ಗಡಿ ವಿವಾದ: ಮಹಾ ಬಿಜೆಪಿ ಡಿಸಿಎಂ V/S ಕರ್ನಾಟಕ ಬಿಜೆಪಿ ಸಿಎಂ ಟಾಕ್‌ ವಾರ್‌..!

By Kannadaprabha NewsFirst Published Nov 24, 2022, 4:19 AM IST
Highlights

ಬೆಳಗಾವಿ, ನಿಪ್ಪಾಣಿ, ಕಾರವಾರ ವಶಕ್ಕೆ ಪಡೀತೇವೆ: ಫಡ್ನವೀಸ್‌, ಕರ್ನಾಟಕಕ್ಕೆ ಸೊಲ್ಲಾಪುರ, ಅಕ್ಕಲಕೋಟೆ ಸೇರಬೇಕು: ಬೊಮ್ಮಾಯಿ ತಿರುಗೇಟು

ಮುಂಬೈ/ನಾಗಪುರ(ನ.24): ಕರ್ನಾಟಕದ ಜೊತೆ ವಿಲೀನ ಮಾಡಬೇಕೆಂಬ ನಿರ್ಣಯ ಅಂಗೀಕರಿಸಿರುವ ಮಹಾರಾಷ್ಟ್ರದ ಜತ್‌ ತಾಲೂಕಿನ ಬೇಡಿಕೆ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ’ ಎಂಬ ಕರ್ನಾಟಕದ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಮಹಾರಾಷ್ಟ್ರ ಬಿಜೆಪಿ ಮುಖಂಡರೂ ಆದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹಾಗೂ ಮಹಾರಾಷ್ಟ್ರದ ಗಡಿ ವಿವಾದದ ನೋಡಲ್‌ ಸಚಿವ ಶಂಭುರಾಜ ದೇಸಾಯಿ ತಿರುಗೇಟು ನೀಡಿದ್ದಾರೆ.

‘ಯಾವ ಮಹಾರಾಷ್ಟ್ರ ಹಳ್ಳಿಗಳು ಬೇರೆ ಎಲ್ಲೂ ಹೋಗಲ್ಲ. ಆದರೆ ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳಾದ ಬೆಳಗಾವಿ, ನಿಪ್ಪಾಣಿ ಹಾಗೂ ಕಾರವಾರದ ಭಾಗಗಳನ್ನು ಮಹಾರಾಷ್ಟ್ರದ ತೆಕ್ಕೆಗೆ ತೆಗೆದುಕೊಳ್ಳುವ ಹೋರಾಟ ನಿಲ್ಲುವುದಿಲ್ಲ’ ಎಂದು ಫಡ್ನವೀಸ್‌ ಹೇಳಿದ್ದಾರೆ.

ಶಿವಾಜಿ ಅವಹೇಳನ: ಮಹಾ ರಾಜ್ಯಪಾಲರ ವಜಾಗೆ ಸಿಎಂ ಶಿಂಧೆ ಬಣ ಆಗ್ರಹ

ಇದೇ ವೇಳೆ, ‘ಬೊಮ್ಮಾಯಿ ಮಾತಿಗೆ ಹೆಚ್ಚಿ ಮಹತ್ವ ಬೇಕಿಲ್ಲ. ಏಕೆಂದರೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಮಹಾರಾಷ್ಟ್ರ ಸರ್ಕಾರ ಕ್ರಮ ಜರುಗಿಸಿದೆ’ ಎಂದು ಸಚಿವ ಶಂಭುರಾಜ್‌ ದೇಸಾಯಿ ಹೇಳಿದ್ದಾರೆ. ಬುಧವಾರ ನಾಗಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಫಡ್ನವೀಸ್‌, ‘ಸಾಂಗ್ಲಿ ಜಿಲ್ಲೆಯ ಜತ್‌ ತಾಲೂಕಿನ ಕೆಲವು ಗ್ರಾಮ ಪಂಚಾಯ್ತಿಗಳು 2012ರಲ್ಲಿ ಕರ್ನಾಟಕ ಸೇರಬೇಕೆಂದು ನಿರ್ಣಯ ಅಂಗೀಕರಿಸಿದ್ದವು. ಆದರೆ ಈಗ ಅಂಥ ಯಾವುದೇ ಪ್ರಸ್ತಾಪ ಇಲ್ಲ. ನಾನು ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕ ಜತೆಗೆ ಒಪ್ಪಂದ ಮಾಡಿಕೊಂಡು ಜತ್‌ ನೀರಿನ ಯೋಜನೆ ಸಿದ್ಧಪಡಿಸಿದೆ. ಕೋವಿಡ್‌ ಕಾರಣ ವಿಳಂಬವಾಗಿ, ಈಗ ಯೋಜನೆ ಕಾರ್ಯಗತವಾಗುತ್ತಿದೆ. ಈಗ ಯಾವ ಹಳ್ಳಿಗಳೂ

ಮಹಾರಾಷ್ಟ್ರ ಸೇರಲು ಬಯಸಿಲ್ಲ. ನಮ್ಮ ಯಾವ ಹಳ್ಳಿಯೂ ಎಲ್ಲೂ ಹೋಗಲ್ಲ’ ಎಂದರು.

ಇದಕ್ಕೂ ಮುನ್ನ ಮುಂಬೈನಲ್ಲಿ ಶಂಭುರಾಜ ದೇಸಾಯಿ ಮಾತನಾಡಿ, ‘ಕರ್ನಾಟಕದ ಜೊತೆಗಿನ ಗಡಿ ವಿವಾದವನ್ನು ನಾವು ಸುಪ್ರೀಂಕೋರ್ಚ್‌ನಲ್ಲಿ ಪ್ರಶ್ನಿಸಲು ಹೊಸ ತಂಡವನ್ನು ರಚಿಸಿದ ಬೆನ್ನಲ್ಲೇ, ಬೊಮ್ಮಾಯಿ ಅವರು ಹಳೆಯ ಹಾಸ್ಯಾಸ್ಪದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಕೃಷ್ಣಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುವಂತೆ ಆಗಿನ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿಯಷ್ಟೇ ಸಾಂಗ್ಲಿ ಜಿಲ್ಲೆಯ ಜತ್‌ ತಾಲೂಕಿನ ಜನರು, ಬೇಡಿಕೆ ಈಡೇರಿಸದೇ ಹೋದರೆ ತಾಲೂಕನ್ನು ಕರ್ನಾಟಕದಲ್ಲಿ ವಿಲೀನ ಮಾಡುವ ನಿರ್ಣಯ ಅಂಗೀಕರಿಸಿದ್ದರು. ಆದರೆ ಇಂಥ ನಿರ್ಣಯ ಅಂಗೀಕರಿಸಿದ್ದರ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಬಳಿ ಯಾವುದೇ ಅಧಿಕೃತ ದಾಖಲೆ ಇಲ್ಲ. ನನಗಿರುವ ಮಾಹಿತಿ ಪ್ರಕಾರ ಜತ್‌ ತಾಲೂಕಿಗೆ ನೀರಾವರಿ ಸೌಲಭ್ಯ ಒದಗಿಸಲು ಈಗಾಗಲೇ 1200 ಕೋಟಿ ರು. ಮೊತ್ತದ ಯೋಜನೆಗೆ ಅಂಗೀಕಾರ ನೀಡಲಾಗಿದೆ. ಯೋಜನೆಯ ತಾಂತ್ರಿಕ ಅಂಶಗಳ ಪರಿಶೀಲನೆ ನಡೆಯುತ್ತಿದೆ. ಇದರರ್ಥ ಆ ಭಾಗದ ಜನರಿಗೆ ಖಂಡಿತವಾಗಿ ನೀರಾವರಿ ಸೌಲಭ್ಯ ಸಿಗಲಿದೆ’ ಎಂದು ಹೇಳಿದರು.

ಸಚಿವ ಸುಧೀರ್‌ ಮುಂಗಂಟಿವಾರ್‌ ಮಾತನಾಡಿ, ‘ಗಡಿ ವಿವಾದಕ್ಕೆ ನೆಹರೂ ಕಾರಣ. ಜತ್‌ ಕರ್ನಾಟಕಕ್ಕೆ ಸೇರಬೇಕು ಎಂದು ಅಲ್ಲಿನ ಜನರು ನಿರ್ಣಯಿಸಿದ್ದರೆ, ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಕರ್ನಾಟಕದ ಹಳ್ಳಿಗಳ ನಿರ್ಣಯಗಳ ಬಗ್ಗೆ ಬಗ್ಗೆಯೂ ಯೋಚಿಸಿ’ ಎಂದು ತಿರುಗೇಟು ನೀಡಿದ್ದಾರೆ.

ಏನಿದು ವಿವಾದ?:

ಗಡಿ ವಿವಾದಕ್ಕೆ ಕಿಚ್ಚು ಹಬ್ಬಿಸುವ ಸಲುವಾಗಿ, ಕರ್ನಾಟಕದ ಮರಾಠಿ ಭಾಷಿಕ ಸ್ವಾತಂತ್ರ್ಯ ಹೋರಾಟಗಾರರಿಗೂ ಪಿಂಚಣಿ ನೀಡುವ ಮತ್ತು ಮರಾಠಿ ಭಾಷಿಕ ಜನರಿಗೂ ಆರೋಗ್ಯ ವಿಮೆ ಒದಗಿಸುವ ಚಿಂತಿಸುವ ಕುರಿತು ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ, ಗೋವಾ ವಿಮೋಚನೆ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗಿಯಾದ ನೆರೆ ರಾಜ್ಯದಲ್ಲಿ ಇರುವ ಜನರಿಗೆ ಪಿಂಚಣಿ ನೀಡುವ, ಮಹಾರಾಷ್ಟ್ರದಲ್ಲಿನ ಕನ್ನಡ ಭಾಷಿಕ ಪ್ರದೇಶಗಳಿಗೆ ವಿಶೇಷ ಅನುದಾನ ನೀಡುವ ಮತ್ತು ಜತ್‌ ತಾಲೂಕನ್ನು ಕರ್ನಾಟಕ ಸೇರಿಸುವ ಬಗ್ಗೆ ಚಿಂತಿಸುವ ಮಾತುಗಳನ್ನು ಆಡುವ ಮೂಲಕ ಮಹಾರಾಷ್ಟ್ರಕ್ಕೆ ತಿರುಗೇಟು ನೀಡಿದ್ದರು.

ಕರ್ನಾಟಕಕ್ಕೆ ಸೊಲ್ಲಾಪುರ, ಅಕ್ಕಲಕೋಟೆ ಸೇರಬೇಕು: ಬೊಮ್ಮಾಯಿ ತಿರುಗೇಟು

ಬೆಂಗಳೂರು: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರು ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ಕಾಗಿ ಹೇಳಿದ್ದಾರೆ.

ಜತ್‌ ಸೇರಿದಂತೆ ಒಂದೇ ಒಂದು ಗ್ರಾಮವೂ ಮಹಾರಾಷ್ಟ್ರದ ಕೈಬಿಟ್ಟು ಹೋಗದು, ಬದಲಾಗಿ ಕರ್ನಾಟಕದ ವಶದಲ್ಲಿರುವ ಬೆಳವಾಣಿ, ಕಾರವಾರ, ನಿಪ್ಪಾಣಿ ಸೇರಿದಂತೆ ಮರಾಠಿ ಭಾಷಿಕ ಪ್ರದೇಶಗಳನ್ನು ನಮ್ಮ ತೆಕ್ಕೆಗೆ ಪಡೆದುಕೊಳ್ಳಲು ನಾವು ಎಲ್ಲಾ ರೀತಿಯ ಕಾನೂನು ಹೋರಾಟ ಮುಂದುವರೆಸಲಿದ್ದೇವೆ ಎಂದು ಬಿಜೆಪಿ ನಾಯಕರೂ ಆಗಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಬುಧವಾರ ನಾಗಪುರದಲ್ಲಿ ಹೇಳಿದ್ದರು.

ಗಡಿ ವಿವಾದಕ್ಕೆ ಮತ್ತೆ ಮಹಾರಾಷ್ಟ್ರದ ಕಿಚ್ಚು: ನಿಗಾಕ್ಕೆ ಇಬ್ಬರು ಸಚಿವರ ನೇಮಕ!

ಈ ಹಿನ್ನೆಲೆಯಲ್ಲಿ ಬುಧವಾರ ಸರಣಿ ಟ್ವೀಟ್‌ ಮಾಡಿ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಾಡಿನ ನೆಲ, ಜಲ, ಗಡಿ ರಕ್ಷಣೆ ವಿಚಾರದಲ್ಲಿ ನಮ್ಮ ಸರ್ಕಾರ ಕಟಿ ಬದ್ಧವಾಗಿದೆ. ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಒಂದಿಂಚೂ ಜಾಗವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿರುವ ಕನ್ನಡ ಭಾಷಿಕ ಪ್ರದೇಶಗಳಾದ ಸೊಲ್ಲಾಪುರ, ಅಕ್ಕಲಕೋಟೆ ಕರ್ನಾಟಕಕ್ಕೆ ಸೇರಬೇಕೆನ್ನುವುದು ನಮ್ಮ ಆಗ್ರಹವಿದೆ. ಮಹಾರಾಷ್ಟ್ರ ಸರ್ಕಾರ 2004ರಿಂದಲೂ ಎರಡೂ ರಾಜ್ಯಗಳ ಗಡಿ ವಿಚಾರದಲ್ಲಿ ಕ್ಯಾತೆ ತೆಗೆದು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದೆ. ಇದುವರೆಗೂ ಯಶಸ್ವಿಯಾಗಿಲ್ಲ. ಮುಂದೆಯೂ ಆಗುವುದಿಲ್ಲ. ನಾವು ನಮ್ಮ ಕಾನೂನು ಹೋರಾಟವನ್ನು ಪ್ರಬಲವಾಗಿ ಮಾಡಲು ಸನ್ನದ್ದರಾಗಿದ್ದೇವೆ ಎಂದು ತಿಳಿಸಿದ್ದಾರೆ.
 

click me!