ರಾಜ್ಯದಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆಯಾಗಿದ್ದಕ್ಕೆ ಬಿಜೆಪಿ ಕಿಡಿ

Kannadaprabha News   | Kannada Prabha
Published : Dec 29, 2025, 05:47 AM IST
vijayendra r ashok

ಸಾರಾಂಶ

ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರಮುಖ ಪ್ರತಿಪಕ್ಷ ಬಿಜೆಪಿ ನಾಯಕರು ಆರೋಪಿಸಿದ್ದಾರೆ.

 ಬೆಂಗಳೂರು :  ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರಮುಖ ಪ್ರತಿಪಕ್ಷ ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಪಕ್ಷದ ಮುಖಂಡರೂ ಆಗಿರುವ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್‌ ರಾವ್‌ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ನಮ್ಮ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ ಡ್ರಗ್ಸ್ ದಂಧೆ ಎಲ್ಲ ರಾಜ್ಯಗಳಲ್ಲಿಯೂ ಇದೆ ಎಂದು ಇದರ ಗಂಭೀರತೆ ಅರಿಯದೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಉಡಾಫೆ ಉತ್ತರ ಕೊಟ್ಟಿದ್ದರು ಎಂದು ಅಶೋಕ್ ಹರಿಹಾಯ್ದಿದ್ದಾರೆ.

ಶೌರ್ಯ, ಸಾಹಸ, ದಕ್ಷತೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ ಪೊಲೀಸ್ ಇಲಾಖೆ ಕಾಂಗ್ರೆಸ್ ಸರ್ಕಾರದ ಅಸಮರ್ಥತೆಯಿಂದ ನಿತ್ರಾಣವಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆ ಪತ್ತೆ ಹಚ್ಚಲು, ಡ್ರಗ್ಸ್ ದಂಧೆಕೋರರನ್ನು ಮಟ್ಟ ಹಾಕಲು ಮಹಾರಾಷ್ಟ ಪೊಲೀಸರು ಬರಬೇಕಾದರೆ ಕರ್ನಾಟಕದ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಯುವ ಜನಾಂಗದ ಭವಿಷ್ಯಕ್ಕೆ ಮಾರವಾಗಿರುವ ಈ ಡ್ರಗ್ಸ್ ದಂಧೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಇದಕ್ಕೆ ಕಡಿವಾಣ ಹಾಕಲು ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಎಚ್ಚರಿಸಿದ್ದಾರೆ.

ಉಡ್ತಾ ಬೆಂಗಳೂರು -ವಿಜಯೇಂದ್ರ

ಕರ್ನಾಟಕದ ರಾಜಧಾನಿ ಬೆಂಗಳೂರು ಈಗ ‘ಡ್ರಗ್ಸ್ ಹಬ್’, ‘ಉಡ್ತಾ ಬೆಂಗಳೂರು’ ಆಗಿ ಮಾರ್ಪಡುತ್ತಿರುವುದು ಆತಂಕಕಾರಿ ಮಾತ್ರವಲ್ಲ, ಕಾನೂನು ಸುವ್ಯವಸ್ಥೆಯ ಕುಸಿತದ ದುರಂತ ಸಾಕ್ಷ್ಯ ಎಂದು ವಿಜಯೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಬೆನ್ನಲ್ಲೇ ಈಗ ಬೆಂಗಳೂರಿನಲ್ಲೂ ಮೂರು ಡ್ರಗ್ ಫ್ಯಾಕ್ಟರಿಗಳನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದರೆ ನಮ್ಮ ರಾಜ್ಯದ ಗುಪ್ತಚರ ಇಲಾಖೆ ಮತ್ತು ಪೊಲೀಸ್ ವ್ಯವಸ್ಥೆ ನಿದ್ರಿಸುತ್ತಿದೆಯೇ? ಪೊಲೀಸರನ್ನು ಕೇವಲ ವಿರೋಧ ಪಕ್ಷದವರ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆಯೇ? ನಮ್ಮ ಮಕ್ಕಳ, ಯುವಜನತೆಯ ಬಗ್ಗೆ ನಿಮಗೆ ಕಿಂಚಿತ್ತೂ ಕಾಳಜಿ ಇಲ್ಲವೆ? ಹೊರರಾಜ್ಯದ ಪೊಲೀಸರು ಬಂದು ನಮ್ಮ ರಾಜ್ಯದ ಡ್ರಗ್ ಮಾಫಿಯಾ ಬಯಲಿಗೆಳೆಯಬೇಕಾದ ಅನಿವಾರ್ಯತೆ ಬಂದಿರುವುದು ಈ ರಾಜ್ಯ ಕಾಂಗ್ರೆಸ್‌ ಸರ್ಕಾರದ ವೈಫಲ್ಯ ಮಾತ್ರವಲ್ಲ, ನಾಚಿಕೆಗೇಡಿನ ಸಂಗತಿ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಕಿಡಿಕಾರಿದ್ದಾರೆ.

ರಾಜೀನಾಮೆ ನೀಡಲಿ- ಡಾ.ಅಶ್ವತ್ಥನಾರಾಯಣ:

ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಮಾದಕವಸ್ತು ತಯಾರಿಕೆ, ಸಾಗಣೆ, ಮಾರಾಟ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೂಡಲೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ, ಗೃಹಮಂತ್ರಿ ಹಾಗೂ ಪೊಲೀಸ್‌ ಇಲಾಖೆ ಮುಖ್ಯಸ್ಥರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಡಾ.ಸಿ.ಎನ್‌.ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾದಕವಸ್ತು ತಯಾರಿಕೆ ಹಾಗೂ ಮಾರಾಟದ ವ್ಯವಸ್ಥಿತ ಜಾಲ ಸಕ್ರಿಯವಾಗಿದೆ. ಇದನ್ನು ತಡೆಗಟ್ಟುವಲ್ಲಿ ಗೃಹ ಇಲಾಖೆ ವಿಫಲವಾಗಿರುವುದು ಎದ್ದು ಕಾಣುತ್ತಿದೆ. ಫ್ಯಾಕ್ಟರಿ ತೆರೆದು ಕೋಟ್ಯಂತರ ರು. ಮೌಲ್ಯದ ಮಾದಕವಸ್ತು ತಯಾರಿಸಲಾಗುತ್ತಿದೆ. ಗೃಹ ಇಲಾಖೆ ಏನು ಮಾಡುತ್ತಿದೆ? ಗುಪ್ತಚರ, ನಾರ್ಕೊಟಿಕ್‌ ವಿಭಾಗ ಏನು ಮಾಡುತ್ತಿದೆ? ಪೊಲೀಸ್‌ ಅಧಿಕಾರಿಗಳು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದರು.

ಭಾಸ್ಕರ್ ರಾವ್ ಮಾತನಾಡಿ, ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ದುಬಾರಿ ಡ್ರಗ್ಸ್‌ ಪತ್ತೆಯಾಗಿದೆ. ಬೇರೆ ರಾಜ್ಯದ ಪೊಲೀಸರು ಇಲ್ಲಿಗೆ ಬಂದು ದಾಳಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಗೃಹ ಇಲಾಖೆ, ಗುಪ್ತಚರ ಸಂಪೂರ್ಣ ವಿಫಲವಾಗಿದೆ. ಗೃಹ ಇಲಾಖೆ ಎನ್‌ಸಿಬಿ, ಎನ್‌ಐಎ ಜತೆಗೆ ಸರಿಯಾದ ಸಂಬಂಧ ಇರಿಸಿಕೊಳ್ಳದಿರುವುದು ಅಪರಾಧ ಹೆಚ್ಚಳಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಡ್ರಗ್ಸ್‌ ದಂಧೆ ವಿರುದ್ಧ ಮೃದುನೀತಿ ಅನುಸರಣೆ ಹಾಗೂ ಕಠಿಣ ಡ್ರಗ್ಸ್‌ ವಿರೋಧಿ ನೀತಿ ಇಲ್ಲದಿರುವುದು ಡ್ರಗ್ಸ್‌ ದಂಧೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮರ್ಯಾದಾ ಹತ್ಯೆ ತಡೆಗೆ ಕಾನೂನು : ಸಿದ್ದರಾಮಯ್ಯ ಘೋಷಣೆ
ಡ್ರಗ್ಸ್‌ ಕಾರ್‍ಯಾಚರಣೆಯಲ್ಲಿ ರಾಜ್ಯ ಪೊಲೀಸರೂ ಭಾಗಿ : ಡಾ। ಪರಂ