
ಬೆಂಗಳೂರು(ಡಿ.29): ಬಡ, ಮಧ್ಯಮ ವರ್ಗದ ಜನತೆಗೆ, ವಿಶೇಷವಾಗಿ ರಾಜ್ಯಕ್ಕೆ ವಲಸೆ ಬರುವ ಕಾರ್ಮಿಕರಿಗೆ ಕೈಗೆಟಕುವ ಪ್ರಯಾಣ ದರದಲ್ಲಿ ಸೇವೆ ಒದಗಿಸುವ ‘ಅಮೃತ್ ಭಾರತ್’ ರೈಲು ರಾಜ್ಯಕ್ಕೂ ದಕ್ಕಿದ್ದು, ಪಶ್ಚಿಮ ಬಂಗಾಳದ ಮಾಲ್ಡಾ-ಬೆಂಗಳೂರು ನಡುವೆ ಸಂಚರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಡಿ.30ರಂದು ಈ ರೈಲಿಗೆ ಚಾಲನೆ ನೀಡಲಿದ್ದು, ಉದ್ಘಾಟನಾ ಸಂಚಾರಾರ್ಥ ಜನವರಿ 1 ರಂದು ‘ಅಮೃತ್ ಭಾರತ್’ ನಗರಕ್ಕೆ ಆಗಮಿಸಲಿದೆ. ಇಲ್ಲಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ನಿಲುಗಡೆಯಾಗಲಿದೆ. ಮುಂದಿನ ಒಂದು ವಾರದಲ್ಲಿ ವಾಣಿಜ್ಯ ಸಂಚಾರ ಪ್ರಾರಂಭಿಸಲಿದೆ. ಈ ರೈಲಿನ ವೇಳಾಪಟ್ಟಿ, ದರಪಟ್ಟಿ ಇನ್ನಷ್ಟೇ ನಿಗದಿ ಆಗಬೇಕಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ರೈಲು ಕರ್ನಾಟಕದ ಜನತೆಗೆ ಎನ್ನುವುದಕ್ಕಿಂತ ಹೆಚ್ಚಾಗಿ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾದಿಂದ ರಾಜ್ಯಕ್ಕೆ ಬರುವ ಕಟ್ಟಡ, ಮೀನುಗಾರಿಕೆ, ರಸ್ತೆ ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಈ ರೈಲಿನಲ್ಲಿ ಸುಮಾರು 1,800 ಮಂದಿ ಆರಾಮವಾಗಿ ಪ್ರಯಾಣಿಸಬಹುದು. ಮಾಲ್ಡಾ ಪಶ್ಚಿಮ ಬಂಗಾಳದಲ್ಲಿದ್ದರೂ, ಬಿಹಾರ ಗಡಿಗೆ ಸಮೀಪದಲ್ಲಿದೆ ಎಂಬುದು ಗಮನಾರ್ಹ.
ಡಿ.30ಕ್ಕೆ ಅಮೃತ್ ಭಾರತ್ ರೈಲಿಗೆ ಮೋದಿ ಚಾಲನೆ, ಜನಸಾಮಾನ್ಯರಿಗಾಗಿ ಬರುತ್ತಿದೆ ಹೊಸ ಟ್ರೈನ್!
ಇದು ಬಂಗಾಳ, ಒಡಿಶಾ, ಆಂಧ್ರಪ್ರದೇಶದಲ್ಲಿ ಸಂಚರಿಸಿ ತಮಿಳುನಾಡು ಮೂಲಕ ಕರ್ನಾಟಕ ಪ್ರವೇಶಿಸಲಿದೆ. ಮಾಲ್ಡಾ, ಖರಗಪುರ್, ಬಾಲಾಸೋರ್, ಭುವನೇಶ್ವರ, ಪುರಿ, ಸೀತಾಕುಳಂ, ವಿಜಯನಗರಂ, ವಿಶಾಖ ಪಟ್ಟಣಂ, ವಿಜಯವಾಡ, ನೆಲ್ಲೂರು, ಗುಡೂರು, ರೇಣಿಗುಂಟ, ಸಾತಪಾಡಿ, ಜೋಲಾರಪೇಟೆ, ಬಂಗಾರಪೇಟೆ ಮೂಲಕ ಎಸ್‌ಎಂವಿಟಿ ನಿಲ್ದಾಣಕ್ಕೆ ಬರಲಿದೆ.
ಅಮೃತ್ ಭಾರತ್ ಗಂಟೆಗೆ ಗರಿಷ್ಠ 130 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಇದು ಮೆಮು ರೈಲಿನ ರೀತಿಯಲ್ಲೆ ಮುಂಭಾಗ- ಹಿಂಭಾಗ ಎಂಜಿನ್ ಹೊಂದಿದ್ದು, ಡೆಡ್ ಎಂಡ್‌ನಲ್ಲಿ ನಿಂತಾಗ ಎಂಜಿನ್ ಅನ್ನು ಬದಲಿಸುವ ಅಗತ್ಯ ಇರುವುದಿಲ್ಲ. ಜೊತೆಗೆ ಪುಷ್‌ಪುಲ್ ಟೆಕ್ನಾಲಜಿ, ಎಲ್‌ಎಚ್‌ಬಿ ಮಾದರಿಯ ಬೋಗಿ ಹೊಂದಿರಲಿದೆ. ದ್ವಿತೀಯ ದರ್ಜೆಯ ಸ್ಲೀಪರ್ ಕೋಚ್ ಹಾಗೂ ಕಾಯ್ದಿರಿಸದ ಸೇರಿ 22 (12+8) ಕೋಚ್‌ಗಳನ್ನು ಒಳಗೊಂಡಿದ್ದು, ಇದರಲ್ಲಿ ಹವಾ ನಿಯಂತ್ರಿತ (ಎಸಿ) ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳು ಇರುವುದಿಲ್ಲ. ಉಳಿದಂತೆ ಸಿಸಿಟಿವಿ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಎಲ್‌ಇಡಿ ಲೈಟ್ ಸೇರಿ ಇತರೆ ಸೌಲಭ್ಯಗಳು ಇರಲಿವೆ.
ಕೇಸರಿ, ಬೂದು ಬಣ್ಣದಲ್ಲಿ ಈ ರೈಲುಗಳು ಇರಲಿದ್ದು, ಅಮೃತ್ ಭಾರತ್ ರೈಲೊಂದರ ನಿರ್ಮಾಣಕ್ಕೆ ರೈಲ್ವೆ ಇಲಾಖೆಯು ಸುಮಾರು ₹ 65 ಕೋಟಿ ಖರ್ಚು ಮಾಡುತ್ತಿದೆ ಎಂದು ಅಂದಾಜಿಸಲಾಗಿದೆ. ಕಡಿಮೆ ಖರ್ಚಿನ ಅಮೃತ್ ಭಾರತ್ ರೈಲುಗಳನ್ನು ಹಗಲು - ರಾತ್ರಿ ಸಂಚಾರಕ್ಕೆ ಬಳಕೆ ಮಾಡುವಂತೆ ವಿನ್ಯಾಸ ಮಾಡಲಾಗಿದೆ. ಈ ರೈಲು 800 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಬಲ್ಲದು. ಈ ರೈಲು ಅ. 29ರಂದು ಮುಂಬೈನ ವಾಡಿ ಬಂದರ್ ಯಾರ್ಡ್ ಹಾಗೂ ನವೆಂಬರ್‌ನಲ್ಲಿ ಅಹಮದಾಬಾದ್- ಮುಂಬೈ ನಡುವೆ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ