸೋಮವಾರ ಗೋವಾ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪಣಜಿ/ ಹುಬ್ಬಳ್ಳಿ (ಜು.25): ಕರ್ನಾಟಕದ ಗಡಿಗೆ ಹೊಂದಿಕೊಂಡು ಗೋವಾದಲ್ಲಿರುವ ಮಹದಾಯಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿ 3 ತಿಂಗಳೊಳಗೆ ಅಧಿಸೂಚನೆ ಹೊರಡಿಸುವಂತೆ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಸೋಮವಾರ ಗೋವಾ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದರಿಂದಾಗಿ, ಕುಡಿಯುವ ನೀರಿಗಾಗಿ ಕರ್ನಾಟಕ ಕೈಗೆತ್ತಿಕೊಳ್ಳಲು ಯತ್ನಿಸುತ್ತಿರುವ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗೆ ಇನ್ನೊಂದು ವಿಘ್ನ ಎದುರಾದಂತಾಗಿದೆ.
ಈಗಾಗಲೇ ನ್ಯಾಯಾಧಿಕರಣದ ತೀರ್ಪಿನಂತೆ ಮಹದಾಯಿ ಕಣಿವೆಯಲ್ಲಿ ತನ್ನ ಪಾಲಿನ ನೀರಿನ ಬಳಕೆಗೆ ಕರ್ನಾಟಕ ಸರ್ಕಾರ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗೆ ಗೋವಾ ಸರ್ಕಾರ ತಕರಾರು ಮಾಡುತ್ತಾ ಬಂದಿದೆ. ಜೊತೆಗೆ, ಕೇಂದ್ರ ಪರಿಸರ ಸಚಿವಾಲಯದ ಅನುಮತಿ ಕೂಡ ಇನ್ನೂ ಸಿಕ್ಕಿಲ್ಲ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿ 11 ತಾಲೂಕು ಕೇಂದ್ರ ಹಾಗೂ 36 ಗ್ರಾಮಗಳ ಕುಡಿಯುವ ನೀರಿಗಾಗಿ 7.5 ಟಿಎಂಸಿ ನೀರು ಬಳಕೆ ಮಾಡಿಕೊಳ್ಳುವ ಕರ್ನಾಟಕದ ಪ್ರಯತ್ನ ಕುಂಟುತ್ತಾ ಸಾಗಿದೆ. ಇದೀಗ ಮಹದಾಯಿ ಕಣಿವೆಯಲ್ಲೇ ಬರುವ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿದರೆ, ಅದರಲ್ಲಿ ಕರ್ನಾಟಕದ ಪಶ್ಚಿಮ ಘಟ್ಟದ ಕೆಲ ಭಾಗಗಳು ಮತ್ತು ಉದ್ದೇಶಿತ ಕಳಸಾ-ಬಂಡೂರಾ ನಾಲಾ ಯೋಜನೆಯ ಪ್ರದೇಶವೂ ಬರುವುದರಿಂದ ಮಹದಾಯಿ ಯೋಜನೆಗೆ ಅಡ್ಡಿಯಾಗುವ ಸಾಧ್ಯತೆಯಿದೆ.
ಮೊಬೈಲ್ ನೋಡಿಕೊಂಡೇ ಬಸ್ ಚಲಾಯಿಸಿದ ಚಾಲಕ: ವೀಡಿಯೋ ವೈರಲ್
ಎನ್‌ಜಿಒ ಸಲ್ಲಿಸಿದ್ದ ಪಿಐಎಲ್: ಗೋವಾ ಫೌಂಡೇಶನ್ ಎಂಬ ಸ್ವಯಂಸೇವಾ ಸಂಸ್ಥೆಯು, ‘ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಈ ಹಿಂದೆ ವಿನಂತಿಸಿದಂತೆ ರಾಜ್ಯದಲ್ಲಿ ಹುಲಿಗಳು ಹೆಚ್ಚಿರುವ ಮಹದಾಯಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ವಲಯ ಎಂದು ಘೋಷಿಸಬೇಕು. ಈ ಮೂಲಕ ಹುಲಿ ಬೇಟೆಗೆ ಕಡಿವಾಣ ಹಾಕಿ ಅವುಗಳ ರಕ್ಷಣೆ ಮಾಡಬೇಕು’ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿತ್ತು. ಇದನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಮನ್ನಿಸಿ, ಹುಲಿ ರಕ್ಷಿತಾರಣ್ಯ ಘೋಷಣೆ ಮಾಡಬೇಕೆಂದು ಸೋಮವಾರ ಗೋವಾಕ್ಕೆ ನಿರ್ದೇಶನ ನೀಡಿದೆ. ಆದರೆ ಹುಲಿ ಅರಣ್ಯ ಘೋಷಣೆಗೆ ಈ ಹಿಂದೆ ಸಮ್ಮತಿ ನೀಡಲು ನಿರಾಕರಿಸಿದ್ದ ಗೋವಾ ಸರ್ಕಾರ, ಈ ಆದೇಶವನ್ನು ಸುಪ್ರೀಂಕೋರ್ಟಲ್ಲಿ ಪ್ರಶ್ನಿಸಲಿದೆ ಎಂದು ಗೋವಾದ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.
ಕೋರ್ಟ್ ಹೇಳಿದ್ದೇನು?: 3 ತಿಂಗಳೊಳಗೆ ಮಹದಾಯಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕು. ಅಭಯಾರಣ್ಯದಲ್ಲಿ ಅರಣ್ಯ ಗಾರ್ಡ್‌ಗಳು ಹಾಗೂ ಫಾರೆಸ್ಟ್ ವಾಚರ್‌ಗಳನ್ನು ಒಳಗೊಂಡ ಬೇಟೆ ತಡೆ ಕ್ಯಾಂಪ್‌ಗಳನ್ನು ಸ್ಥಾಪನೆ ಮಾಡಬೇಕು. ಕ್ಯಾಂಪ್‌ಗಳು 6 ತಿಂಗಳೊಳಗೆ ಸ್ಥಾಪನೆ ಆಗಬೇಕು. ಹುಲಿ ಸಂರಕ್ಷಿತ ಅರಣ್ಯದಲ್ಲಿ ಯಾವುದೇ ಒತ್ತುವರಿ ಆಗಕೂಡದು. ಇನ್ನು ಈಗಾಗಲೇ ಅರಣ್ಯದಲ್ಲಿ ವಾಸಿಸುತ್ತಿರುವ ಆದಿವಾಸಿಗಳು ಹಾಗೂ ಪರಿಶಿಷ್ಟಪಂಗಡದವರ ಹಕ್ಕು ಹಾಗೂ ಕ್ಲೇಮ್‌ಗಳನ್ನು 12 ತಿಂಗಳೊಳಗೆ ಇತ್ಯರ್ಥಗೊಳಿಸಬೇಕು ಎಂದು ಕೋರ್ಟ್ ತಾಕೀತು ಮಾಡಿದೆ. 90 ಪುಟದ ಆದೇಶ ನೀಡುವಾಗ ಮಹಾಭಾರತದ ಸಾಲು ಉಲ್ಲೇಖಿಸಿದ ಪೀಠ, ‘ಅರಣ್ಯ ಇದ್ದರೆ ಹುಲಿಗಳ ಬೇಟೆ ನಡೆಯುತ್ತದೆ. ಹುಲಿ ಇಲ್ಲದಿದ್ದರೆ ಅರಣ್ಯ ನಾಶ ಆಗುತ್ತದೆ. ಹುಲಿಗಳು ಅರಣ್ಯ ರಕ್ಷಿಸುತ್ತವೆ. ಅರಣ್ಯಗಳು ಹುಲಿಗಳನ್ನು ರಕ್ಷಿಸುತ್ತವೆ’ ಎಂದರು.
ಹಿಂದೇಟು ಹಾಕಿದ್ದ ಸರ್ಕಾರ: ಮಹದಾಯಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸುವ ಸಾಧ್ಯತೆಯನ್ನು ಗೋವಾ ಸರ್ಕಾರವು ಕೆಲವು ತಿಂಗಳ ಹಿಂದೆ ನಿರಾಕರಿಸಿತ್ತು. ಅಲ್ಲದೆ, ರಾಜ್ಯ ವನ್ಯಜೀವಿ ಮಂಡಳಿಯು ಕೂಡ ಹುಲಿ ಸಂರಕ್ಷಿತ ವಲಯದ ಘೋಷಣೆ ವಿರುದ್ಧ ನಿರ್ಣಯ ಕೈಗೊಂಡಿತ್ತು. ಆದರೆ ಸರ್ಕಾರದ ಈ ನಿಲುವಿಗೆ ವಿಪಕ್ಷಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಸರ್ಕಾರದ ವಿರೋಧ ಏಕೆ?: ಗೋವಾ ಒಂದು ಚಿಕ್ಕ ರಾಜ್ಯ. ಇಲ್ಲಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಆದರೆ ಇರುವ ಚಟುವಟಿಕೆಗೆ ತುಂಬಾ ತೊಂದರೆ ಆಗುತ್ತದೆ. ಮೇಲಾಗಿ ಇಲ್ಲಿ ಹುಲಿಗಳು ಶಾಶ್ವತವಾಗಿ ಇರುವುದಿಲ್ಲ. ಅಕ್ಕಪಕ್ಕದ ರಾಜ್ಯಗಳ ಅರಣ್ಯಗಳಿಗೂ ಹೋಗಿ-ಬಂದು ಮಾಡುತ್ತಿರುತ್ತವೆ. ಹೀಗಾಗಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಅಗತ್ಯವಿಲ್ಲ ಎಂಬುದು ಗೋವಾ ಸರ್ಕಾರ ಹಾಗೂ ಬಿಜೆಪಿ ಒಂದು ದಶಕದಿಂದ ಮಾಡುತ್ತಿರುವ ವಾದ ಆಗಿದೆ.
ವಿಪಕ್ಷ ಸ್ವಾಗತ: ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಗೋವಾ ವಿಧಾನಸಭೆ ವಿಪಕ್ಷ ನಾಯಕ ಯೂರಿ ಅಲೆಮಾವೊ, ಹೈಕೋರ್ಟ್ ಆದೇಶವು ದೊಡ್ಡ ಪರಿಣಾಮಗಳನ್ನು ಹೊಂದಿದೆ. ಮಹದಾಯಿಯನ್ನು ಕೇಂದ್ರ ಸರ್ಕಾರ ಆಗಲಿ, ರಾಜ್ಯ ಸರ್ಕಾರ ಆಗಲಿ ರಕ್ಷಿಸಿಲ್ಲ. ಆದರೆ ನಮ್ಮ ವನ್ಯಜೀವಿಗಳು ಮತ್ತು ಮಹದಾಯಿ ನದಿಯನ್ನು ರಕ್ಷಿಸಿರುವುದು ನ್ಯಾಯಾಲಯ ಎಂದು ಹೇಳಿದ್ದಾರೆ.
ಕರ್ನಾಟಕಕ್ಕೆ ಆತಂಕ ಏಕೆ?: ಉದ್ದೇಶಿತ ಮಹದಾಯಿ ವನ್ಯಜೀವಿ ಅಭಯಾರಣ್ಯ ಗೋವಾದ ಈಶಾನ್ಯ ಭಾಗದಿಂದ ಮಹಾರಾಷ್ಟ್ರ, ಕರ್ನಾಟಕ ಪ್ರದೇಶದ ಪಶ್ಚಿಮ ಘಟ್ಟದಲ್ಲಿನ 208 ಚದರ ಕಿ.ಮೀ. ವಿಸ್ತಾರ ವ್ಯಾಪ್ತಿ ಹೊಂದಿದೆ. ಅದರಲ್ಲಿ ‘ಭೀಮಗಡ ರಾಷ್ಟ್ರೀಯ ಹುಲಿ ಸಂರಕ್ಷಿತ ಅಭಯಾರಣ್ಯ’ವೂ ಸೇರಿ ಕರ್ನಾಟಕದ ಉದ್ದೇಶಿತ ಕಳಸಾ-ಬಂಡೂರಾ ಯೋಜನೆಯ ಪ್ರದೇಶವೂ ಇದೆ. ಇದನ್ನು ಹುಲಿ ರಕ್ಷಿತಾರಣ್ಯ ಎಂದು ಘೋಷಿಸಿದರೆ ಅದರ ನಿಯಮದಂತೆ ಈ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಅನುಮತಿ ಸಿಗುವುದಿಲ್ಲ.
ಹುಲಿ ಅರಣ್ಯದಿಂದ ಮಹದಾಯಿ ಸ್ಕೀಂಗೆ ಬ್ರೇಕ್: ‘ಮಹದಾಯಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸುವುದರಿಂದ ಕರ್ನಾಟಕವು ಮಹದಾಯಿ ನದಿಯಿಂದ ನೀರನ್ನು ತಿರುಗಿಸುವುದನ್ನು ತಡೆಯುತ್ತದೆ’ ಎಂದು ಗೋವಾ ಎನ್‌ಜಿಒಗಳು ಹೇಳಿವೆ. ಈಗಾಗಲೇ ಕರ್ನಾಟಕದ ಮಹದಾಯಿ (ಕಳಸಾ-ಬಂಡೂರಿ ತಿರುವು) ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ವಿವಾದ ಸುಪ್ರೀಂ ಕೋರ್ಟಿನಲ್ಲಿ ಇರುವ ಕಾರಣ ಕರ್ನಾಟಕಕ್ಕೆ ಸರಾಗವಾಗಿ ಯೋಜನೆ ಕೈಗೆತ್ತಿಕೊಳ್ಳಲು ಆಗುತ್ತಿಲ್ಲ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಯೋಜನೆಗೆ ಗೋವಾ ಸರ್ಕಾರದ ತೀವ್ರ ವಿರೋಧ ಇದೆ. ನದಿ ತಿರುವಿನಿಂದ ಗೋವಾದಲ್ಲಿ ಹರಿಯುವ ಮಹದಾಯಿ ನದಿ ಬರಡಾಗುತ್ತದೆ ಎಂಬುದು ಪ್ರಮೋದ್ ಸಾವಂತ್ ಸರ್ಕಾರದ ಆತಂಕ.
ಭದ್ರಾ ಮೇಲ್ದಂಡೆ ಶೀಘ್ರ ಪೂರ್ಣಗೊಳಿಸುವುದೇ ನಮ್ಮ ಗುರಿ: ಸಚಿವ ಡಿ.ಸುಧಾಕರ್
ಏನಿದು ಹೊಸ ಸಮಸ್ಯೆ?
- ಮಹದಾಯಿ ಕಣಿವೆಯನ್ನು ಹುಲಿ ಸಂರಕ್ಷಿತ ಅರಣ್ಯವೆಂದು ಘೋಷಿಸಲು ಕೋರಿ ಪಿಐಎಲ್ ಸಲ್ಲಿಸಿದ್ದ ಎನ್‌ಜಿಒ
- ಅದರ ವಿಚಾರಣೆ ನಡೆಸಿ, 3 ತಿಂಗಳಲ್ಲಿ ಹುಲಿ ಸಂರಕ್ಷಿತ ಅರಣ್ಯ ಘೋಷಿಸಲು ಬಾಂಬೆ ಹೈಕೋರ್‌್ಟನಿಂದ ಆದೇಶ
- ಈಗಾಗಲೇ ಗೋವಾದ ವಿರೋಧ, ಪರಿಸರ ಇಲಾಖೆ ಅನುಮತಿ ಸಿಗದೆ ಕುಂಟುತ್ತಿರುವ ಮಹದಾಯಿ ಯೋಜನೆ
- ಹುಲಿ ಸಂರಕ್ಷಿತ ಅರಣ್ಯ ಘೋಷಣೆಯಾದರೆ ಕರ್ನಾಟಕದಲ್ಲಿರುವ ಪಶ್ಚಿಮ ಘಟ್ಟದ ಕೆಲ ಭಾಗವೂ ಅದರ ವ್ಯಾಪ್ತಿಗೆ
- ಒಟ್ಟಾರೆ 208 ಚ.ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣ ಚಟುವಟಿಕೆ ನಿಷೇಧ: ಆಗ ನಾಲಾ ತಿರುವು ಯೋಜನೆ ಕಷ್ಟ
- ಹುಲಿ ಸಂರಕ್ಷಿತ ಅರಣ್ಯ ಘೋಷಣೆಗೆ ಗೋವಾ ಸರ್ಕಾರದಿಂದಲೂ ವಿರೋಧ: ಇದೊಂದೇ ಕರ್ನಾಟಕಕ್ಕೆ ಆಶಾಕಿರಣ