ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ನಕಲು ಮಾಡುವ ಕಿಂಗ್‌ಪಿನ್ (ಪಿಎಸ್‌ಐ ಮತ್ತು ಎಫ್‌ಡಿಎ) ಆರ್.ಡಿ. ಪಾಟೀಲ್‌ಗೆ ಇನ್ಮೇಲೆ ಜಾಮೀನು ಸಿಗದಂತೆ ನಿಗಾವಹಿಸಲು ಸರ್ಕಾರ ಕೋಕಾ ಕೇಸ್ ದಾಖಲಿಸಿದೆ.
ಬೆಂಗಳೂರು (ಡಿ.20): ಪರೀಕ್ಷಾ ಅಕ್ರಮಗಳ ಕಿಂಗ್ ಪಿನ್ ಆರ್.ಪಿ.ಪಾಟೀಲ್ ಸಿಐಡಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಎಷ್ಟೇ ಬಾರಿ ಅರೆಸ್ಟ್ ಆದರೂ ಪದೇ ಪದೇ ಪರೀಕ್ಷಾ ಅಕ್ರಮ ಎಸಗುತ್ತಿದ್ದ ಆರ್.ಡಿ.ಪಾಟೀಲ್ ಜೈಲಿನಿಂದ ಹೊರಬರದಂತೆ ಖಾಕಿ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ. ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ-2000 (ಕೋಕಾ ಕಾಯ್ದೆ 2000) ಜಾರಿ ಮಾಡುವ ಮೂಲಕ ಸಿಐಡಿ ಈಗ ಆರ್.ಡಿ.ಪಾಟೀಲ್ ವಿರುದ್ಧದ ಕೇಸ್ಗಳನ್ನ ಮತ್ತಷ್ಟು ಬಿಗಿಗೊಳಿಸಿದೆ.
ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ನಕಲಿ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವ ಆರ್.ಡಿ.ಪಾಟೀಲ್ ವಿರುದ್ಧ ಇರುವ ಎಲ್ಲಾ ಕೇಸ್ ಗಳ ಮಾಹಿತಿ ಸಂಗ್ರಹಿಸಿ ಕೋಕಾ ಕಾಯಿದೆ ಜಾರಿ ಮಾಡಲಾಗಿದೆ. ಗುಂಪು ಕಟ್ಟಿಕೊಂಡು ಪದೇ ಪದೇ ಒಂದೇ ರೀತಿಯ ಅಪರಾಧಗಳನ್ನ ಮಾಡುವವರ ವಿರುದ್ಧ ಕೋಕಾ ಕಾಯಿದೆ ಜಾರಿ ಮಾಡಲಾಗುತ್ತದೆ. ಕೋಕಾ (Karnataka Control of Organised Crimes Act 2000-KCOCA) ಜಾರಿಯಿಂದಾಗಿ ಆರೋಪಿಗೆ ಜಾಮೀನು ಸಿಗುವುದು ಮತ್ತಷ್ಟು ಕಷ್ಟವಾಗಿದೆ. ಜೈಲಿನಿಂದ ಹೊರಬಂದು ಪದೇ ಪದೇ ಪರೀಕ್ಷಾ ಅಕ್ರಮಗಳಲ್ಲಿ ಆರ್ಡಿ ಪಾಟೀಲ್ ಭಾಗಿಯಾಗಿದ್ದನು.
ಕೆಇಎ ಪರೀಕ್ಷಾ ಅಕ್ರಮ ಪ್ರಕರಣ: ಸಿಐಡಿ ವಿರುದ್ಧ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಸಿಡಿಮಿಡಿ
ಕರ್ನಾಟಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ಪರೀಕ್ಷೆ ಅಕ್ರಮದಲ್ಲಿ ಜೈಲಿಗೆ ಹೋಗಿ ಬಂದ ನಂತರವೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷೆಯಲ್ಲಿ ಅಕ್ರಮ ಎಸಗಿ ಆರ್.ಡಿ.ಪಾಟೀಲ್ ಮತ್ತೆ ಜೈಲು ಸೇರಿದ್ದಾನೆ. ಹೀಗಾಗಿ ಯಾವುದೇ ಕಾರಣಕ್ಕೂ ಜೈಲಿನಿಂದ ಬಿಡುಗಡೆ ಆಗಬಾರದು ಎಂಬ ಕಾರಣಕ್ಕೆ ಸಿಐಡಿ ಕೋಕಾ ಜಾರಿ ಮಾಡಿದೆ. ಈ ಬಗ್ಗೆ ವರದಿ ಸಿದ್ದಗೊಳಿಸಿ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಸಿಐಡಿ ಮೂಲಗಳು ಏಷ್ಯಾ ನೆಟ್ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿವೆ.
'ಸುಮ್ಮನೆ ಬೊಗಳಬೇಡ್ರೋ, ದಾಖಲೆ ಇಟ್ಟು ಸುದ್ದಿ ಮಾಡ್ರೋ..' ಮಾಧ್ಯಮಗಳ ವಿರುದ್ಧ ನಾಲಗೆ ಹರಿಬಿಟ್ಟ ಆರ್‌ಡಿ ಪಾಟೀಲ!
ಇನ್ನು ಆರ್.ಡಿ.ಪಾಟೀಲ್ ವಿರುದ್ಧ ಪಿಎಸ್ಐ ಅಕ್ರಮದಲ್ಲಿ 9 ಕೇಸಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆಗಿದ್ದರೆ, 3 ಕೇಸಲ್ಲಿ ತನಿಖೆ ನಡೆಯುತ್ತಿವೆ. ಕೆಇಎ ಪರೀಕ್ಷೆ ಸಂಬಂಧ 8 ಕೇಸ್ ಗಳು ಆರ್.ಡಿ.ಪಾಟೀಲ್ ವಿರುದ್ಧ ದಾಖಲಾಗಿದ್ದು, ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿಯೂ ಅಕ್ರಮ ಎಸಗಿರುವ ಬಗ್ಗೆ ಆರ್.ಡಿ.ಪಾಟೀಲ್ ವಿರುದ್ಧ ಕೇಸ್ ಗಳು ದಾಖಲಾಗಿವೆ. ಹೀಗಾಗಿ, ಗುಂಪು ಕಟ್ಟಿಕೊಂಡು ಒಂದೇ ರೀತಿಯ ಅಪರಾಧಗಳನ್ನ ಪದೇ ಪದೇ ಎಸಗುವವರ ವಿರುದ್ಧ ಕೋಕಾ ಜಾರಿ ಮಾಡಲಾಗುತ್ತದೆ. ಹೀಗಾಗಿ ಆರ್.ಡಿ.ಪಾಟೀಲ್ ವಿರುದ್ದ ಕೋಕಾ ಜಾರಿ ಮೂಲಕ ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕಲು ಸಿಐಡಿ ಮುಂದಾಗಿದೆ.