
ತುಮಕೂರು: ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಇಂದಿನ ಸೋಮವಾರದ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ 32,218ಕ್ಕೆ ಟೆಂಡರ್ ಆಗಿರುವುದು ಈವರೆಗಿನ ಕೊಬ್ಬರಿ ಬೆಲೆಯಲ್ಲಿ ಇತಿಹಾಸ ದಾಖಲಿಸುವ ಬೆಲೆ ಬಂದಿದೆ ಎಂಬ ಸಂತಸದಲ್ಲಿ ಕೊಬ್ಬರಿ ಬೆಳೆಗಾರರು ಹಾಗೂ ರೈತರು ಖುಷಿಪಡುತ್ತಿರುವುದು ಕಂಡು ಬರುತ್ತಿದೆ.
2024 ರ ಮದ್ಯಭಾಗದಿಂದ ನಿಧಾನವಾಗಿ ಕೊಬ್ಬರಿ ಬೆಲೆಯಲ್ಲಿ ಚೇತರಿಕೆ ಕಂಡುಬಂದು ಕಳೆದ ಗುರುವಾರದ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ರು. 30830 ದಾಖಲಿಸಿದ್ದು ಬೆಳೆಗಾರರಲ್ಲಿ ತುಸು ಮಂದಹಾಸ ಮೂಡಿಸಿದ್ದ ಬೆನ್ನಲ್ಲೇ, ಸೋಮವಾರದ ಹರಾಜು ರು. 32,218 ಸಾವಿರ ಮುಟ್ಟುವ ಮೂಲಕ ಈವರೆಗಿನ ಕೊಬ್ಬರಿ ಬೆಲೆಯಲ್ಲಿ ಇತಿಹಾಸ ದಾಖಲಿಸುವ ಸಂತಸದಲ್ಲಿ ಕೊಬ್ಬರಿ ಬೆಳೆಗಾರರು ಹಾಗೂ ರೈತರು ಸಂತಸದಲ್ಲಿರುವುದು ಕಂಡು ಬರುತ್ತಿದೆ.
ತಿಪಟೂರು ಮಾರುಕಟ್ಟೆಯಲ್ಲಿ ದೊರೆಯುವ ವಿಶಿಷ್ಟಗುಣ ಹೊಂದಿರುವ ಅಪರೂಪದ ಸಿಹಿ ಕೊಬ್ಬರಿಯು ತನ್ನದೇ ಆದ ವಿಶೇಷ ಗುಣಗಳಿಂದ ದೇಶ-ವಿದೇಶಗಳಲ್ಲಿ ಪ್ರಸಿದ್ದಿಯಾಗಿದೆ. ಕೊಬ್ಬರಿ ವಹಿವಾಟಿನ ಇತಿಹಾಸದಲ್ಲಿ ಯಾವತ್ತೂ ಕ್ವಿಂಟಾಲ್ ಕೊಬ್ಬರಿ ಬೆಲೆ ರು. 20 ಸಾವಿರ ದಾಟಿಲ್ಲದಿರುವ ಬಗ್ಗೆ ರೈತರಲ್ಲಿ ಆಗಾಗ್ಗೆ ಚರ್ಚೆ ಉಂಟುಮಾಡುತ್ತಿತ್ತು. ಏಳೆಂಟು ವರ್ಷಗಳ ಹಿಂದೆ ಒಮ್ಮೆ 18 ಸಾವಿರದ ಸನಿಹಕ್ಕೆ ಬಂದಿದ್ದ ಬೆಲೆ ನಂತರ ಹಠಾತ್ ಕುಸಿದು 2023ರಲ್ಲಿ 8-10ಸಾವಿರದ ಆಜುಬಾಜಿನಲ್ಲೇ ಗಿರಕಿ ಹೊಡೆಯುತ್ತಿತ್ತು.
ಈ ಸಂದರ್ಭದಲ್ಲಿ ಬೆಳೆಗಾರರಿಗೆ ಕೊಬ್ಬರಿ ಉತ್ಪಾದಿಸಲು ಹೆಚ್ಚಾಗಿ ಆದಾಯ ತುಂಬಾ ಕಡಿಮೆಯಾದ್ದರಿಂದ ತೆಂಗಿನ ಮರಗಳನ್ನು ಬೆಳೆಯುವುದು ಬೇಡವೆಂಬ ಬೇಸರಕ್ಕೆ ಬಂದಿದ್ದರು. ಹಾಗಾಗಿ ರೈತರು ಅಡಿಕೆ, ಬಾಳೆ, ದಾಳಿಂಬೆ ಮತ್ತಿತರೆ ವಾಣಿಜ್ಯ ತೋಟಗಾರಿಕೆಯತ್ತ ಮುಂದಾಗಿದ್ದರು. ಆದರೆ ಕಳೆದ ವರ್ಷದಿಂದ ತೆಂಗಿನ ಕಾಯಿಗಳ ಇಳುವರಿಯಲ್ಲಿ ಬಹುದೊಡ್ಡ ಕುಸಿತ ಕಂಡಿದ್ದರಿಂದ ಎಳನೀರು ಹಾಗೂ ತೆಂಗಿನ ಕಾಯಿಗಳಿಗೆ ನಿರೀಕ್ಷೆ ಮೀರಿ ಬೆಲೆ ಹಾಗೂ ಬೇಡಿಕೆ ಹೆಚ್ಚಾಗತೊಡಗಿದ್ದರಿಂದ ಬೆಳೆಗಾರರು ಎಳನೀರು ಹಾಗೂ ತೆಂಗಿನಕಾಯಿಗಳನ್ನೇ ಮಾರಾಟ ಮಾಡಲು ಪ್ರಾರಂಭಿಸಿದ್ದರಿಂದ, ಕೊಬ್ಬರಿ ದಾಸ್ತಾನು ಸಹಜವಾಗಿ ಕಡಿಮೆಯಾಗಿ ಕೊಬ್ಬರಿ ಬೆಲೆ ಏರುಮುಖದಲ್ಲಿ ಸಾಗುತ್ತಿದ್ದು, ಸೋಮವಾರದ ಹರಾಜಿನಲ್ಲಿ ರು. 32ಸಾವಿರ ಗಡಿ ದಾಟಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬೇಡಿಕೆ-ಬೆಲೆ ಹೆಚ್ಚಾಗಬಹುದೆಂಬ ನಿರೀಕ್ಷೆಯಲ್ಲಿ ರೈತರು, ವರ್ತಕರು ಚರ್ಚೆ ಮಾಡುತ್ತಿರುವುದು ಕಂಡು ಬರುತ್ತಿದೆ.
ರೈತರ ಬಳಿ ನಾನಾ ಕಾರಣಗಳಿಂದ ಕೊಬ್ಬರಿ ದಾಸ್ತಾನು ತುಂಬಾ ಕಡಿಮೆ ಇದೆ. ಇತ್ತೀಚಿನ ತಿಂಗಳುಗಳಲ್ಲಿ ಮಾರುಕಟ್ಟೆಗೆ ಬರುವ ಅವಕ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗತೊಡಗಿದೆ. ಉತ್ತರ ಭಾರತದಲ್ಲಿ ಶ್ರಾವಣ ಮಾಸದಿಂದ ಪ್ರಾರಂಭವಾಗಿ, ದೀಪಾವಳಿವರೆಗೂ ಆಚರಿಸುವ ಎಲ್ಲ ಹಬ್ಬಗಳಿಗೂ ಕೊಬ್ಬರಿ ಬೇಡಿಕೆ ಹೆಚ್ಚು ಇರುವುದರಿಂದ ಬೆಲೆಯೂ ಹೆಚ್ಚಾಗುವುದು ವಾಡಿಕೆಯಾದರೂ, ಈ ಸಂದರ್ಭದಲ್ಲಿ ಬೆಲೆ ಹೆಚ್ಚಾಗಿರುವುದು ಭವಿಷ್ಯದಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂಬುದು ಮಾರುಕಟ್ಟೆ ತಜ್ಞರ ಅನಿಸಿಕೆ.
ಈಗಾಗಲೆ ತಮಿಳುನಾಡು, ಆಂದ್ರ, ಕೇರಳ ಮತ್ತಿತರೆ ತೆಂಗು ಬೆಳೆಯುವ ಪ್ರದೇಶಗಳಲ್ಲೂ ತೆಂಗಿನ ಕಾಯಿಗಳ ಇಳುವರಿ ಕುಸಿತ ಕಂಡಿದ್ದು, ನಮ್ಮ ರಾಜ್ಯದ ಕಲ್ಪತರು ನಾಡಿನಲ್ಲಿ ಇತ್ತೀಚೆಗೆ ಹೆಚ್ಚು ರೈತರು ಉತ್ತಮ ಬೆಲೆ ಬಂದ ಕಾರಣ ಎಳನೀರು ಮತ್ತು ತೆಂಗಿನಕಾಯಿಗಳನ್ನೇ ಮಾರಾಟಮಾಡುತ್ತಿರುವುದರಿಂದ ಕೊಬ್ಬರಿ ದಾಸ್ತಾನು ತುಂಬಾ ಕಡಿಮೆಯಾಗಿದೆ.
ಇದನ್ನೂ ಓದಿ: 25 ವರ್ಷದ ಭೂಸ್ವಾಧೀನ ಕಾನೂನು ಸಮರದಲ್ಲಿ ಎಪಿಎಂಸಿಗೆ ಜಯ
ಇದರ ಜೊತೆಗೆ ಕಳೆದ ಆರೇಳು ವರ್ಷಗಳಿಂದ ಮಳೆ ಕೊರತೆ, ತೆಂಗಿನ ಮರಗಳನ್ನು ಕಾಡುತ್ತಿರುವ ಹಲವಾರು ರೋಗಗಳು ತೆಂಗಿನ ಕಾಯಿಗಳ ಇಳುವರಿಯಲ್ಲಿ ಗಣನೀಯ ಕೊರತೆ ಉಂಟುಮಾಡುತ್ತಿರುವುದಲ್ಲದೆ, ಲೆಕ್ಕವಿಲ್ಲದಷ್ಟು ತೆಂಗಿನ ಮರಗಳು ಬಿದ್ದು ಹೋಗಿರುವ ಕಾರಣಗಳಿಂದಲೂ ಮುಂದಿನ ದಿನಮಾನಗಳಲ್ಲಿ ಎಳನೀರು, ತೆಂಗಿನಕಾಯಿ ಹಾಗೂ ಕೊಬ್ಬರಿಗೆ ನಿರೀಕ್ಷೆ ಮೀರಿ ಬೆಲೆ ಬರುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ.
ಇದನ್ನೂ ಓದಿ: ಗಜೇಂದ್ರಗಢದಲ್ಲಿ ಕ್ವಿಂಟಾಲ್ ಶೇಂಗಾ 11 ಸಾವಿರಕ್ಕೂ ಅಧಿಕ ದರಕ್ಕೆ ಮಾರಾಟ: ರೈತರು ಖುಷ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ