ಕನ್ನಡ ಸಂಘಟನೆಗಳನ್ನು ಒಗ್ಗೂಡಿಸಿದ ಫಲಕ ಚಳವಳಿ!

By Kannadaprabha NewsFirst Published Dec 29, 2023, 12:21 PM IST
Highlights

ಕನ್ನಡ ನಾಮಫಲಕ ವಿಚಾರದಲ್ಲಿ ಈವರೆಗಿನ ವೈಮನಸ್ಸನ್ನು ಬದಿಗಿಟ್ಟಿರುವ ಕನ್ನಡಪರ ಸಂಘಟನೆಗಳು, ಬಂಧನಕ್ಕೊಳಗಾಗಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ. ನಾರಾಯಣಗೌಡ ಸೇರಿದಂತೆ ಕಾರ್ಯಕರ್ತರನ್ನು 24 ಗಂಟೆಗಳೊಳಗೆ ಬಿಡುಗಡೆ ಮಾಡುವಂತೆ ಒಕ್ಕೊರಲಿನಿಂದ ಆಗ್ರಹಿಸಿವೆ. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿವೆ.

ಬೆಂಗಳೂರು (ಡಿ.29) :  ಕನ್ನಡ ನಾಮಫಲಕ ವಿಚಾರದಲ್ಲಿ ಈವರೆಗಿನ ವೈಮನಸ್ಸನ್ನು ಬದಿಗಿಟ್ಟಿರುವ ಕನ್ನಡಪರ ಸಂಘಟನೆಗಳು, ಬಂಧನಕ್ಕೊಳಗಾಗಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ. ನಾರಾಯಣಗೌಡ ಸೇರಿದಂತೆ ಕಾರ್ಯಕರ್ತರನ್ನು 24 ಗಂಟೆಗಳೊಳಗೆ ಬಿಡುಗಡೆ ಮಾಡುವಂತೆ ಒಕ್ಕೊರಲಿನಿಂದ ಆಗ್ರಹಿಸಿವೆ. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿವೆ.

ಪ್ರತ್ಯೇಕ ಹೋರಾಟ ನಡೆಸುತ್ತಾ ಬಂದಿರುವ ಕರವೇ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟ ಕನ್ನಡ ನಾಮಫಲಕ ವಿಚಾರವಾಗಿ ಒಂದಾಗಿವೆ. ಟಿ.ಎ. ನಾರಾಯಣಗೌಡ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಪೊಲೀಸರ ಬಂಧಿಸಿದ್ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಪರ ಹೋರಾಟಗಾರರಾದ ವಾಟಾಳ್‌ ನಾಗರಾಜ್‌, ಪ್ರವೀಣ್‌ ಶೆಟ್ಟಿ, ಸಾ.ರಾ. ಗೋವಿಂದು ಸೇರಿದಂತೆ ಮತ್ತಿತರರು, ನಾರಾಯಣಗೌಡ ಸೇರಿದಂತೆ ಇನ್ನಿತರ ಕನ್ನಡಪರ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

Latest Videos

ಕರವೇ ನಾರಾಯಣಗೌಡರನ್ನ ಬಿಡುಗಡೆ ಮಾಡಬೇಕು; ಸಿಎಂ ಸಿದ್ದರಾಮಯ್ಯಗೆ 24 ಗಂಟೆ ಗಡುವು ಕೊಟ್ಟ ವಾಟಾಳ್ ನಾಗರಾಜ್!

ಈ ಕುರಿತು ಗುರುವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ಪ್ರಮುಖರು, ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಮಾತನಾಡಿ, ಕನ್ನಡ ನಾಮಫಲಕ ಹಾಗೂ ಕನ್ನಡ ಉಳಿವಿಗಾಗಿ ನಾವು ಹೋರಾಟ ಮಾಡುತ್ತೇವೆ. ಅದರಿಂದ ಹಿಂದೆ ಸರಿಯುವುದಿಲ್ಲ. ಈ ವಿಚಾರದಲ್ಲಿ ಎಲ್ಲ ಕನ್ನಡಪರ ಸಂಘಟನೆಗಳು ತೀರ್ಮಾನ ಮಾಡಿದ್ದೇವೆ. ಅಲ್ಲದೆ, ಬುಧವಾರದ ಹೋರಾಟ ವೇಳೆ ಬಂಧನಕ್ಕೊಳಗಾಗಿರುವ ಹೋರಾಟಗಾರರನ್ನು 24 ಗಂಟೆಗಳೊಳಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, ನಾಮಫಲಕ ಕನ್ನಡದಲ್ಲಿ ಇದ್ದರೆ ಮಾತ್ರ ವ್ಯಾಪಾರಕ್ಕೆ ಅನುಮತಿ ನೀಡಬೇಕಿತ್ತು. ಆದರೆ, ಅದರ ಬಗ್ಗೆ ಆಡಳಿತ ನಡೆಸುವವರು ಗಮನವನ್ನೇ ಹರಿಸಿಲ್ಲ. ಈಗ ಅದನ್ನು ವಿರೋಧಿಸಿದ ಕನ್ನಡಪರ ಹೋರಾಟಗಾರರನ್ನು ಬಂಧಿಸಲಾಗಿದೆ. ಎಲ್ಲ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು. ಹೊರರಾಜ್ಯದವರು ನಮ್ಮಲ್ಲಿ ವ್ಯಾಪಾರ ಬೇಕು ಎಂದರೆ ಕನ್ನಡ ಕಲಿಯಬೇಕು ಎಂಬುದನ್ನು ಕಡ್ಡಾಯಗೊಳಿಸಬೇಕು. ಕನ್ನಡ ಕಲಿತವರಿಗೆ ಮಾತ್ರ ಅವಕಾಶ ನೀಡಬೇಕು. ಕನ್ನಡ ಉಳಿಸಿಕೊಳ್ಳಲು ರಾಜ್ಯದಲ್ಲಿ ಮಾಡಿದಂತಹ ಹೋರಾಟ ಬೇರೆ ಯಾವ ರಾಜ್ಯದಲ್ಲೂ ಮಾಡಿಲ್ಲ. ಇದು ನಮ್ಮ ದೌರ್ಭಾಗ್ಯ ಎಂದರು.

ಪ್ರವೀಣ್‌ ಶೆಟ್ಟಿ ಬಣದಿಂದ ಖಂಡನಾ ಸಭೆ:

ಕರವೇ ಕಾರ್ಯಕರ್ತರ ಬಂಧನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರವೇ (ಪ್ರವೀಣ್‌ ಶೆಟ್ಟಿ ಬಣ) ರಾಜ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ, ಕನ್ನಡ ನಾಮಫಲಕ ಕಡ್ಡಾಯ ಮಾಡುವುದು ಸರ್ಕಾರದ ಕರ್ತವ್ಯ. ಎಲ್ಲ ಭಾಗದಲ್ಲೂ ಶೇ. 60ರಷ್ಟು ಕನ್ನಡ ನಾಮಫಲಕವಿರಬೇಕು. ಆದರೆ, ಹಲವೆಡೆ ಕಾನೂನು ಜಾರಿಯಾಗಿಲ್ಲ. ಅದಕ್ಕಾಗಿ ಕಾರ್ಯಕರ್ತರು ಹೋರಾಟ ಮಾಡಿದ್ದು, ಅವರನ್ನು ಬಂಧಿಸಲಾಗಿದೆ. ಕೂಡಲೇ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅದರ ಜತೆಗೆ ಕನ್ನಡಪರ ಹೋರಾಟಗಾರರ ಬಂಧನ ವಿಚಾರವಾಗಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಅರಮನೆ ಮೈದಾನದಲ್ಲಿ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳಿಂದ ಖಂಡನಾ ಸಭೆ ನಡೆಸಲಿದ್ದಾರೆ.

ಸಿಎಂ, ಡಿಸಿಎಂ ಮನೆಗೆ ಮುತ್ತಿಗೆ ಎಚ್ಚರಿಕೆ

ಕರವೇ ಅಧ್ಯಕ್ಷ ನಾರಾಯಣಗೌಡ ಹಾಗೂ ಕಾರ್ಯಕರ್ತರ ಬಂಧನ ಖಂಡಿಸಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಗುರುವಾರ ಸಿಎಂ ಮತ್ತು ಡಿಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದರು. ಅದಕ್ಕಾಗಿ ಸಿಎಂ ನಿವಾಸ ಕಾವೇರಿ, ಗೃಹ ಕಚೇರಿ ಕೃಷ್ಣಾ ಸೇರಿದಂತೆ ಡಿಸಿಎಂ ಮನೆಗೆ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. 

ಸೀಟ್ ಗಾಗಿ ಮಹಿಳೆಯರ ಹೊಡೆದಾಟ: ಶಕ್ತಿ ಯೋಜನೆಯ ಶಕ್ತಿ ಪ್ರದರ್ಶನ!

ಜಲಸಂರಕ್ಷಣಾ ಸಮಿತಿ ಪ್ರತಿಭಟನೆ

ಕರವೇ ಕಾರ್ಯಕರ್ತರ ಬಂಧನ ಖಂಡಿಸಿ ಹಾಗೂ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ಜಲಸಂರಕ್ಷಣಾ ಸಮಿತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಲಿದೆ. ಕರವೇ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.

click me!