
ಬೆಂಗಳೂರು (ಏ.7): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಂಗಳವಾರ(ಏ.7) ಪ್ರಕಟಿಸಬೇಕಿದ್ದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶವನ್ನು ಮುಂದೂಡಿದೆ. ಫಲಿತಾಂಶ ಪ್ರಕಟಣೆ ಯಾವಾಗ ಎಂಬುದನ್ನು ಶೀಘ್ರ ಪ್ರಕಟಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಮೊದಲ ಬಾರಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಕ್ಕೂ ಮೊದಲೇ ಫಲಿತಾಂಶ ಪ್ರಕಟಣೆಗೆ ಸಂಭಾವ್ಯ ದಿನಾಂಕವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರೇ ಪ್ರಕಟಿಸಿದ್ದರು. ಆದರೆ, ದಾವಣಗೆರೆ, ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಫಲಿತಾಂಶ ಪ್ರಕಟಣೆ ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ಮಂಡಳಿ ಅಧಿಕಾರಿಗಳು ಹೇಳುತ್ತಿರುವ ಪ್ರಕಾರ, ಉಪಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆಗೆ ಅನುಮತಿ ಕೋರಿ ಚುನಾವಣಾ ಯೋಗಕ್ಕೆ ಪತ್ರ ಬರೆಯಲಾಗಿದೆ. ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಹಾಗಾಗಿ ಏ.7ರಂದು ಫಲಿತಾಂಶ ಪ್ರಕಟಣೆ ಆಗುವುದಿಲ್ಲ. ಆದರೆ, ಮಂಗಳವಾರ ಆಯೋಗದಿಂದ ಪ್ರತಿಕ್ರಿಯೆ ಬಂದರೆ ಏ.8 ಬುಧವಾರ ಪ್ರಕಟಿಸಲಾಗುವುದೇ ಅಥವಾ ಇನ್ನೂ ವಿಳಂಬ ಆಗಲಿದೆಯೇ ಎನ್ನುವ ಬಗ್ಗೆ ಮಂಗಳವಾರ ಸಂಜೆ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಆದರೆ ಆಯೋಗದ ಉನ್ನತ ಮೂಲಗಳ ಪ್ರಕಾರ ಫಲಿತಾಂಶ ಪ್ರಕಟಣೆಗೆ ಅಭ್ಯಂತರವಿಲ್ಲ ಎಂದು ಮಂಡಳಿ ಪತ್ರಕ್ಕೆ ಈಗಾಗಲೇ ಹಿಂಬರಹದ ಪ್ರತಿಕ್ರಿಯೆ ನೀಡಲಾಗಿದೆ. ಉಪಚುನಾವಣೆ ಮತದಾನ ಮುಗಿಯುವವರೆಗೂ ಸಚಿವರು ಲಭ್ಯವಾಗದ ಕಾರಣ ಫಲಿತಾಂಶ ಪ್ರಕಟಣೆ ಮುಂದೂಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ