
ಭೋಪಾಲ್ (ಜು.01): 2022ರ ಹುಲಿ ಗಣತಿ ವರದಿ ಪ್ರಕಟ ಆಗುತ್ತಿದ್ದಂತೆಯೇ ಹುಲಿಗಳ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ವೃದ್ಧಿಸಿಕೊಂಡು ನಂ.1 ಸ್ಥಾನ ಗಳಿಸಿದ ಮಧ್ಯಪ್ರದೇಶ ಹಾಗೂ ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಿಕೊಂಡು 2ನೇ ಸ್ಥಾನ ಪಡೆದ ಕರ್ನಾಟಕದ ನಡುವೆ ತೀವ್ರ ವಾಕ್ಸಮರ ನಡೆದಿದೆ.
ಮಧ್ಯಪ್ರದೇಶದ ಹುಲಿಗಳ ಸಂಖ್ಯೆ 2018ರಿಂದ 22ರ ನಡುವಿನ 4 ವರ್ಷದ ಅವಧಿಯಲ್ಲಿ 259ರಷ್ಟುಹೆಚ್ಚಿದೆ. ಆದರೆ ಕರ್ನಾಟಕದ ಹುಲಿಗಳ ಪ್ರಮಾಣ ಕೇವಲ 39ರಷ್ಟು ಹೆಚ್ಚಿದೆ. ಇದನ್ನು ಮಾಧ್ಯಮವೊಂದರ ಎದುರು ಪ್ರಸ್ತಾಪಿಸಿರುವ ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ, ‘ಮಧ್ಯಪ್ರದೇಶದ ಗಣತಿ ಮಾನದಂಡಗಳು ಅನುಮಾನ ಮೂಡಿಸುವಂತಿವೆ. ಈ ಬಗ್ಗೆ ಕೇಂದ್ರ ಅರಣ್ಯ ಸಚಿವಾಲಯ ಗಮನ ಹರಿಸಬೇಕು. ಹೇಗೆ ಇಷ್ಟೊಂದು ಭಾರಿ ಏರಿಕೆ ಆಯಿತು ಎಂಬುದೇ ಅಚ್ಚರಿಯ ವಿಚಾರ. ನಮ್ಮ ಪ್ರಕಾರ ಕರ್ನಾಟಕದಲ್ಲಿ 600 ಹುಲಿಗಳಿವೆ’ ಎಂದಿದ್ದಾರೆ.
2022 ರ ಹುಲಿ ಗಣತಿ ವರದಿ ಬಿಡುಗಡೆ: ಮಧ್ಯ ಪ್ರದೇಶದಲ್ಲಿ 785, ಕರ್ನಾಟಕದಲ್ಲಿ 563 ಹುಲಿಗಳು ಪತ್ತೆ; ರಾಜ್ಯವೇ ನಂ. 2
ಆದರೆ ಇದಕ್ಕೆ ತಿರುಗೇಟು ನೀಡಿರುವ ಮಧ್ಯಪ್ರದೇಶ ಅರಣ್ಯ ಅಧಿಕಾರಿಗಳು, ‘ಹುಲಿಗಳ ಸಂಖ್ಯೆ ಏಕೆ ಕಡಿಮೆ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂಬ ಬಗ್ಗೆ ಕರ್ನಾಟಕ ಆತ್ಮಾವಲೋಕನ ಮಾಡಿಕೊಳ್ಳಬೇಕೆ ವಿನಾ ನಮ್ಮ ಬಗ್ಗೆ ಟೀಕೆ-ಟಿಪ್ಪಣಿ ಮಾಡುವುದು ಸಲ್ಲದು. ಏಕೆಂದರೆ ಸಮೀಕ್ಷೆ ಮಾಡಿರುವುದು ಸ್ವತಂತ್ರ ಸಂಸ್ಥೆಯಾದ ‘ಭಾರತೀಯ ವನ್ಯಜೀವಿ ಸಂಸ್ಥೆ’. ಹೀಗಾಗಿ ಕರ್ನಾಟಕದವರು 3ನೇ ಸ್ಥಾನದಲ್ಲಿರುವ ಉತ್ತರಾಖಂಡದ ಜತೆ ಸ್ಪರ್ಧೆ ಮಾಡಬೇಕೇ ವಿನಾ ನಮ್ಮೊಂದಿಗಲ್ಲ’ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಇತ್ತೀಚೆಗೆ ಬಿಡುಗಡೆ ಆದ ಗಣತಿಯಲ್ಲಿ 2018ರಲ್ಲಿ ಮಧ್ಯಪ್ರದೇಶದಲ್ಲಿ 526 ಇದ್ದ ಹುಲಿಗಳ ಸಂಖ್ಯೆ 785ಕ್ಕೆ , ಕರ್ನಾಟಕದ ಹುಲಿಗಳ ಸಂಖ್ಯೆ 524ರಿಂದ 563ಕ್ಕೆ ಹೆಚ್ಚಿದೆ ಎಂದು ಗೊತ್ತಾಗಿತ್ತು. 3ನೇ ಸ್ಥಾನದಲ್ಲಿದ್ದ ಉತ್ತರಾಖಂಡದಲ್ಲಿ ಕರ್ನಾಟಕಕ್ಕಿಂತ ಕೇವಲ 3 ಕಮ್ಮಿ ಹುಲಿಗಳು ಇದ್ದು, 560 ಹುಲಿಗಳಿವೆ ಎಂದು ಗಣತಿ ಹೇಳಿತ್ತು.
ಮಹದಾಯಿ ನದಿ ನೀರು ಹಂಚಿಕೆ ವಿವಾದ, ಗೋವಾ ಮೇಲ್ಮನವಿಗೆ ರಾಜ್ಯ ಕಾಂಗ್ರೆಸ್ ವಿರೋಧ
ಮ.ಪ್ರ ಆತಂಕ: ಈ ನಡುವೆ, ‘ಹುಲಿ ರಕ್ಷಿತಾರಣ್ಯಗಳ ಪರಿಣಾಮಕಾರಿ ನಿರ್ವಹಣೆ’ ವರದಿಯಲ್ಲಿ ಮಧ್ಯಪ್ರದೇಶ 2 ಹುಲಿ ರಕ್ಷಿತಾರಣ್ಯಗಳು ಮಾತ್ರ ‘ಉತ್ತಮ ಸಾಧನೆ’ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಆದರೆ ಕರ್ನಾಟಕದ ಎಲ್ಲ ಹುಲಿ ರಕ್ಷಿತಾರಣ್ಯಗಳೂ ಟಾಪ್ ಗ್ರೇಡ್ ರಾರಯಂಕಿಂಗ್ ಪಡೆದಿವೆ. ಇದು ಹೇಗೆ ಆಯಿತು ಎಂಬ ಬಗ್ಗೆ ಮಧ್ಯಪ್ರದೇಶವು ವಿಶ್ಲೇಷಣೆ ಮಾಡಲು ನಿರ್ಧರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ