
ಬೆಂಗಳೂರು (ಆ.14): ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿಯೇ ಬರಗಾಲ ಪರಿಸ್ಥಿತಿ ಉಂಟಾಗಿದೆ. ಆದರೆ, ಇಂತಹ ಪರಿಸ್ಥಿತಿಯಲ್ಲಿಯೂ ಕಾವೇರಿ ನೀರನ್ನು ಹರಿಸುವಂತೆ ತಮಿಳುನಾಡು ಸರ್ಕಾರ ಕ್ಯಾತೆ ತೆಗೆಯುತ್ತಿದೆ. ಆದರೆ, ಕಾವೇರಿ ಜಲವಿವಾದ ನ್ಯಾಯಮಂಡಳಿ ಅನ್ವಯ ನೀರು ಬಳಸದೇ ಮಿತಿಮೀರಿದ ನೀರು ಬಳಸಿ, ಈಗ ಕನ್ನಡಿಗರ ಪಾಲಿನ ನೀರನ್ನು ಕಸಿಯಲು ಮುಂದಾಗಿದ್ದಾರೆ ಎನ್ನುವ ಅರ್ಥದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ಪತ್ರವನ್ನು ಬರೆದಿದ್ದಾರೆ.
ತಮಿಳುನಾಡು ಸರ್ಕಾರ ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದಿರುವುದು ನಿಮ್ಮ ಗಮನಕ್ಕೆ ಬಂದಿದೆ ಎಂದು ಭಾವಿಸಿದ್ದೇನೆ. ಜೊತೆಗೆ ತಮಿಳುನಾಡು ಸುಪ್ರಿಂ ಕೋರ್ಟ್ ಗೆ ಹೋಗಬಹುದೆಂದು ಮಾಧ್ಯಮದ ವರದಿಗಳಲ್ಲಿ ನಾವು ನೋಡಿದ್ದೇವೆ. ಈ ವಿಚಾರದಲ್ಲಿ ಕೆಳಕಂಡ ಮಹತ್ವದ ವಾಸ್ತವಿಕ ಅಂಶಗಳನ್ನು ಇಟ್ಟುಕೊಂಡು ಮುಂಬರುವ ದಿನಗಳಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ನಾನು (ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ) ಈ ಪತ್ರ ಬರೆಯುತ್ತಿದ್ದೇನೆ ಎಂದು ಎಂದು ತಿಳಿಸಿದ್ದಾರೆ.
ನಟ ಉಪೇಂದ್ರನಿಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್: ಎಫ್‌ಐಆರ್‌ಗೆ ತಡೆ
ಜೂನ್ 1 ರಂದು ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಒಟ್ಟು 24.352 ಟಿಎಂಸಿ ನೀರಿತ್ತು. ಅದೇ ರೀತಿ ಮೆಟ್ಟೂರು ಜಲಾಶಯದಲ್ಲಿ 69.77 ಟಿಎಂಸಿ, ಭವಾನಿ ಸಾಗರ ಜಲಾಶಯದಲದಲಿ 16.653 ಟಿಎಂಸಿ ಇದ್ದು, ಬಿಳಿಗುಂಡ್ಲು ಮಾಪನ ಕೇಂದ್ರದಿಂದ 6-8-2023 ಕ್ಕೆ 14.054 ಟಿಎಂಸಿ ನೀರು ಹೋಗಿರುವುದು ಮಾಧ್ಯಮಗಳಿಂದ ಗೊತ್ತಾಗಿದೆ. ಒಟ್ಟು ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಈ ವರ್ಷ 83.831ಟಿಎಂಸಿ ನೀರು ಬಂದಿರುತ್ತದೆ.
ತಮಿಳುನಾಡು ಕುರುವೈ ಬೆಳೆಗೆ 1.80 ಲಕ್ಷ ಎಕರೆ ಬೆಳೆ ಕಾವೇರಿ ಜಲ ವಿವಾದ ನ್ಯಾಯಮಂಡಳಿ (ಸಿಡಬ್ಲುಡಿಟಿ) (Cauvery Water Disputes Tribunal- CWDT) ಪ್ರಕಾರ ಬೆಳೆಯಬೇಕು. ಜೊತೆಗೆ ಈ ಬೆಳೆಗೆ 32 ಟಿಎಂಸಿ ನೀರು ಬಳಸಬೇಕು. ಆದರೆ, ತಮಿಳುನಾಡು 7-8-23 ಕ್ಕೆ 60.97 ಟಿಎಂಸಿ ನೀರು ಕುರುವೈ ಬೆಳೆಗೆ ಬಳಕೆ ಮಾಡಿದೆ. ಅಂದರೆ, ಇದರ ಅರ್ಥ ಸಿಡಬ್ಲುಡಿಟಿ ಆದೇಶದ ಎರಡು ಪಟ್ಟು ನೀರನ್ನು ಹೆಚ್ಚಾಗಿ ಬೆಳೆಗಳಿಗೆ ಬಳಕೆ ಮಾಡಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಇರುವುದನ್ನು ಲೆಕ್ಕಿಸದೇ ಸಿಡಬ್ಲುಡಿಟಿ ಆದೇಶ ಉಲ್ಲಂಘನೆ ಮಾಡಿ ನಾಲ್ಕು ಪಟ್ಡು ಕುರುವೈ ಏರಿಯಾ ಬೆಳೆಗೆ ನೀರನ್ನು ಒದಗಿಸಿದೆ. ಇದನ್ನು ನಮ್ಮ ಅಧಿಕಾರಿಗಳು ಸಿಡಬ್ಲುಎಂಎ ದಲ್ಲಿ ಪ್ರತಿಭಟಿಸದೇ ಸುಮ್ಮನೆ ಇದ್ದದ್ದು ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಿದೆ.
Mandya: ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡುಗಡೆ
ಈಗಿರುವ ನಮ್ಮ ನಾಲ್ಕು ಜಲಾಶಯಗಳ ನಿರಿನ ಮಟ್ಟ ಬೆಂಗಳೂರು ನಗರ, ಕಾವೇರಿ ಜಲಾನಯನ ಪ್ರದೇಶದ ನಗರ ಮತ್ತು ಗ್ರಾಮಗಳ ಕುಡಿಯುವ ನೀರಿಗೆ ಕೊರತೆಯಾಗುತ್ತದೆ. ಅದೇ ರೀತಿ ಕಾವೇರಿ ಜಲಾನಯನ ಪ್ರದೇಶದ ಖಾರೀಫ್ ಬೆಳೆಗಳಿಗೆ ನಿರಿನ ಕೊರತೆಯಾಗುತ್ತದೆ. ಹೀಗಾಗಿ, ನೀರು ಬಿಡುವುದರಿಂದ ಕರ್ನಾಟಕದ ಜನತೆ ಮತ್ತು ರೈತರನ್ನು ಸಂಕಷ್ಟಕ್ಕೆ ಈಡು ಮಾಡುತ್ತದೆ. ತಮಿಳುನಾಡಿಗೆ ಸೌಥ್ ವೆಸ್ಟ್ ಮತ್ತು ನಾರ್ಥ್ ಈಸ್ಟ್ ಮಾನಸೂನ್ ಮಳೆ ಆಗುತ್ತಿರುವುದರಿಂದ ನಮಗೆ ನೀರು ಬಿಡಲು ಸಾಧ್ಯವಿಲ್ಲವೆಂದು ವಾಸ್ತವಾಂಶದ ಮೇಲೆ ನಾವು ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ಈ ಮೂಲಕ ನಾನು ತಮ್ಮಲ್ಲಿ ಆಗ್ರಹ ಮಾಡುತ್ತೇನೆ. ಜೊತೆಗೆ ತಾವು ಕಾವೇರಿ ಜಲಾನಯನ ಪ್ರದೇಶದ ನೀರಿನ ಹಿತಾಸಕ್ತಿ ಕಾಪಾಡುತ್ತೀರೆಂದು ನಂಬಿರುವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರದ ಮೂಲಕ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ