ಜನವರಿ 6-8ರವರೆಗೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ!

By Santosh NaikFirst Published Oct 12, 2022, 7:00 PM IST
Highlights

ಮುಂದೂಡಿಕೆಯಾಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 6 ರಿಂದ 8ರವರೆಗೆ ಹಾವೇರಿಯಲ್ಲಿ ನಡೆಯಲಿದೆ ಎಂದು ಸರ್ಕಾರ ತಿಳಿಸಿದೆ. ಬುಧವಾರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಬೆಂಗಳೂರು (ಅ.12): ಮುಂದೂಡಿಕೆಗಳಿಂದಾಗಿಯೇ ಸುದ್ದಿಯಾಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2023ರ ಜನವರಿ 6 ರಿಂದ 8ರವರೆಗೆ ಹಾವೇರಿಯಲ್ಲಿ ನಡೆಯಲಿದೆ ಎಂದು ಸರ್ಕಾರ ತಿಳಿಸಿದೆ. ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇದನ್ನು ತೀರ್ಮಾನಿಸಲಾಗಿದೆ. ಹಾವೇರಿ ಸಮ್ಮೇಳನದ ದಿನಾಂಕವನ್ನು ನಿಗದಿ ಮಾಡುವ ಸಲುವಾಗಿಯೇ ಬುಧವಾರ ಸಭೆ ಕರೆಯಲಾಗಿತ್ತು. ಇನ್ನು ಅಕ್ಟೋಬರ್‌ 20 ರಂದು ಸಚಿವರು, ಶಾಸಕರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಪೂರ್ವಸಿದ್ಧತಾ ಸಭೆ ಹಾವೇರಿಯಲ್ಲಿ ನಡೆಯಲಿದೆ. ಸಮ್ಮೇಳನದ ಸಿದ್ಧತೆಗೆ ಕನಿಷ್ಠ ಮೂರು ವಾರಗಳು ಬೇಕು ಎನ್ನುವ ಮನವಿಯ ಆಧಾರದ ಮೇಲೆ ನವೆಂಬರ್‌ 11 ರಂದು ಆರಂಭವಾಗಬೇಕಿದ್ದ ಬಹುನಿರೀಕ್ಷಿತ 86ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಮುಂದದೂಡಿಕೆ ಮಾಡಲಾಗಿದೆ.  ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ ಕುಮಾರ್‌ ಅವರೊಂದಿಗೆ ಚರ್ಚೆ ಮಾಡಿದ ಬಳಿಕವೇ ಹೊಸ ದಿನಾಂಕವನ್ನು ನಿಗದಿ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ನವೆಂಬರ್‌ 11, 12 ಹಾಗೂ 13 ರಂದು ಸಮ್ಮೇಳನ ನಡೆಸಲು ತೀರ್ಮಾನ ಮಾಡಲಾಗಿತ್ತು.

ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಪೂರ್ವಸಿದ್ಧತಾ ಸಭೆ ಹಾಗು ಸಮ್ಮೇಳನಕ್ಕೆ ಬೇಕಾದಂಥ ಸಿದ್ಧತೆ ಆಗದ ಹಿನ್ನಲೆಯಲ್ಲಿ ಸಮ್ಮೇಳನವನ್ನು ಮುಂದೂಡುವ ತೀರ್ಮಾನ ಮಾಡಲಾಗಿದೆ. ಇದಕ್ಕೂ ಮುನ್ನ ಜುಲೈನಲ್ಲಿ ಒಮ್ಮೆ ಪೂರ್ವಸಿದ್ಧತಾ ಸಭೆ ನಡೆದಿತ್ತು. ಇದಕ್ಕೆ ಮುಖ್ಯಮಂತ್ರಿಯವರೇ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆಸೆ. 23, 24, 25 ರಂದು ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಪಿತೃಪಕ್ಷ ಎನ್ನುವ ಕಾರಣಕ್ಕಾಗಿ ಸಮ್ಮೇಳನವನ್ನು ನವೆಂಬರ್‌ 11, 12, 13 ರಂದು ಮರು ನಿಗದಿ ಮಾಡಲಾಗಿತ್ತು.

ಈಗಾಗಲೇ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ ದೊಡ್ಡರಂಗೇಗೌಡರನ್ನು (Doddarangegowda) ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿದೆ. ಸಮ್ಮೇಳನಕ್ಕೆ 8 ರಿಂದ 10 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ ಎನ್ನಲಾಗಿದ್ದು, 30 ಸಾವಿರಕ್ಕೂ ಅಧಿಕ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿದಿನ 3 ಲಕ್ಷ ಮಂದಿಗೆ ಊಟದ ಸೌಲಭ್ಯ ಇರಲಿದೆ ಎಂದು ಸರ್ಕಾರ ತಿಳಿಸಿದೆ. ಇಡೀ ಸಾಹಿತ್ಯ ಸಮ್ಮೇಳನ ಮುಂದಿನ ಹಲವು ಸಮ್ಮೇಳನಗಳಿಗೆ ಮಾದರಿಯಂತಿರಬೇಕು. ಅರ್ಥಪೂರ್ಣ ಗೋಷ್ಠಿಗಳು ಇರಬೇಕು. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು. ಸ್ಥಳೀಯರನ್ನು ಸಮಿತಿಗಳಲ್ಲಿ ಸೇರಿಸಿಕೊಳ್ಳಬೇಕು. ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳ ಸ್ವಯಂಸೇವಕರು ಇದರಲ್ಲಿರಬೇಕು. ಸಿದ್ಧತೆಗಳನ್ನು ಆರಂಭ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಸರಕಾರ ನಯಾಪೈಸೆ ಕೊಟ್ಟಿಲ್ಲ, ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲ್ಲ: ಕಸಾಪ ಅಧ್ಯಕ್ಷರ ಆಕ್ರೋಶ

ಮನು ಬಳಿಗಾರ್‌ (Manu Baligar) ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ 86ನೇ ಕನ್ನಡ ಸಾಹಿತ್ಯ ಸಮ್ಮೇಳನ (Kannada Sahitya Sammelana) ಹಾವೇರಿಯಲ್ಲಿ ನಡೆಯಲಿದೆ ಎಂದು ನಿರ್ಧಾರ ಮಾಡಲಾಗಿತ್ತು. ಆದರೆ, ಈ ಅವಧಿಯಲ್ಲಿ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದರಿಂದ ಮುಂದಿನ ಕಾರ್ಯಕಾರಿ ಸಮಿತಿಯೇ ಸಮ್ಮೇಳನ ನಡೆಸಲಿ ಎಂದು ಹೇಳಲಾಗಿತ್ತು. ಇನ್ನು ಮಹೇಶ್‌ ಜೋಶಿ (Mahesh Joshi) ಅವರು ಅಧ್ಯಕ್ಷರಾದ ಬಳಿಕ ನವೆಂಬರ್‌ನಲ್ಲಿ ದಿನಾಂಕ ನಿಗದಿ ಮಾಡಲಾಗಿತ್ತು. ಇದು ಸಿಎಂ ಅವರು ತವರು ಜಿಲ್ಲೆ ಕೂಡ ಆಗಿತ್ತು. ಆದರೆ, ಇದಕ್ಕೆ ಯಾವುದೇ ರೀತಿಯಲ್ಲಿ ತಯಾರಿ ನಡೆಯದ ಕಾರಣ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್‌ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದರು.

ನವೆಂಬರ್‌ನಲ್ಲೇ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಸಿಎಂ ಬೊಮ್ಮಾಯಿ

ಸ್ಥಳ ಪರಿಶೀಲನೆ: ದಿನಾಂಕ ಘೋಷಣೆ ಮಾಡಿದ ಬಳಿಕ ಮಾತನಾಡಿದ ಸಚಿವ ವಿ.ಸುನೀಲ್‌ ಕುಮಾರ್‌ (V Sunil Kumar),  20 ರಂದು ಹಾವೇರಿ (Haveri) ಜಿಲ್ಲೆಗೆ ಭೇಟಿ ನೀಡಲಿದ್ದು, ಸ್ಥಳದ ಪರಿಶೀಲನೆ ಮಾಡಲಿದ್ದೇವೆ. ಯಾವುದೇ ಸಮಸ್ಯೆ ಆಗದಂತೆ ಸಮ್ಮೇಳನ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

 

click me!