ಟಿಟಿಡಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತ ವಿಚಾರದಲ್ಲಿ ರಾಜಕೀಯ ಕೆಸೆರೆರಾಚಾಟ ಆರಂಭವಾಗಿದ್ದು, ಬಿಜೆಪಿ vs ಕಾಂಗ್ರೆಸ್ ಪಕ್ಷದ ಆರೋಪ ಪ್ರತ್ಯಾರೋಪದಲ್ಲಿ ಹುರುಳೆ ಇಲ್ಲದಂತಾಗಿದೆ.
ಬೆಂಗಳೂರು (ಆ.1): ಕೆಎಂಎಫ್ ಸಲ್ಲಿಸಿದ ತುಪ್ಪದ ದರ ಪ್ರಸ್ತಾವನೆಯನ್ನು ಟಿಟಿಡಿ ಒಪ್ಪಿಕೊಂಡಿಲ್ಲ. ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ನಿಗದಿ ಮಾಡಿದ ಬೆಲೆಗೆ ತುಪ್ಪ ಪೂರೈಕೆ ಮಾಡಲು ಸಾಧ್ಯವಾಗದ ಕಾರಣ ಟೆಂಡರ್‌ನಿಂದ ದೂರ ಉಳಿದಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಸೋಮವಾರ ಹೇಳಿಕೆ ನೀಡಿದ್ದರು. ಆರು ತಿಂಗಳಿಗೆ 14 ಲಕ್ಷ ಕೆ.ಜಿ. ತುಪ್ಪ ನಂದಿನಿಯಿಂದ ಸರಬರಾಜು ಆಗುತ್ತಿತ್ತು. ಈ ಹಿಂದೆ ರಿಯಾಯಿತಿ ದರದಲ್ಲಿ ತಿಮ್ಮಪ್ಪನ ಸನ್ನಿಧಿಗೆ ತುಪ್ಪ ಹೋಗುತ್ತಿತ್ತು. ಆದರೆ, ಈಗ ಕೆಎಂಎಫ್ ಹಾಲಿನ ಬೆಲೆ ಏರಿಕೆ ಮಾಡಿದ್ದರಿಂದ ತುಪ್ಪದ ದರವನ್ನೂ ಏರಿಸಿದೆ. ದರ ಗೊಂದಲದಿಂದ ಕೆಎಂಎಫ್ ಟೆಂಡರ್‌ನಲ್ಲಿ ಭಾಗಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು
ಆದರೆ ಟಿಟಿಡಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತ ವಿಚಾರದಲ್ಲಿ ರಾಜಕೀಯ ಕೆಸೆರೆರಾಚಾಟ ಆರಂಭವಾಗಿದ್ದು, ಬಿಜೆಪಿ vs ಕಾಂಗ್ರೆಸ್ ಪಕ್ಷದ ಆರೋಪ ಪ್ರತ್ಯಾರೋಪದಲ್ಲಿ ಹುರುಳೆ ಇಲ್ಲದಂತಾಗಿದೆ. ಟಿಟಿಡಿಗೆ ತುಪ್ಪ ಸರಬರಾಜು ಸ್ಥಗಿತ ಆಗಿರೋದು ಇದೇ ಮೊದಲಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಟಿಟಿಡಿಗೆ ತುಪ್ಪ ಸರಬರಾಜು ಆಗಿರಲಿಲ್ಲ. ಈ ಹಿಂದೆಯೂ ಟಿಟಿಡಿಗೆ ಹಲವುಬಾರಿ ತುಪ್ಪ ಸ್ಥಗಿತವಾಗಿತ್ತು.
ತಿರುಪತಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ: ಕಾರಣ ಬಿಚ್ಚಿಟ್ಟ ಕೆಎಂಎಫ್
ಸೋಮವಾರ ಟಿಟಿಡಿಗೆ ತುಪ್ಪ ಸರಬರಾಜು ವಿಚಾರವಾಗಿ ಬಿಜೆಪಿ ನಾಯಕ ಸಿ.ಟಿ.ರವಿ ಟ್ವೀಟ್ ವಿವಾದ ಸೃಷ್ಟಿಸಿದ್ದರು. ಮಾತ್ರವಲ್ಲ ರಾಜ್ಯ ಬಿಜೆಪಿ ಕೂಡ ಈ ಬಗ್ಗೆ ಟ್ವೀಟ್ ಮಾಡಿತ್ತು. ಈ ಟ್ವೀಟ್ ಗೆ ಕಾಂಗ್ರೆಸ್ ಪಕ್ಷದ ನಾಯಕರಿಂದ ಬಾರಿ ವಿರೋಧ ವ್ಯಕ್ತವಾಗಿತ್ತು.
ಟಿಟಿಡಿಗೆ ತುಪ್ಪ ಪೂರೈಕೆ ಸ್ಥಗಿತ ಇದೇ ಮೊದಲಲ್ಲ. ತಿರುಪತಿಯೇ ಸಾಕಷ್ಟು ಬಾರಿ ತುಪ್ಪಬೇಡ ಎಂದಿತ್ತು ಎಂದು ಕೆಎಂಎಫ್ ಹೇಳಿದೆ. ಇಲ್ಲಿಯವರೆಗೆ 3 ಬಾರಿ ತುಪ್ಪ ಟಿಟಿಡಿಗೆ ಪೂರೈಯಾಗಿಲ್ಲ. 2016-18 ರವರೆಗೆ ಟಿಟಿಡಿಗೆ ತುಪ್ಪ ಪೂರೈಕೆ ಸ್ಥಗಿತವಾಗಿತ್ತು. ನಂತ್ರ 2020-21 ರಲ್ಲೂ ಟಿಟಿಡಿಗೆ ನಂದಿನಿ ತುಪ್ಪ ಪೂರೈಕೆ ಆಗಿರಲಿಲ್ಲ. ಈಗ 2022-23 ರಲ್ಲೂ ತುಪ್ಪ ಪೂರೈಕೆ ಆಗಿಲ್ಲ. ಹಾಗಿದ್ರೆ ಯಾವ ಯಾವ ವರ್ಷಗಳಲ್ಲಿ ಟಿಟಿಡಿಗೆ ತುಪ್ಪ ಪೂರೈಕೆಯಾಗಿತ್ತು?. ಯಾವ ವರ್ಷದಲ್ಲಿ ನಂದಿನಿ ತುಪ್ಪ ಟಿಟಿಗೆ ಪೂರೈಕೆ ಆಗುವುದು ಸ್ಥಗಿತವಾಗಿತ್ತು? ಇಲ್ಲಿದೆ ಮಾಹಿತಿ.
ವರ್ಷ | ಪೂರೈಕೆ ತುಪ್ಪ. | ಕೆ.ಜಿಗೆ ರೂ |
2013-14 | 1858 | 264 |
2014-15 | 200 | 306 |
2015-16 | 709 | 306 |
2016-18 | ಪೂರೈಕೆಯಾಗಿಲ್ಲ | |
2018-19 | 85 | 324 |
2019-20 | 1408 | 368 |
2020-21 | ಪೂರೈಕೆ ಸ್ಥಗಿತ | |
2021-22 | 345 | 392 |
2022-23 | ಪೂರೈಕೆ ಸ್ಥಗಿತ |
ಟಿಟಿಡಿ ಕೇಳಿದ ದರಕ್ಕೆ ಕೆಎಂಎಫ್ ತುಪ್ಪ ನೀಡಲಾಗದು: ಭೀಮಾ ನಾಯಕ್
ರಾಜಕೀಯ ಬೇಡ:
ನಂದಿನಿ ವಿಚಾರದಲ್ಲಿ ರಾಜಕೀಯ ಬೇಡ. ಸಿ.ಟಿ.ರವಿ ಅವರಿಗೆ ಮಾಡುವುದಕ್ಕೆ ಕೆಲಸ ಇಲ್ಲ. ಮೊದಲು ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದಕ್ಕೆ ಯೋಚನೆ ಮಾಡಲಿ. ಅದನ್ನು ಬಿಟ್ಟು ಹಾಲು, ಮೊಸರು, ತುಪ್ಪ ಅನ್ನುವುದು ಬೇಡ ಎಂದರು.
ಮಾಜಿ ಶಾಸಕ ಸಿ.ಟಿ.ರವಿ ಟ್ವೀಟ್ ಮಾಡಿ, ನಂದಿನಿಯು ಟಿಟಿಡಿಗೆ ಹಿಂದಿನ ದರದಲ್ಲಿ ತುಪ್ಪ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಹಾಗಾಗಿ ನಂದಿನಿ ಇನ್ನು ಮುಂದೆ ತಿರುಪತಿ ಲಡ್ಡುಗಳನ್ನು ತಯಾರಿಸಲು ತುಪ್ಪ ಪೂರೈಸುವುದಿಲ್ಲ. ಕಾಂಗ್ರೆಸ್ ತನ್ನ ಅಜೆಂಡಾವನ್ನು ಅನುಸರಿಸಲು ಸುವರ್ಣ ಕರ್ನಾಟಕವನ್ನು ನಾಶ ಮಾಡಲು ಹವಣಿಸುತ್ತಿದೆ ಎಂದು ಟೀಕಿಸಿದ್ದರು.