ಕನ್ನಡ ಹೋರಾಟಗಾರರ ಪ್ರಕರಣ ವಾಪಸ್‌ : ಸಿದ್ದರಾಮಯ್ಯ

Kannadaprabha News   | Kannada Prabha
Published : Dec 29, 2025, 05:55 AM IST
cm siddaramaiah

ಸಾರಾಂಶ

ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್‌ ಪಡೆಯುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕನ್ನಡ ಶಾಲೆ ಉಳಿಸುವ ಬಗ್ಗೆ ತಜ್ಞರ ಸಭೆ ಕರೆದು ತೀರ್ಮಾನ ಕೈಗೊಳ್ಳುತ್ತೇವೆ ಎಂದೂ ಅವರು ಹೇಳಿದ್ದಾರೆ.

 ಬೆಂಗಳೂರು :  ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್‌ ಪಡೆಯುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನ್ನಡ ಶಾಲೆ ಉಳಿಸುವ ಬಗ್ಗೆ ತಜ್ಞರ ಸಭೆ ಕರೆದು ತೀರ್ಮಾನ ಕೈಗೊಳ್ಳುತ್ತೇವೆ ಎಂದೂ ಅವರು ಹೇಳಿದ್ದಾರೆ.

ಭಾನುವಾರ ಕನ್ನಡ ಹೋರಾಟಗಾರರ ಸಮಿತಿಯಿಂದ ನಗರದ ಅರಮನೆ ಮೈದಾನದಲ್ಲಿ ನಡೆದ ‘ಜನರಾಜ್ಯೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ರಾಜಿಯಾಗುವ ಪ್ರಶ್ನೆಯೇ ಇಲ್ಲ

ರಾಜ್ಯದ ನಾಡು, ನುಡಿ, ನೆಲ-ಜಲ ಹಾಗೂ ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ಸರ್ಕಾರ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಕನ್ನಡಕ್ಕಾಗಿ, ನೆಲ- ಜಲಕ್ಕಾಗಿ ಹೋರಾಡಿದವರ ಮೇಲಿನ ಪ್ರಕರಣ ಸಾಕಷ್ಟಿವೆ. ಅವನ್ನು ಹಿಂಪಡೆಯುವ ಸಂಬಂಧ ಗೃಹಸಚಿವ ಪರಮೇಶ್ವರ್‌ ಅವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆಯಾಗಿದೆ. ಅದರ ಸಭೆಯನ್ನು ಶೀಘ್ರ ಕರೆದು ಪ್ರಕರಣ ವಾಪಸ್‌ ಪಡೆಯುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಕನ್ನಡ ಮಾಧ್ಯಮದ ಶಾಲೆಗಳು ಉಳಿಯಬೇಕು, ಕನ್ನಡದಲ್ಲಿ ಕಲಿಕೆಯ ವಿಚಾರಕ್ಕೆ ನಾನು ಪರವಾಗಿದ್ದೇನೆ. ಹಳ್ಳಿಗಳಲ್ಲೂ ಈಗ ಇಂಗ್ಲಿಷ್‌ ಶಾಲೆಗಳು ಬರುತ್ತಿವೆ. ಈ ವಿಚಾರದಲ್ಲಿ ಪೋಷಕರ ನೆರವೂ ಅಗತ್ಯ. ಕನ್ನಡ ತಜ್ಞರ ಸಭೆ ಕರೆದು ಕನ್ನಡ ಶಾಲೆ ಉಳಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು. ವೈಯಕ್ತಿಕವಾಗಿ ದ್ವಿಭಾಷಾ ನೀತಿ ಪರವಾಗಿದ್ದೇನೆ. ಕ್ಯಾಬಿನೆಟ್‌ನಲ್ಲಿ ಈ ಕುರಿತು ಚರ್ಚಿಸಿ ಕ್ರಮ ವಹಿಸಲಿದ್ದೇವೆ. ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲೂ ನಿರ್ಧಾರ ಕೈಗೊಳ್ಳುವ ಬಗ್ಗೆ ಸಂಪುಟದಲ್ಲಿ ಸರ್ಕಾರ ಚರ್ಚಿಸಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡಬೇಕಾದುದು ಎಲ್ಲರ ಹೊಣೆ. ಹೊರರಾಜ್ಯದಿಂದ ಇಲ್ಲಿಗೆ ಬರುವವರಲ್ಲಿ ಕನ್ನಡ ಕಲಿಯದೆ ಬದುಕಬಹುದು ಎಂಬ ಭಾವನೆ ಇದೆ. ಕನ್ನಡ ಕಲಿಯಲೇಬೇಕೆಂಬ ಅನಿವಾರ್ಯ ವಾತಾವರಣ ಇಲ್ಲಿಲ್ಲದಿರುವುದು ಅದಕ್ಕೆ ಕಾರಣ. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರಕ್ಕೆ ಹೋದರೆ ಅಲ್ಲಿನ ರಾಜ್ಯ ಭಾಷೆಯಲ್ಲೇ ಮಾತನಾಡುತ್ತಾರೆ. ಅಷ್ಟೇ ಏಕೆ, ಇಬ್ಬರು ತುಳು ಮಾತನಾಡುವವರು ಸೇರಿದರೆ ತುಳುವಿನಲ್ಲಿ ಮಾತನಾಡುತ್ತಾರೆ. ಆದರೆ, ಇಬ್ಬರು ಕನ್ನಡಿಗರು ಯಾಕೆ ಕನ್ನಡದಲ್ಲಿ ಮಾತನಾಡಲ್ಲ ಎಂದು ಪ್ರಶ್ನಿಸಿದರು.

ನಾನು ಹಿಂದಿ ಸೇರಿ ಇತರೆ ಭಾಷೆಗಳ ವಿರೋಧಿಯಲ್ಲ. ಕಲಿಯಬೇಡಿ ಎನ್ನಲ್ಲ. ಆದರೆ ಕನ್ನಡಿಗರಾಗಿರಿ. ಇಲ್ಲಿಗೆ ಬರುವ ಪರರಾಜ್ಯದವರು ಕನ್ನಡಿಗರಾಗಿರಬೇಕು. ಅವರಿಗೆ ಕನ್ನಡ ಕಲಿಸುವ, ಕನ್ನಡಿಗರಾಗಿ ಮಾಡಬೇಕಾದ ಕೆಲಸವನ್ನು ಮಾಡಬೇಕು ಎಂದರು.

ಹಿಂದಿ ರಾಷ್ಟ್ರಭಾಷೆ ಅಲ್ಲ:

ಕರ್ನಾಟಕ ಒಂದು ವರ್ಷಕ್ಕೆ 4.50 ಲಕ್ಷ ಕೋಟಿ ರು. ತೆರಿಗೆ ಕಟ್ಟುತ್ತಿದೆ. ಆದರೆ, ಕೇಂದ್ರದಿಂದ ನಮಗೆ 1 ರುಪಾಯಿಗೆ 14 ಪೈಸೆ ವಾಪಸ್‌ ಸಿಗುತ್ತಿದೆ ಎಂದು ಇದೇ ವೇಳೆ ಮುಖ್ಯಮಂತ್ರಿಗಳು ತಿಳಿಸಿದರು.

ವ್ಯಕ್ತಿಗತ ಆದಾಯದಲ್ಲಿ ಕರ್ನಾಟಕ ನಂ.1 ಆಗಿದೆ. ಇಷ್ಟಾದರೂ ಕೇಂದ್ರದಿಂದ ಕರ್ನಾಟಕಕ್ಕೆ ಕೇಂದ್ರ ಅನ್ಯಾಯ ಮಾಡುತ್ತಿದೆ. ಹಿಂದಿಯನ್ನು ಆಗಾಗ ಹೇರುವ ಕೆಲಸ ಮಾಡುತ್ತಿದೆ. ಹಿಂದಿ ರಾಷ್ಟ್ರಭಾಷೆ ಅಲ್ಲ. ಕನ್ನಡವೇ ಸಾರ್ವಭೌಮ ರಾಷ್ಟ್ರ ಎಂದರು.

ಈ ವೇಳೆ ಬಿಜೆಪಿ ವಿರುದ್ಧವೂ ಹರಿಹಾಯ್ದ ಸಿದ್ದರಾಮಯ್ಯ ಅವರು, ಕರ್ನಾಟಕ ನಾಮಕರಣವಾಗಿ 50 ವರ್ಷವಾಗಿದ್ದರೂ ನಾಮಕರಣದ ಸಂಭ್ರಮವನ್ನು ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮಾಡಲಿಲ್ಲ. ನಾವು ವರ್ಷವಿಡೀ ಕಾರ್ಯಕ್ರಮ ಮಾಡಿ ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಿದೆವು. ಬೆಳಗಾವಿಯಲ್ಲೂ ಪ್ರತಿಮೆ ಸ್ಥಾಪಿಸೋಣ ಎಂದರು.

ರಾಜ್ಯದ ಗಡಿ ಪ್ರದೇಶ ಅಭಿವೃದ್ಧಿ ಸಂಬಂಧ ಶಿವರಾಜ್‌ ಪಾಟೀಲ್‌ ನೇತೃತ್ವದಲ್ಲಿ ರಚಿಸಲಾದ ಸಮಿತಿ ನೀಡುವ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ, ಪ್ರೊ. ಬರಗೂರು ರಾಮಚಂದ್ರಪ್ಪ, ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿದರು.

ಕನ್ನಡದ ಹೋರಾಟಗಾರರಲ್ಲಿ ಭೇದಭಾವ ಇರದೆ ಒಟ್ಟಾಗಿ ಇರಬೇಕು. ನಾನೂ ಈ ಘಳಿಗೆಗಾಗಿ ಕಾಯುತ್ತಿದ್ದೆ. ಒಕ್ಕೂಟದ ವ್ಯವಸ್ಥೆ ಮಾಡಿಕೊಂಡು ನೆಲ-ಜಲ ಕರ್ನಾಟಕದ ಗಡಿ ಕಾಯುವಿಕೆಯ ಹೋರಾಟ ಮುಂದುವರಿಸಬೇಕು.

- ಸಿದ್ದರಾಮಯ್ಯ, ಮುಖ್ಯಮಂತ್ರಿ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆಯಾಗಿದ್ದಕ್ಕೆ ಬಿಜೆಪಿ ಕಿಡಿ
ಮರ್ಯಾದಾ ಹತ್ಯೆ ತಡೆಗೆ ಕಾನೂನು : ಸಿದ್ದರಾಮಯ್ಯ ಘೋಷಣೆ