
ಬೆಂಗಳೂರು(ಜ.05): ಹತ್ತು ತಿಂಗಳ ಬಳಿಕ ರಾಜ್ಯದಲ್ಲಿ ಶಾಲಾ-ಕಾಲೇಜು ಪುನರಾರಂಭವಾದ ಬೆನ್ನಲ್ಲೇ ರಾಜ್ಯದಲ್ಲಿ ಕೋವಿಡ್‌ಪೀಡಿತ ಶಿಕ್ಷಕರ ಸಂಖ್ಯೆ ಹೆಚ್ಚುತ್ತಿರುವುದು ಪೋಷಕರು ಮತ್ತು ಪಾಲಕರಲ್ಲಿ ದಿಗಿಲು ಮೂಡಿಸಿದೆ. ಶಾಲಾ, ಕಾಲೇಜು ಆರಂಭವಾಗಿ ಮೂರನೇ ದಿನವಾದ ಸೋಮವಾರ ಒಂದೇ ದಿನ ರಾಜ್ಯದಲ್ಲಿ ಮತ್ತೆ 21 ಶಿಕ್ಷಕರು (ತರಗತಿಗೆ ಹಾಜರಾಗಿದ್ದ ಇಬ್ಬರು ಸೇರಿ), ಇಬ್ಬರು ಉಪನ್ಯಾಸಕರಿಗೆ ಸೋಂಕು ದೃಢಪಟ್ಟಿದೆ. ಇದರ ಜತೆಗೆ ಇದೇ ಮೊದಲ ಬಾರಿಗೆ ಚಿಕ್ಕಮಗಳೂರಲ್ಲಿ ನಾಲ್ವರು ವಿದ್ಯಾರ್ಥಿಗಳಿಗೂ ಕೋವಿಡ್ ಪತ್ತೆಯಾಗಿದೆ. ಈ ಮೂಲಕ ಶಾಲೆ ಆರಂಭವಾದಂದಿನಿಂದ ಈವರೆಗೆ ರಾಜ್ಯದಲ್ಲಿ ಒಟ್ಟಾರೆ 35 ಬೋಧಕ ಸಿಬ್ಬಂದಿ ಹಾಗೂ ನಾಲ್ವರು ಮಕ್ಕಳಿಗೆ ಸೋಂಕು ದೃಢಪಟ್ಟಂತಾಗಿದೆ.
ಚಿತ್ರದುರ್ಗ 7, ಚಿಕ್ಕಮಗಳೂರು 5, ಶಿವಮೊಗ್ಗ 4, ಉತ್ತರ ಕನ್ನಡ, ಹಾವೇರಿ ತಲಾ 2, ಬಳ್ಳಾರಿ, ಕೊಪ್ಪಳದಲ್ಲಿ ತಲಾ ಒಬ್ಬರು ಶಿಕ್ಷಕರಲ್ಲಿ, ಯಾದಗಿರಿಯ ಇಬ್ಬರು ಉಪನ್ಯಾಸಕರಲ್ಲಿ ಕೋವಿಡ್ ಪತ್ತೆಯಾಗಿದೆ. ಈ ಹಿಂದೆ ಗದಗದಲ್ಲಿ 10, ಹಾಸನ 3, ಉತ್ತರ ಕನ್ನಡದಲ್ಲಿ 2, ಹಾವೇರಿಯಲ್ಲಿ ಒಬ್ಬ ಸೇರಿ ಒಟ್ಟು 16 ಮಂದಿ ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿತ್ತು. ಇದೀಗ ಮತ್ತೆ ಸೋಂಕು ಪತ್ತೆಯಾದ 21 ಬೋಧಕ ಸಿಬ್ಬಂದಿಯಲ್ಲಿ ಕೊಪ್ಪಳ ಮತ್ತು ಹಾವೇರಿಯ ಒಬ್ಬರು ಶಿಕ್ಷಕರು ಮೊದಲ ದಿನ ಶಾಲೆಗೆ ಹಾಜರಾಗಿರುವುದು ತೀವ್ರ ಆತಂಕ ಸೃಷ್ಟಿಸಿದೆ.
ಹೋಂ ಐಸೋಲೇಷನ್:
ಚಿಕ್ಕಮಗಳೂರಲ್ಲಿ ಐವರು ಶಿಕ್ಷಕರ ಜೊತೆಗೆ ಜಿಲ್ಲೆಯ ವಿವಿಧ ತಾಲೂಕಿನ ನಾಲ್ವರು ವಿದ್ಯಾರ್ಥಿಗಳಿಗೂ ಕೋವಿಡ್ ಕಾಣಿಸಿಕೊಂಡಿರುವುದು ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಯಾವುದೇ ರೋಗ ಲಕ್ಷಣಗಳಿಲ್ಲದ ಈ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಶಾಲೆಗೆ ಬಂದಿದ್ರು:
ಕೊಪ್ಪಳ ತಾಲೂಕಿನ ವದಗನಹಾಳ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಿಕ್ಕಕುರವತ್ತಿ ಶಾಲೆಯ ಶಿಕ್ಷಕರಿಬ್ಬರ ಪಾಸಿಟಿವ್ ಪ್ರಕರಣ ಶಾಲೆಯ ವಿದ್ಯಾರ್ಥಿಗಳು ಮತ್ತು ಇತರೆ ಶಿಕ್ಷಕರು, ಸಿಬ್ಬಂದಿಯಲ್ಲೂ ದಿಗಿಲು ಮೂಡಿಸಿದೆ. ಕೊಪ್ಪಳದ ಶಿಕ್ಷಕಿ ಡಿ.29ರಂದೇ ಶಿಕ್ಷಕಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದರು. ಆದರೆ, ಎರಡು ದಿನವಾದರೂ ವರದಿ ಬಾರದಿರುವುದರಿಂದ ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕೆಂಬ ಸೂಚನೆ ಹಿನ್ನೆಲೆಯಲ್ಲಿ ಜ.1ರಂದು ಶಾಲೆಗೆ ಹಾಜರಾಗಿದ್ದರು. ಜತೆಗೆ ಅಂದು 12 ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಲ್ಲದೆ, ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನೂ ಮಾಡಿದ್ದಾರೆ. ಸ್ಟಾಫ್ ರೂಮ್‌ನಲ್ಲಿ ಇತರೆ ಶಿಕ್ಷಕರೊಂದಿಗೂ ಬೆರೆತಿದ್ದಾರೆ. ಇನ್ನು ಹಾವೇರಿಯ ಚಿಕ್ಕಕುರುವತ್ತಿಯ ಶಿಕ್ಷಕ ಮೊದಲ ದಿನ ಪಾಠ ಮಾಡಿದ್ದರು, ಇತರೆ ಶಿಕ್ಷಕರ ಜತೆಗೂ ಬೆರೆತಿದ್ದರು. ಎರಡೂ ಪ್ರಕರಣಗಳಲ್ಲಿ ಶಿಕ್ಷಕರ ಸಂಪರ್ಕಕ್ಕೆ ಬಂದವರೆಲ್ಲರಿಗೂ ಕೋವಿಡ್ ಟೆಸ್ಟ್ ಮಾಡುವಂತೆ ಸೂಚಿಸಲಾಗಿದೆ.
ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬಂದ ವಿದ್ಯಾರ್ಥಿಗಳು, ಶಿಕ್ಷಕರಿಗಷ್ಟೇ ಶಾಲೆ-ಕಾಲೇಜಿಗೆ ಹಾಜರಾಗಲು ಅನುಮತಿಯಿದ್ದರೂ ಇಬ್ಬರು ಶಿಕ್ಷಕರು ಪರೀಕ್ಷೆಯ ವರದಿ ಬರುವ ಮೊದಲೇ ಕರ್ತವ್ಯಕ್ಕೆ ಹಾಜರಾಗಿರುವುದು ಆತಂಕ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ