ಶಿಷ್ಟಾಚಾರ ನೆಪದಲ್ಲಿ ಬಿಜೆಪಿ ಶಾಸಕರ ಹಕ್ಕುಚ್ಯುತಿ ಉಲ್ಲಂಘನೆ ಆರೋಪಿಸಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಬಿಜೆಪಿ ಶಾಸಕರು ಧರಣಿ ನಡೆಸಿದ್ದು, ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಧ್ಯ ಪ್ರವೇಶಿಸಿ ಭರವಸೆ ನೀಡಿದ ಬಳಿಕ ಧರಣಿ ಅಂತ್ಯವಾಗಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಆ.14): ಶಿಷ್ಟಾಚಾರ ನೆಪದಲ್ಲಿ ಬಿಜೆಪಿ ಶಾಸಕರ ಹಕ್ಕುಚ್ಯುತಿ ಉಲ್ಲಂಘನೆ ಆರೋಪಿಸಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಬಿಜೆಪಿ ಶಾಸಕರು ಧರಣಿ ನಡೆಸಿದ್ದು, ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಧ್ಯ ಪ್ರವೇಶಿಸಿ ಭರವಸೆ ನೀಡಿದ ಬಳಿಕ ಧರಣಿ ಅಂತ್ಯವಾಗಿದೆ.
ದ.ಕ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರ ಕಚೇರಿ ಎದುರು ಬಿಜೆಪಿ ಶಾಸಕರು(BJP MLAs), ಸಂಸದ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್(BJP state president nalin kumar kateel) ಕಟೀಲ್ ಧರಣಿ ನಡೆಸಿದ್ದಾರೆ. ಡಿಸಿ ಕಚೇರಿ ಪ್ರವೇಶ ದ್ವಾರದಲ್ಲೇ ಕುಳಿತ ಶಾಸಕರು, ನಳಿನ್ ಕುಮಾರ್ ಕಟೀಲ್ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ಯೆ ಯತ್ನ ಆರೋಪ, ಪ್ರಭು ಚೌಹಾಣ್ ಜತೆ ಚರ್ಚಿಸುವೆ: ಕಟೀಲ್
ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಉತ್ತರದ ಭರತ್ ಶೆಟ್ಟಿ, ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ಎಂಎಲ್ ಸಿ ಪ್ರತಾಪ್ ಸಿಂಹ ನಾಯಕ್ ಭಾಗಿಯಾಗಿದ್ದರು. ಮೂಡಬಿದ್ರೆ ಮತ್ತು ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಹಕ್ಕುಚ್ಯುತಿ ಆಗಿದೆ ಅಂತ ಆರೋಪಿಸಿ ಧರಣಿ ನಡೆಸಲಾಗಿದೆ.
ಸರ್ಕಾರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಹೆಸರಲ್ಲಿ ಶಾಸಕರಿಗೆ ಮಾಹಿತಿ ನೀಡದೇ ಕಾರ್ಯಕ್ರಮ ರದ್ದು ಮಾಡಲಾಗಿದೆ. ದ.ಕ ಜಿಲ್ಲಾಡಳಿತದಿಂದ ಕಾರ್ಯಕ್ರಮಗಳ ರದ್ದು ಮಾಡಿ ಶಾಸಕರಿಗೆ ಅವಮಾನ ಆರೋಪಿಸಿ ಧರಣಿ ಕೂತಿದ್ದಾರೆ. ಮೂಡಬಿದಿರೆಯ ಇರುವೈಲ್ ಪಂಚಾಯ್ ಕಟ್ಟದ ಉದ್ಘಾಟನೆ ವಿಚಾರದಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಪ್ರಿಯಾಂಕ್ ಖರ್ಗೆ(Priyank kharge) ಹೆಸರಿಲ್ಲ ಅಂತ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಶಿಷ್ಟಾಚಾರ ಉಲ್ಲಂಘನೆ ಹೆಸರಲ್ಲಿ ಪಿಡಿಓ ಹಾಗೂ ತಾ.ಪಂ ಇಓ ಸಸ್ಟೆಂಡ್ ಮಾಡಲಾಗಿತ್ತು. ಬಂಟ್ವಾಳದಲ್ಲೂ ಸರ್ಕಾರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ವಿವಾದದಲ್ಲಿ ಆಮಂತ್ರಣದಲ್ಲಿ ಕಾಂಗ್ರೆಸ್ ಎಂಎಲ್ ಸಿಗಳ ಹೆಸರು ಮೇಲೆಕೆಳಗಾಗಿದೆ ಅಂತ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಕಾರ್ಯಕ್ರಮವೂ ರದ್ದಾಗಿತ್ತು.
ಬಂಟ್ವಾಳ ಮತ್ತು ಮೂಡಬಿದಿರೆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರಿಗೆ ಅವಮಾನ ಆರೋಪಿಸಿ ಅಮಾನತು ಆದೇಶ ಹಿಂಪಡೆಯಲು ಹಾಗೂ ಶಾಸಕರ ಹಕ್ಕಿನ ರಕ್ಷಣೆಗೆ ಒತ್ತಾಯಿಸಿ ಧರಣಿ ನಡೆಸಲಾಗಿದೆ. ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಕ್ಕುಚ್ಯುತಿ ಆಗಿದೆ. ಜೊತೆಗೆ ಸ್ಥಳೀಯ ಕಾಂಗ್ರೆಸ್ ಮಾಜಿ ಶಾಸಕರು, ಮಾಜಿ ಸಚಿವರು ಹಾಗೂ ಕೈ ನಾಯಕರಿಂದ ಆಡಳಿತದಲ್ಲಿ ಹಸ್ತಕ್ಷೇಪ ಆರೋಪಿಸಿ ಧರಣಿ ನಡೆದಿದ್ದು, ಡಿಸಿ ಭರವಸೆ ಬಳಿಕ ಗಡುವು ಕೊಟ್ಟು ಧರಣಿ ಕೈ ಬಿಡಲಾಗಿದೆ.
ಡಿಸಿ ಜೊತೆ ಬಿಜೆಪಿ ಶಾಸಕರ ವಾಗ್ವಾದ: ಭರವಸೆ ಬಳಿಕ ಧರಣಿ ವಾಪಸ್!
ಬಿಜೆಪಿ ಶಾಸಕರ ಪ್ರತಿಭಟನಾ ಸ್ಥಳಕ್ಕೆ ದ.ಕ ಡಿಸಿ ಮುಲ್ಲೈ ಮುಗಿಲನ್(DC Mullai Mugilan IAS) ಆಗಮಿಸಿ ಶಾಸಕರು, ಸಂಸದ ನಳಿನ್ ಜೊತೆ ಡಿಸಿ ಮಾತುಕತೆ ನಡೆಸಿದರು. ಈ ವೇಳೆ ದ.ಕ ಜಿಲ್ಲಾಧಿಕಾರಿಗೆ ಹಕ್ಕುಚ್ಯುತಿ ಬಗ್ಗೆ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿವರಣೆ ನೀಡಿದರು. ಶಾಸಕರಿಗೆ ಜಿಲ್ಲೆಯಲ್ಲಿ ಕೆಲಸ ಮಾಡಲು ಆಗದ ಪರಿಸ್ಥಿತಿ ಇದೆ. ಪ್ರೊಟೋಕಾಲ್ ವಿಚಾರದಲ್ಲಿ ನೀವು ಇಓ,ಪಿಡಿಓ ಅಮಾನತು ಮಾಡಿದ್ದೀರಿ. ಮೊನ್ನೆ ಸಿಎಂ ಸಿದ್ದರಾಮಯ್ಯ(CM Siddaramaiah) ಹೇಳಿದ್ರೂ ನೀವು ಅಮಾನತು ರದ್ದು ಮಾಡಿಲ್ಲ. ಶಾಸಕರಿಗೆ ಗೌರವ ಕೊಡುವ ಕೆಲಸ ಜಿಲ್ಲಾಡಳಿತ ಮಾಡ್ತಿಲ್ಲ. ದ.ಕ ಜಿಲ್ಲೆಯಲ್ಲಿ ಸೋತವರು ಅಧಿಕಾರ ಚಲಾಯಿಸ್ತಾ ಇದಾರೆ. ತಕ್ಷಣ ಅಮಾನತು ಆದೇಶ ವಾಪಾಸ್ ಮಾಡಿ ಅಂತ ಆಗ್ರಿಹಿಸ್ತಾ ಇದೀವಿ ಎಂದರು.
ಈ ವೇಳೆ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜೊತೆ ಬಿಜೆಪಿ ಶಾಸಕರ ವಾಗ್ವಾದ ನಡೆದಿದೆ. ಶಾಸಕರನ್ನ ಉದ್ದೇಶಿಸಿ ಸಮಾಜಾಯಿಷಿಕೆ ನೀಡಿದ ಡಿಸಿ ಮುಗಿಲನ್, ಮುಂದೂಡಿದ ಕಾರ್ಯಕ್ರಮದ ಬಗ್ಗೆ ಯಾವುದೇ ಅಧಿಕೃತ ಆದೇಶ ಮಾಡಿಲ್ಲ. ಜಿಲ್ಲಾಧಿಕಾರಿಯಾಗಿ ನಾನು ಯಾವುದೇ ಆದೇಶ ಮಾಡಿಲ್ಲ. ಇರುವೈಲ್ ಹಾಗೂ ಬಂಟ್ವಾಳ ಕಾರ್ಯಕ್ರಮ ಮುಂದೂಡಲು ಆದೇಶ ಮಾಡಿಲ್ಲ. ಸದ್ಯ ನಾನು ಹೊಸ ಲಿಖಿತ ಆದೇಶ ಎಲ್ಲರಿಗೂ ಕೊಟ್ಟಿದ್ದೇವೆ ಎಂದರು. ಈ ವೇಳೆ ಬಿಜೆಪಿ ಶಾಸಕರಿಂದ ಡಿಸಿ ಜೊತೆ ವಾಗ್ವಾದ ನಡೆದು, ನೀವು ಯಾವುದೇ ಲಿಖಿತ ಆದೇಶ ಹಿಂದೆಯೂ ಕೊಡಲಿಲ್ಲ. ಪ್ರೊಟೋಕಾಲ್ ವ್ಯವಸ್ಥೆ ಬಗ್ಗೆ ಡಿಸಿ ಯಾವತ್ತೂ ಆದೇಶ ಕೊಡಲ್ಲ ಅಂತ ಶಾಸಕರು ಅಸಮಾಧಾನ ತೋರಿದರು. ನೀವು ಡಿಸಿ ಅಂತ ನಾವು ಗೌರವ ಕೊಟ್ಟು ಮಾತನಾಡ್ತಾ ಇದೀವಿ ಎಂದ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಸಿ ಮುಗಿಲನ್, ಈ ವೇಳೆ ನಮ್ಮಿಂದ ಮುಂದೆ ಈ ರೀತಿ ಆಗಲ್ಲ. ಅಮಾನತು ಆದೇಶ ವಾಪಾಸ್ ಗೆ ಸರ್ಕಾರಕ್ಕೆ ಕಳಿಸಿದ್ಸೇವೆ. ಇವತ್ತು ಸಂಜೆ ಒಳಗೆ ಅಮಾನತು ಆದೇಶ ವಾಪಸ್ ಆಗುತ್ತೆ ಎಂದರು.
ದ.ಕ ಜಿಲ್ಲಾಧಿಕಾರಿಗೆ ನಳಿನ್ ಕಟೀಲ್ ತರಾಟೆ!
ಇದೇ ವೇಳೆ ದ.ಕ ಡಿಸಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ತರಾಟೆಗೆತ್ತಿಕೊಂಡರು. ಅಮಾನತು ಆದೇಶ ಯಾರು ಮಾಡಿದ್ಸು, ಕಾರ್ಯಕ್ರಮ ನಿಲ್ಲಿಸಿದ್ದು ಯಾರು? ಪ್ರೊಟೋಕಾಲ್ ಪ್ರಕಾರ ಉಸ್ತುವಾರಿ ಸಚಿವರ ಹೆಸರು ಹಾಕಿಲ್ವಾ? ಈ ಎರಡೂ ಕಾರ್ಯಕ್ರಮ ನಿಲ್ಲಿಸಿದ್ದು ಯಾರು ಹಾಗಾದ್ರೆ. ಅಧಿಕಾರಿಗಳ ಅಮಾನತು ಆದೇಶ ಮಾಡಿದವರು ಯಾರು? ಶಾಸಕರು ಪಂಚಾಯತ್ ಗೆ ಹೋದಾಗ ಪೊಲೀಸ್ ಹಾಕಿದ್ದು ಯಾರು? ಒಬ್ಬ ಶಾಸಕನ ಹಕ್ಕುಚ್ಯುತಿ ಮಾಡಲು ಆದೇಶ ಯಾರು ಕೊಟ್ಟದ್ದು? ಭ್ರಷ್ಟಾಚಾರ ಮಾಡಿದವರನ್ನ ನೀವು ಸಸ್ಪೆಂಡ್ ಮಾಡಿಲ್ಲ. ಹಳೆಯಂಗಡಿ ಪಂಚಾಯತ್ ನಲ್ಲಿ ಕಾಂಗ್ರೆಸ್ ನವರು ಚುನಾವಣೆಗೆ ತಡೆ ಮಾಡಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಮುಖಂಡನ ಪತ್ರಕ್ಕೆ ಆದೇಶ ಮಾಡಿದ್ದೀರಿ. ನಾನು ರಾಜ್ಯಾಧ್ಯಕ್ಷನಾಗಿ ಈವರೆಗೆ ಯಾವುದೇ ಪತ್ರ ಕೊಟ್ಟಿಲ್ಪ. ಆದರೆ ಒಬ್ಬ ಕಾಂಗ್ರೆಸ್ ಮುಖಂಡನ ಪತ್ರಕ್ಕೆ ನೀವು ಆದೇಶ ಮಾಡಿದ್ದೀರಿ. ನಿಮ್ಮ ತಹಶಿಲ್ದಾರ್ ಗೆ ಈ ರೀತಿ ಉಲ್ಲೇಖ ಮಾಡಿ ಯಾಕೆ ಆದೇಶ ಮಾಡಿದ್ರಿ. ಸರ್ಕಾರ ಇಲ್ಲಿ ಯಾರು ನಡೆಸ್ತಾರೆ, ನೀವು ಪತ್ರ ಹೇಗೆ ಕೊಡ್ತೀರಿ. ಬಂಟ್ವಾಳ, ಬೆಳ್ತಂಗಡಿ ಭಾಗದಲ್ಲಿ ಮಾಜಿ ಶಾಸಕರು ಕಾರ್ಯಕ್ರಮ ಉದ್ಘಾಟನೆ ಮಾಡ್ತಾರೆ. ಇದನ್ನ ನಾವು ಸಹಿಸಲ್ಲ, ನಮಗೂ ಅಧಿಕಾರ ಗೊತ್ತಿದೆ ಎಂದು ಕಿಡಿ ಕಾರಿದರು. ಈ ವೇಳೆ ನಳಿನ್ ಕುಮಾರ್ ಕಟೀಲ್ ಗೆ ದ.ಕ ಡಿಸಿ ಮುಲ್ಲೈ ಮುಗಿಲನ್ ಉತ್ತರ ನೀಡಿದ್ದು, ಗ್ರಾಮ ಪಂ ಕಾರ್ಯಕ್ರಮದ ಬಗ್ಗೆ ಸರ್ಕಾರದಲ್ಲಿ ಯಾವುದೇ ಗೈಡ್ ಲೈನ್ಸ್ ಇಲ್ಲ. ಹಾಗಾಗಿ ಸರ್ಕಾರಕ್ಕೆ ಪತ್ರ ಬರೆದು ಈ ಬಗ್ಗೆ ನಿಯಮ ಕೇಳಿದ್ದೇವೆ ಎಂದಾಗ ಡಿಸಿ ವಿರುದ್ದ ಮತ್ತೆ ಬಿಜೆಪಿ ಶಾಸಕರು ಹರಿಹಾಯ್ದಿದ್ದಾರೆ. ನಿಮಗೆ ಶಿಷ್ಟಾಚಾರ ಇಲ್ಲಾಂದ್ರೆ ನೀವು ಕಾರ್ಯಕ್ರಮ ಯಾಕೆ ನಿಲ್ಲಿಸಿದ್ರೀ ಎಂದಿದ್ದಾರೆ. ಇದೇ ವೇಳೆ ಡಿಸಿ ಕಚೇರಿಯಿಂದ ಬಂದ ಕಾರ್ಯಕ್ರಮ ರದ್ದು ಆದೇಶ ಓದಿದ ನಳಿನ್ ಕಟೀಲ್, ಇದರಲ್ಲಿ ಶಿಷ್ಟಾಚಾರ ಮಿಸ್ಟೆಕ್ ಎಲ್ಲಿದೆ ಎಂದಾಗ, ಈ ವೇಳೆ ಕ್ರಮದ ಭರವಸೆ ನೀಡಿದ ಡಿಸಿ ಮುಗಿಲನ್, ಅಮಾನತು ಆದೇಶ ಕೂಡ ಇವತ್ತು ವಾಪಸ್ ಆಗುತ್ತೆ. ಮುಂದಿನ ದಿನಗಳಲ್ಲಿ ಶಿಷ್ಟಾಚಾರ ವಿಚಾರದಲ್ಲಿ ಗೊಂದಲ ಆಗಲ್ಲ ಎಂದರು.
ಕರ್ನಾಟಕದಲ್ಲಿ ಭ್ರಷ್ಟಾಚಾರದ ಅಂಗಡಿ ಓಪನ್: ನಳಿನ್ ಕುಮಾರ್
ಈ ವೇಳೆ ತಕ್ಷಣ ಪಂಚಾಯತ್ ಕಟ್ಟಡ ಉದ್ಘಾಟಿಸಿ ಅಂತ ಡಿಸಿಗೆ ನಳಿನ್ ಸೂಚನೆ ನೀಡಿದರು. ಡಿಸಿ ವಿರುದ್ದ ಮತ್ತೆ ಹಕ್ಕುಚ್ಯುತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಉಮಾನಾಥ್ ಕೋಟ್ಯಾನ್ ಗೆ ಪ್ರತ್ಯುತ್ತರ ನೀಡಿದ ಡಿಸಿ ಮುಗಿಲನ್, ನಾನು ಕಾನೂನು ಮೀರಲ್ಲ. ನಾನು ಯಾವುದೇ ಒತ್ತಡಕ್ಕೆ ಮಣಿಯಲ್ಲ. ನಾನು ಕಾನೂನು ಪ್ರಕಾರವೇ ಕೆಲಸ ಮಾಡೋದು, ಹತ್ತು ವರ್ಷದಿಂದ ಅಧಿಕಾರದಲ್ಲಿ ಇದ್ದೇನೆ ಎಂದರು. ಆ ಬಳಿಕ ಧರಣಿ ಕೈ ಬಿಡಲಾಯಿತು. ಧರಣಿ ಕೈ ಬಿಟ್ಟ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಜಿಲ್ಲಾಧಿಕಾರಿಗಳು ಇವತ್ತು ಬಂದು ಭರವಸೆ ಕೊಟ್ಟು ವಿನಂತಿ ಮಾಡಿದ್ದಾರೆ. ಹೀಗಾಗಿ ನಾವು ಈಗ ಧರಣಿ ವಾಪಸ್ ತೆಗೋತಿವಿ. ಇವತ್ತು ಸಂಜೆಯೊಳಗೆ ಅಮಾನತು ಆದೇಶ ವಾಪಸ್ ಪಡೆಯಬೇಕು. ಇಲ್ಲದೇ ಇದ್ದರೆ ನಾವು ನಾಳೆ ಮತ್ತೆ ಪ್ರತಿಭಟನೆ ಮಾಡ್ತೇವೆ ಎಂದರು.