ಮೈಸೂರು- ಬೆಂಗಳೂರು ಹೆದ್ದಾರಿ ಲೋಪ ಪತ್ತೆಗೆ ತಾಂತ್ರಿಕ ತಂಡ: ಸಚಿವ ಚೆಲುವರಾಯಸ್ವಾಮಿ

By Kannadaprabha News  |  First Published Jun 27, 2023, 12:58 PM IST

ಸಾಕಷ್ಟು ಕಾಮಗಾರಿಗಳು ಪೂರ್ಣಗೊಳ್ಳುವುದು ಬಾಕಿ ಇದ್ದರೂ ಟೋಲ್‌ ಸಂಗ್ರಹ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಲೋಪಗಳನ್ನು ಸರಿಪಡಿಸುವವರೆಗೂ ಶ್ರೀರಂಗಪಟ್ಟಣ ಟೋಲ್‌ ಕೇಂದ್ರದಲ್ಲಿ ಟೋಲ್‌ ಸಂಗ್ರಹ ಮಾಡದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲು ತೀರ್ಮಾನ. 


ಬೆಂಗಳೂರು(ಜೂ.27):  ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಸಾಕಷ್ಟುದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಲೋಪ ದೋಷಗಳ ಪತ್ತೆಗೆ ತಾಂತ್ರಿಕ ತಂಡ ರಚನೆ ಹಾಗೂ ಹೆದ್ದಾರಿಯ ನ್ಯೂನತೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಲು ಕೃಷಿ ಸಚಿವ ಎನ್‌.ಚೆಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಮಂಡ್ಯ ಜನಪ್ರತಿನಿಧಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.

ಅಲ್ಲದೆ ಸಾಕಷ್ಟು ಕಾಮಗಾರಿಗಳು ಪೂರ್ಣಗೊಳ್ಳುವುದು ಬಾಕಿ ಇದ್ದರೂ ಟೋಲ್‌ ಸಂಗ್ರಹ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಲೋಪಗಳನ್ನು ಸರಿಪಡಿಸುವವರೆಗೂ ಶ್ರೀರಂಗಪಟ್ಟಣ ಟೋಲ್‌ ಕೇಂದ್ರದಲ್ಲಿ ಟೋಲ್‌ ಸಂಗ್ರಹ ಮಾಡದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ.

Tap to resize

Latest Videos

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ: ನವೆಂಬರ್ ಅಂತ್ಯಕ್ಕೆ ಮದ್ದೂರು, ಶ್ರೀರಂಗಪಟ್ಟಣ ಬೈಪಾಸ್ ಓಪನ್

ಮಂಡ್ಯ ಉಸ್ತುವಾರಿ ಸಚಿವರೂ ಆದ ಅವರು ಸೋಮವಾರ ವಿಧಾನಸೌಧದಲ್ಲಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಸ್ತೆ ನಿರ್ಮಾಣ ಮಾಡಿರುವ ಕಂಪನಿಯ ಪ್ರತಿನಿಧಿಗಳೊಂದಿಗೆ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಆಗುತ್ತಿರುವ ಅಪಘಾತಗಳು ಹಾಗೂ ಪರಿಹಾರ ಕ್ರಮಗಳ ಬಗ್ಗೆ ಸಭೆ ನಡೆಸಿದರು. ಈ ವೇಳೆ ಜನಪ್ರತಿನಿಧಿಗಳು ರಸ್ತೆಯ ಅವ್ಯವಸ್ಥೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಅಪಘಾತ ಹೆಚ್ಚಳಕ್ಕೆ ಕಾರಣಗಳೇನು? ಯಾವ್ಯಾವ ಸ್ಥಳಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ? ಟ್ರಾಮಾ ಕೇರ್‌ ಆಗಲಿ, ಸೂಕ್ತ ಆ್ಯಂಬುಲೆನ್ಸ್‌ ವ್ಯವಸ್ಥೆಯಾಗಲಿ ಇಲ್ಲ. ಮಳೆಗಾಲದಲ್ಲಿ ರಸ್ತೆ ಹಾಗೂ ಸರ್ವಿಸ್‌ ರಸ್ತೆ ಎರಡೂ ಕಡೆ ನೀರು ನಿಲ್ಲಲು ಕಾರಣವೇನು? ರಸ್ತೆ ದೀಪಗಳು ಹಾಳಾಗಿರುವುದು, ಅಂಡರ್‌ಪಾಸ್‌ ಹಾಗೂ ಪಾದಚಾರಿ ಮೇಲ್ಸೇತುವೆ, ಚೈನ್‌ಲಿಂಕ್‌ ರಸ್ತೆಗಳ ಸಮಸ್ಯೆ, ಪಾರ್ಕಿಂಗ್‌ ಸಮಸ್ಯೆ, ವಿದ್ಯುತ್‌ ಕಂಬಗಳ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಬೆಳಕು ಚೆಲ್ಲಿದರು ಎಂದು ಮೂಲಗಳು ತಿಳಿಸಿವೆ.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚೆಲುವರಾಯಸ್ವಾಮಿ, ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರಿಂದ ಕಾಮಗಾರಿ ಮುಗಿಯುವ ಮೊದಲೇ ರಸ್ತೆ ಉದ್ಘಾಟಿಸಿ ಟೋಲ್‌ ಸಂಗ್ರಹ ಮಾಡಲಾಗಿದೆ. ರಸ್ತೆ ಆರಂಭವಾದ ಬಳಿಕ 45 ಅಪಘಾತಗಳು ಸಂಭವಿಸಿದ್ದು, ರಸ್ತೆ ಶುರುವಾಗುವ ಮೊದಲಿಗಿಂತಲೂ ಮೂರು ಪಟ್ಟು ಹೆಚ್ಚು ಸಾವುಗಳು ಸಂಭವಿಸಿವೆ.

ಆ್ಯಂಬುಲೆನ್ಸ್‌ ಇಲ್ಲ, ಕ್ರೇನ್‌ ಇಲ್ಲ, ಟ್ರಾಮಾಕೇರ್‌ ಇಲ್ಲ. ಹೀಗಿದ್ದರೂ ಹೇಗೆ ಟೋಲ್‌ ಸಂಗ್ರಹಿಸುತ್ತಾರೆ? ಹೀಗಾಗಿ ಇವೆಲ್ಲವನ್ನೂ ಸರಿಪಡಿಸುವ ತನಕ ಶ್ರೀರಂಗಪಟ್ಟಣ ಟೋಲ್‌ ಸಂಗ್ರಹಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

Bengaluru mysuru expressway: ಮುಂದುವರಿದ ಸಾವಿನ ಸರಣಿ; ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು!

ಈ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಾರಂಭಿಸಿದಾಗ ಒಪ್ಪಂದದ ಪ್ರಕಾರ ಷರತ್ತುಗಳು ಏನಿತ್ತು? ರಸ್ತೆ ಕಾಮಗಾರಿ ಸಂಪೂರ್ಣಗೊಳ್ಳದೇ ಟೋಲ್‌ ಸಂಗ್ರಹ ಮಾಡುತ್ತಿರುವುದು ಏಕೆ? ಕಾಮಗಾರಿ ಪೂರ್ಣಗೊಂಡ ಮೇಲೆ ಟೋಲ… ಸಂಗ್ರಹ ಮಾಡಬೇಕಲ್ಲವೇ? ಎಂದು ಪ್ರಶ್ನಿಸಿರುವುದಾಗಿ ತಿಳಿಸಿದರು.

ತಾಂತ್ರಿಕ ತಂಡ ರಚನೆಗೆ ನಿರ್ಣಯ:

ಅಲ್ಲದೆ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ನಗರಗಳ ಬಳಿ ಹೆದ್ದಾರಿಯಲ್ಲಿ ಅನೇಕ ಸಮಸ್ಯೆಗಳಿವೆ. ಪುಟ್‌ಪಾತ್‌ ಸಮಸ್ಯೆಗಳಿವೆ. ಎಕ್ಸಿಟ್‌-ಎಂಟ್ರಿ ಪಾಯಿಂಟ್ಸ್‌ಗಳು ಆಗಬೇಕಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಂದು ತಾಂತ್ರಿಕ ತಂಡವನ್ನು ರಚನೆ ಮಾಡಿ, ಅದರಲ್ಲಿ ಅವೈಜ್ಞಾನಿಕ ಕಾಮಗಾರಿ ಮತ್ತು ಸಾರ್ವಜನಿಕರಿಂದ ಬಂದಿರುವ ದೂರುಗಳ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿಯನ್ನು ಕೊಡಬೇಕೆಂದು ತೀರ್ಮಾನಿಸಲಾಗಿದೆ ಎಂದರು. ಸಂಸದರಾದ ಸುಮಲತಾ ಅಂಬರೀಷ್‌, ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ರವಿಕುಮಾರ್‌ ಗಣಿಗ, ರಮೇಶ್‌ ಬಂಡಿಸಿದ್ದೇಗೌಡ, ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಮಧು ಮಾದೇಗೌಡ ಸೇರಿ ಹಲವರು ಹಾಜರಿದ್ದರು.

click me!