ಪರಿಸರ ಸೂಕ್ಷ್ಮ ಪ್ರದೇಶವನ್ನೇ ಹೆಚ್ಚಾಗಿ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾದಲ್ಲಿ ಹಲವು ವಿರೋಧಗಳ ಬಳಿಕವೂ ಕೈಗಾ ಅಣು ವಿದ್ಯುತ್ ಸ್ಥಾವರವನ್ನು ನಿರ್ಮಾಣ ಮಾಡಿ ವಿದ್ಯುತ್ ಉತ್ಪಾದನೆ ಮಾಡಲಾಗುತಿತ್ತು.
ಉತ್ತರ ಕನ್ನಡ (ಅ.12): ಪರಿಸರ ಸೂಕ್ಷ್ಮ ಪ್ರದೇಶವನ್ನೇ ಹೆಚ್ಚಾಗಿ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾದಲ್ಲಿ ಹಲವು ವಿರೋಧಗಳ ಬಳಿಕವೂ ಕೈಗಾ ಅಣು ವಿದ್ಯುತ್ ಸ್ಥಾವರವನ್ನು ನಿರ್ಮಾಣ ಮಾಡಿ ವಿದ್ಯುತ್ ಉತ್ಪಾದನೆ ಮಾಡಲಾಗುತಿತ್ತು. ಆದರೆ, ಇಲ್ಲಿ ಮತ್ತೆ ತಲಾ 250 ರಿಂದ 700 ಮೆಗಾವ್ಯಾಟ್ ಸಾಮರ್ಥ್ಯದ ಐದು ಮತ್ತು ಆರನೇಯ ಎರಡು ಘಟಕಗಳ ಸ್ಥಾಪನೆಗೆ ಅಣುಶಕ್ತಿ ನಿಯಂತ್ರಣ ಮಂಡಳಿಯು ಅನುಮತಿ ನೀಡಿದೆ. ಅಲ್ಲದೇ, ಕೇಂದ್ರ ಸಚಿವ ಸಂಪುಟವು 2017ರಲ್ಲೇ ಇದಕ್ಕೆ ಅನುಮೋದನೆ ನೀಡಿದೆ.
ಪರಿಸರ ಸೂಕ್ಷ್ಮ ವಲಯ ಹಾಗೂ ಘಟಕದಿಂದ ಜನರ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮದಿಂದ ಇದನ್ನು ಸ್ಥಳೀಯರು ಕೂಡಾ ವಿರೋಧಿಸಿದ್ದರು. ಇದ್ಯಾವುದನ್ನೂ ಲೆಕ್ಕಿಸದೇ ಐದು ಹಾಗೂ ಆರನೇ ಘಟಕಗಳಿಗೆ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಖಾತೆ ಸಚಿವಾಲಯ ಪರಿಸರ ಅನುಮೋದನೆಯನ್ನು ನೀಡಿತ್ತು. ಹೀಗಾಗಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂದು ಆರೋಪಿಸಿ ‘ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಹಾಗೂ ಆರನೇ ಘಟಕ ವಿರೋಧಿ ಹೋರಾಟ ಸಮಿತಿ’ಯು ಎನ್‌ಜಿಟಿ ಮೆಟ್ಟಿಲೇರಿತ್ತು.
undefined
Uttara Kannada: ಜಗಜ್ಯೋತಿ ಬಸವೇಶ್ವರ ಮೂರ್ತಿ ಅನಾವರಣ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ರಾಮಕೃಷ್ಣನ್ ಹಾಗೂ ಡಾ.ಸತ್ಯಗೋಪಾಲ್ ಕೊರ್ಲಪಾಟಿ ಅವರನ್ನು ಒಳಗೊಂಡ ಪೀಠ, ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಹಾಗೂ ಆರನೇ ಘಟಕಗಳಿಗೆ ನೀಡಿರುವ ಪರಿಸರ ಅನುಮೋದನೆಯನ್ನು ಅಮಾನತುಗೊಳಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ವಲಯ ಪೀಠ ಆದೇಶ ಹೊರಡಿಸಿದೆ. ಪೀಠದ ಈ ಆದೇಶದಿಂದ ಸ್ಥಳೀಯರು ಮಾತ್ರವಲ್ಲದೇ, ಪರಿಸರ ಪ್ರೇಮಿಗಳು ಕೂಡಾ ಸಾಕಷ್ಟು ಸಂತೋಷಗೊಂಡಿದ್ದು, ಪರಿಸರ ಸೂಕ್ಷ್ಮ ಪ್ರದೇಶ ಹಾಳಾಗುವುದನ್ನು ತಪ್ಪಿಸಲಾಗಿದೆ. ಇದೊಂದು ಉತ್ತಮ ಆದೇಶ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೈಗಾ ಪ್ರದೇಶಕ್ಕೆ ವಿಪತ್ತು ನಿರ್ವಹಣಾ ತಂಡ ಭೇಟಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ತಂಡ ಇತ್ತೀಚೆಗೆ ಕೈಗಾ ಅಣು ವಿದ್ಯುತ್ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ, ತುರ್ತು ಸಂದರ್ಭ ಎದುರಿಸಲು ಕೈಗೊಂಡ ಸಿದ್ಧತೆ ಮತ್ತು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿತು. ತಂಡದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಮಲ್‌ಕಿಶೋರ, ಸದಸ್ಯ ರಾಜೇಂದ್ರ ಸಿಂಗ್, ಹಿರಿಯ ಸಲಹೆಗಾರ ಎಸ್.ಕೆ. ಘೋಷ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ 10ನೇ ಬೆಟಾಲಿಯನ್ ಕಮಾಂಡೆಂಟ್ ಜಾಹಿದ್‌ಖಾನ್, ಅಣು ಶಕ್ತಿ ನಿಯಂತ್ರಣ ಮಂಡಳಿ ಸದಸ್ಯ ದೀಪಕ್ ಓಜಾ, ಮುಖ್ಯಸ್ಥ ಡಾ. ಎಸ್.ಪಿ. ಲಕ್ಷ್ಮಣನ್, ಅಣು ವಿದ್ಯುತ್ ನಿಗಮದ ಕೇಂದ್ರ ಕಚೇರಿಯ ಕೆ.ಕೆ. ಡೇ, ಜಿಲ್ಲಾಧಿಕಾರಿ ಮುಲೈ ಮುಗಿಲನ್ ಇದ್ದರು.
ಉತ್ತರ ಕನ್ನಡಕ್ಕೆ ಉತ್ಕೃಷ್ಟ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧ: ಸಚಿವ ಸುಧಾಕರ
ತಂಡವು ಮುಖ್ಯ ನಿಯಂತ್ರಣ ಕೊಠಡಿ, ಟರ್ಬೈನ್ ಮಹಡಿಗೆ ಭೇಟಿ ನೀಡಿತು. ಪರಿಸರ ಸಮೀಕ್ಷೆ ಲ್ಯಾಬ್ ಜೊತೆಗೆ ಕದ್ರಾ ಅಣೆಕಟ್ಟಿನ ಕೈಗಾ ಟೌನಶಿಪ್‌ನಲ್ಲಿರುವ ತುರ್ತು ವೈದ್ಯಕೀಯ ಕೇಂದ್ರ (ಕೈಗಾ ಆಸ್ಪತ್ರೆ) ಮತ್ತು ನಾಗರಿಕರ ಸುರಕ್ಷತೆಗಾಗಿ ಕೈಗೊಂಡ ಹಲವಾರು ಕ್ರಮಗಳನ್ನು ಪರಿಶೀಲಿಸಿತು. ಕೈಗಾ ಯೋಜನಾ ನಿರ್ದೇಶಕ ರಾಜೇಂದ್ರ ಗುಪ್ತಾ ಮತ್ತು ಅವರ ತಂಡ ಹಾಗೂ ಅಧಿಕಾರಿಗಳೊಂದಿಗೆ ಪ್ರವಾಹ, ಭೂಕುಸಿತದಂತಹ ಇತರ ಅಪಾಯಗಳ ಸಂದರ್ಭದಲ್ಲಿ ತುರ್ತು ಸಿದ್ಧತೆ ಮತ್ತು ಕೈಗೊಳ್ಳುವ ಕ್ರಮಗಳ ಬಗ್ಗೆ ವಿವರವಾದ ಚರ್ಚೆ ನಡೆಸಿತು. ತಂಡವು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರೊಂದಿಗೆ ಮಾತುಕತೆ ನಡೆಸಿ, ಕೈಗಾ ಸ್ಥಾವರದೊಂದಿಗೆ ಸಮನ್ವಯ ವ್ಯವಸೆ ಪರಿಶೀಲಿಸಿತು.