Karnataka Rains: ಮಲೆನಾಡು, ಕರಾವಳಿಯಲ್ಲಿ ಮಳೆ: ಅಣೆಕಟ್ಟೆಗಳಿಗೆ ಹೆಚ್ಚಾದ ಒಳಹರಿವು

Published : Aug 06, 2026, 06:33 AM IST
KRS Dam

ಸಾರಾಂಶ

ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಆರ್‌ಎಸ್‌, ಕಬಿನಿ ಸೇರಿದಂತೆ ಪ್ರಮುಖ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಗುಡ್ಡ ಕುಸಿತ ಹಾಗೂ ಮನೆ ಹಾನಿ ವರದಿಯಾಗಿದೆ.

ಬೆಂಗಳೂರು: ಕೊಡಗು, ಕರಾವಳಿ, ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈ ಭಾಗದ ಜಲಾಶಯಗಳ ಒಳಹರಿವು ಒಂದೇ ಸಮನೆ ಏರುತ್ತಿದೆ. ಕೊಡಗಿನಲ್ಲಿ ಮಳೆ ಆಗುತ್ತಿರುವುದರಿಂದ ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಿದ್ದು, ಜಲಾಶಯದ ನೀರಿನ ಮಟ್ಟ 105 ಅಡಿಗಳಿಗೆ (ಗರಿಷ್ಠ 124.80) ಏರಿದೆ. ಕೇರಳದ ವೈನಾಡಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕು ಬೀದರಹಳ್ಳಿಯ ಕಬಿನಿ ಜಲಾಶಯದ ನೀರಿನ ಮಟ್ಟ 2282 ಅಡಿಗಳಿಗೆ (ಗರಿಷ್ಠ 2284) ಏರಿದೆ. 

ಜಲಾಶಯಕ್ಕೆ 22 ಸಾವಿರ ಕ್ಯೂಸೆಕ್‌ ಒಳಹರಿವಿದ್ದು, ಜಲಾಶಯದಿಂದ 27 ಸಾವಿರ ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ ಕಳೆದ 5 ದಿನಗಳಿಂದ ತಮಿಳುನಾಡಿಗೆ ನಿತ್ಯ 25 ಸಾವಿರ ಕ್ಯೂಸೆಕ್‌ ನೀರು ಹರಿದು ಹೋಗುತ್ತಿದೆ. ಶಿವಮೊಗ್ಗ ಜಿಲ್ಲೆ ತುಂಗಾ ಜಲಾಶಯದಿಂದ 37 ಸಾವಿರ ಕ್ಯುಸೆಕ್‌ಗೂ ಅಧಿಕ ಹೊರಹರಿವು ಇದ್ದು, ಭದ್ರಾ ಡ್ಯಾಂಗೂ ಸಾಕಷ್ಟು ಒಳಹರಿವು ಬರುತ್ತಿದೆ.

ಭಾರೀ ಮಳೆಯಿಂದಾಗಿ ಚನ್ನಗಿರಿ ತಾಲೂಕಿನಲ್ಲಿ 2 ಮನೆಗಳು ಪೂರ್ಣ, 1 ಮನೆ ಭಾಗಶಃ ಹಾನಿಗೀಡಾಗಿದ್ದು, ₹3 ಲಕ್ಷದಷ್ಟು ನಷ್ಟವಾಗಿದೆ. ಇದೇ ವೇಳೆ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಾಧಾರಣ ಮಳೆಯಾಗಿದೆ. ಇದೇ ವೇಳೆ, ಬೆಂಗಳೂರು ನಗರ ವ್ಯಾಪ್ತಿಯಲ್ಲೂ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶಗಳಲ್ಲಿ ಮಂಗಳವಾರ ಸಂಜೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

ಶೃಂಗೇರಿಗೆ ಮತ್ತೆ ಜಲದಿಗ್ಬಂಧನ

ಶೃಂಗೇರಿ ತಾಲೂಕಿನಾದ್ಯಂತ ಮಳೆ ಮುಂದುವರಿದಿದೆ. ಶೃಂಗೇರಿ ಮಠದ ನರಸಿಂಹವನದ ತುಂಗಾ ನದಿ ತೀರದಲ್ಲಿರುವ ಸಂಧ್ಯಾವಂದನ ಮಂಟಪಕ್ಕೆ ಪ್ರವಾಹದ ನೀರು ನುಗ್ಗಿದ್ದು, ನದಿ ತೀರದಲ್ಲಿರುವ ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದೆ. ಶೃಂಗೇರಿ ಪಟ್ಟಣದ ರಸ್ತೆಗಳಿಗೂ ಪ್ರವಾಹ ನುಗ್ಗಿದ್ದು, ಭಾರತಿ ಬೀದಿಯ ಕೆವಿಆರ್ ರಸ್ತೆ ಸಂಪರ್ಕಿಸುವ ಪ್ಯಾರಾಲಾಲ್ ಬೈಪಾಸ್ ರಸ್ತೆ ಪ್ರವಾಹದಲ್ಲಿ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಶೃಂಗೇರಿಗೆ ಮತ್ತೆ ಜಲದಿಗ್ಬಂಧನ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವ ಪರಿಸ್ಥಿತಿ ಎದುರಾಗಿದೆ.

ನರಸಿಂಹಪರ್ವತದ ತಪ್ಪಲು, ಕಿಗ್ಗಾ, ಬೇಗಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆ ಆಗುತ್ತಿದೆ. ತುಂಗಾ ನದಿಯ ಉಪನದಿಗಳಾದ ನಂದಿನಿ, ನಳಿನಿ, ಮಾಲತಿ ನದಿಗಳು ತುಂಬಿ ಹರಿಯುತ್ತಿವೆ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.

ತುಂಗಾ ಮತ್ತು ಭದ್ರಾ ಜಲಾನಯನ ಪ್ರದೇಶ

ತುಂಗಾ ಮತ್ತು ಭದ್ರಾ ಜಲಾನಯನ ಪ್ರದೇಶ, ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ಮೈದುಂಬಿ ಹರಿಯುತ್ತಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ ಹಾಗೂ ಹರಿಹರ ತಾಲೂಕಿನಲ್ಲಿ 9.5 ಮೀಟರ್‌ನಷ್ಟು ಅಪಾಯದ ಮಟ್ಟದಲ್ಲಿ ನೀರು ಹರಿದು ಬರುತ್ತಿದೆ. ಶಿವಮೊಗ್ಗ ಜಿಲ್ಲೆ ತುಂಗಾ ಜಲಾಶಯದಿಂದ 37 ಸಾವಿರ ಕ್ಯುಸೆಕ್‌ಗೂ ಅಧಿಕ ಹೊರಹರಿವು ಇದ್ದು, ಭದ್ರಾ ಡ್ಯಾಂಗೂ ಸಾಕಷ್ಟು ಒಳಹರಿವು ಬರುತ್ತಿದೆ. ಭಾರೀ ಮಳೆಯಿಂದಾಗಿ ಚನ್ನಗಿರಿ ತಾಲೂಕಿನಲ್ಲಿ 2 ಮನೆಗಳು ಪೂರ್ಣ, 1 ಮನೆ ಭಾಗಶಃ ಹಾನಿಗೀಡಾಗಿದ್ದು, ₹3 ಲಕ್ಷದಷ್ಟು ನಷ್ಟವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka Latest News Live: Sakleshpur - ಹೊಸಳ್ಳಿ ಬೆಟ್ಟ- ಕಾಗಿನಹರೆಗೆ ಪ್ರವಾಸಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ
ಮಂತ್ರಿಗಿರಿ ಅಸಮಾಧಾನ ಶಮನಕ್ಕೆ ಅಖಾಡಕ್ಕಿಳಿದ ಟ್ರಬಲ್ ಶೂಟರ್ ಸಿಎಂ ಡಿ.ಕೆ.ಶಿವಕುಮಾರ್, ಚಕ್ರಾಯುಧ ಕೆಳಗಿಳಿಸ್ತಾರ ಕೃಷ್ಣಪ್ಪ!