ಏಪ್ರಿಲ್‌ನಿಂದ ಮತ್ತಷ್ಟು ತೆರಿಗೆ ಭಾರ: ಶೇ.2ರಷ್ಟು ಹೊಸದಾಗಿ ಭೂ ಸಾರಿಗೆ ಉಪ ಕರ

By Kannadaprabha NewsFirst Published Jan 5, 2021, 7:48 AM IST
Highlights

ಏಪ್ರಿಲಿಂದ ಭೂ ಸಾರಿಗೆ ಕರ ಭಾರ! ಆಸ್ತಿ ತೆರಿಗೆ ಮೇಲೆ ಶೇ.2ರಷ್ಟುಸಾರಿಗೆ ಕರ ವಿಧಿಸಿದ ಬಿಬಿಎಂಪಿ | ಆಡಳಿತಾಧಿಕಾರಿ ಗುಪ್ತಾ ಒಪ್ಪಿಗೆ

ಬೆಂಗಳೂರು(ಜ.05): ಕೊರೋನಾ ಸೋಂಕಿನಿಂದ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರಾಜಧಾನಿಯ ಆಸ್ತಿ ಮಾಲಿಕರಿಗೆ ಮುಂಬರುವ ಏಪ್ರಿಲ್‌ನಿಂದ ಮತ್ತಷ್ಟು ತೆರಿಗೆ ಭಾರ ಹೆಚ್ಚಾಗಲಿದ್ದು, ಆಸ್ತಿ ತೆರಿಗೆ ಮೇಲೆ ಶೇ.2ರಷ್ಟು ಹೊಸದಾಗಿ ಭೂ ಸಾರಿಗೆ ಉಪ ಕರ ವಿಧಿಸಲಾಗಿದೆ. ಭೂ ಸಾರಿಗೆ ಉಪಕರ ವಿಧಿಸುವ ಪ್ರಸ್ತಾವನೆಗೆ ಆಡಳಿತಾಧಿಕಾರಿ ಗೌರವ್‌ಗುಪ್ತಾ ಅವರು ಅನುಮೋದನೆ ನೀಡಿದ್ದು, ಏಪ್ರಿಲ್‌ ಒಂದರಿಂದ ಜಾರಿಗೆ ಬರಲಿದೆ.

ಇದೀಗ ಬಿಬಿಎಂಪಿಯಲ್ಲಿ ಸದಸ್ಯರ ಅಧಿಕಾರ ಅವಧಿ ಮುಕ್ಕಾಯಗೊಂಡಿರುವ ಅವಧಿಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿಗಳು ತಮ್ಮ ಅಧಿಕಾರ ಬಳಸಿ ಭೂ ಸಾರಿಗೆ ಉಪಕರ ವಿಧಿಸುವ ಪ್ರಸ್ತಾವನೆಗೆ ಅಂಕಿತ ಹಾಕಿ ಏಪ್ರಿಲ್‌ನಿಂದ ಜಾರಿಗೊಳಿಸುವಂತೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

70 ಕೋಟಿ ಸಂಗ್ರಹ:

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸುಮಾರು 18 ಲಕ್ಷ ಆಸ್ತಿಗಳಿಂದ ವಾರ್ಷಿಕವಾಗಿ ಬಿಬಿಎಂಪಿ ಆಸ್ತಿ ತೆರಿಗೆ ರೂಪದಲ್ಲಿ ಸುಮಾರು .2,500 ಕೋಟಿಯಿಂದ .3 ಸಾವಿರ ಕೋಟಿವರೆಗೆ ಸಂಗ್ರಹಿಸಲಿದೆ. ಆಸ್ತಿ ತೆರಿಗೆ ಮೇಲೆ ಶೇ.2ರಷ್ಟುಭೂ ಸಾರಿಗೆ ಉಪಕರ ವಿಧಿಸಿದರೆ ವಾರ್ಷಿಕವಾಗಿ 60ರಿಂದ 70 ಕೋಟಿ ರು. ಹೆಚ್ಚುವರಿಯಾಗಿ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ.

ಬಿಬಿಎಂಪಿ ಕೈಗೆ ಬಾರದ ಉಪಕರ:

ಬಿಬಿಎಂಪಿ ಆಸ್ತಿ ಮಾಲಿಕರಿಗೆ ಶೇ.2ರಷ್ಟುಉಪಕರ ಸಂಗ್ರಹಿಸಿದರೂ ಈ ಸಂಪನ್ಮೂಲವನ್ನು ಬಿಬಿಎಂಪಿ ಬಳಕೆ ಮಾಡಿಕೊಳ್ಳುವಂತಿಲ್ಲ. ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಿಬಿಎಂಪಿಯು ಸಂಗ್ರಹವಾಗುವ ಈ ಉಪಕರವನ್ನು ಭೂ ಸಾರಿಗೆ ಇಲಾಖೆಗೆ ನೀಡಬೇಕು. ಭೂ ಸಾರಿಗೆ ಇಲಾಖೆಯು ಉಪಕರವನ್ನು ನಗರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಲಿದೆ. ಉದಾ: ಸೈಕಲ್‌ ಮಾರ್ಗ, ಪಾದಚಾರಿ ಮಾರ್ಗ ಅಭಿವೃದ್ಧಿ ಇತ್ಯಾದಿ.

ಲೆಕ್ಕ ಪರಿಶೋಧನೆಯಲ್ಲಿ ಆಕ್ಷೇಪ:

ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಮೇಲೆ ಶೇ.2ರಷ್ಟುನಗರ ಭೂ ಸಾರಿಗೆ ಉಪಕರ ಸಂಗ್ರಹಿಸದಿರುವುದರಿಂದ ರಾಜಸ್ವ ನಷ್ಟಉಂಟಾಗಿರುವ ಕುರಿತು ಲೆಕ್ಕ ಪರಿಶೋಧನೆ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಹಾಗಾಗಿ, ಶೇ.2ರಷ್ಟುಸಾರಿಗೆ ಸೆಸ್‌ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕೆಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರು. ಈ ಎಲ್ಲ ಕಾರಣಕ್ಕೆ ಭೂ ಸಾರಿಗೆ ಉಪಕರ ಸಂಗ್ರಹಿಸುವುದಕ್ಕೆ ಅನುಮೋದನೆ ನೀಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹನಿಟ್ರ್ಯಾಪ್‌ ಮಾಡಿ 50-60 ಮಂದಿಗೆ ವಂಚಿಸಿದ್ದ ಮಾಜಿ ಶಿಕ್ಷಕಿ ಬಲೆಗೆ

ರಾಜ್ಯ ಸರ್ಕಾರ ಆಸ್ತಿ ತೆರಿಗೆಯೊಂದಿಗೆ ಭೂ ಸಾರಿಗೆ ಉಪಕರ ಸಂಗ್ರಹಿಸುವುದಕ್ಕೆ 2018ರಲ್ಲಿ ಆದೇಶಿಸಿದ್ದರೂ ಜಾರಿಯಾಗಿರಲಿಲ್ಲ. ಇದರಿಂದ ರಾಜ್ಯ ಸರ್ಕಾರದ ಆದಾಯಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಆಕ್ಷೇಪಿಸಿದ ಕಾರಣ ಜಾರಿಗೊಳಿಸಲಾಗಿದೆ ಎಂದು ‌ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್ ಹೇಳಿದ್ದಾರೆ.

click me!