
ಬೆಂಗಳೂರು (ಡಿ.20): ಕೃಷಿ ಸಚಿವ ಚೆಲುವರಾಯ ಸ್ವಾಮಿ ವಿರುದ್ಧ ‘ಪೇ ಚಲುವರಾಯಸ್ವಾಮಿ‘ ಅಭಿಯಾನ ನಡೆಸಿ ಸಾರ್ವಜನಿಕ ಪ್ರದೇಶದಲ್ಲಿ ಭಿತ್ತಿಪತ್ರ ಅಂಟಿಸಿದ ಆರೋಪದಡಿ ಮಂಡ್ಯದ ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ದೋಷಾರೋಪಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಕರ್ನಾಟಕ ಮುಕ್ತ ಪ್ರದೇಶಗಳ ವಿರೂಪ ತಡೆ ಕಾಯ್ದೆಯಡಿ ದಾಖಲಿಸಿರುವ ದೋಷಾರೋಪ ಪಟ್ಟಿ ಮತ್ತು ಮಂಡ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಸಿ.ಟಿ. ಮಂಜುನಾಥ್ ಸೇರಿ ಐವರು ಬಿಜೆಪಿ ಕಾರ್ಯಕರ್ತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ನ್ಯಾಯಪೀಠ ಈ ಆದೇಶ ಮಾಡಿತು. ಜತೆಗೆ, ಪ್ರತಿವಾದಿಯಾಗಿರುವ ಮಂಡ್ಯ ಪಶ್ಚಿಮ ಠಾಣಾ ಪೊಲೀಸರು ಮತ್ತು ದೂರುದಾರ ರುದ್ರೇಗೌಡಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಸಚಿವ ಚಲುರಾಯಸ್ವಾಮಿ ಮತ್ತು ಸರ್ಕಾರದ ವಿರುದ್ಧ ‘ಪೇ ಸಿಎಸ್/ ಪೇ ಚಲುವರಾಯಸ್ವಾಮಿ ಅಭಿಯಾನ’ದ ಹೆಸರಿನಲ್ಲಿ 2023ರ ಆ.10ರಂದು ಮಂಡ್ಯದ ಸಂಜಯ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಜತೆಗೆ, ಚಲುವರಾಯ ಸ್ವಾಮಿ ಮತ್ತು ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ 6ರಿಂದ 8 ಲಕ್ಷ ರು. ಪಾವತಿಸುವಂತೆ ಅಡಿ ಬರಹ ಬರೆದು, ಕ್ಯೂಆರ್ ಕೋಡ್ ಜೊತೆಗೆ ಚಲುವರಾಯ ಸ್ವಾಮಿ ಅವರ ಪೋಟೋ ಇರುವ ಭಿತ್ತಿಪತ್ರವನ್ನು ಸಂಜಯ ಸರ್ಕಲ್ ಅಲ್ಲಿ ಅಂಟಿಸಿದ್ದರು.
ಲೋಕಸಭೆಗೆ ನಿಖಿಲ್ ಸ್ಪರ್ಧಿಸಿದರೆ ಬೆಂಬಲ ನೀಡುವುದರಲ್ಲಿ ನಾನೇ ಮೊದಲಿಗ: ಶಿವರಾಮೇಗೌಡ
ಈ ಸಂಬಂಧ ಮಂಡ್ಯದ ಕಾವೇರಿ ನಗರದ ನಿವಾಸಿ ರುದ್ರೇಗೌಡ ಅವರು ನೀಡಿದ ದೂರು ಆಧರಿಸಿ ಅರ್ಜಿದಾರರಾದ ಸಿ.ಟಿ.ಮಂಜುನಾಥ್, ಎಸ್.ಶಿವಕುಮಾರ್ ಆರಾಧ್ಯ, ಪ್ರಸನ್ನ ಕುಮಾರ್, ಶಿವಕುಮಾರ್ ಮತ್ತು ವಿನೂ ಭಾಯ್ ವಿರುದ್ಧ ಮಂಡ್ಯ ಪಶ್ಚಿಮ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ ಭಿತ್ತಿ ಪತ್ರ ಅಳವಡಿಸಿ ಸಾರ್ವಜನಿಕ ಪ್ರದೇಶದ ಸೌಂದರ್ಯ ಹಾಳು ಮಾಡಿದ ಆರೋಪದ ಮೇಲೆ ಕರ್ನಾಟಕ ಮುಕ್ತ ಪ್ರದೇಶಗಳ ವಿರೂಪ ತಡೆ ಕಾಯ್ದೆಯಡಿ 2023ರ ಆ.30ರಂದು ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯ ವಿಚಾರಣೆ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ