
ಬೆಂಗಳೂರು : ರಾಜ್ಯದಲ್ಲಿ ಮರ್ಯಾದಾ ಹತ್ಯೆ ತಡೆ ಸಂಬಂಧ ಕಾನೂನು ಜಾರಿಗೊಳಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕನ್ನಡ ಹೋರಾಟಗಾರರ ಸಮಿತಿಯಿಂದ ಭಾನುವಾರ ಅರಮನೆ ಮೈದಾನದಲ್ಲಿ ನಡೆದ ‘ಜನರಾಜ್ಯೋತ್ಸವ’ ಕಾರ್ಯಕ್ರಮದಲ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಅವರು, ಅನ್ಯಜಾತಿಯ ಯುವಕನನ್ನು ವಿವಾಹ ಆಗಿದ್ದ ಕಾರಣಕ್ಕೆ ತಂದೆಯೊಬ್ಬರು ಗರ್ಭಿಣಿ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ‘ಹುಬ್ಬಳ್ಳಿ ಸೇರಿ ಇತರೆಡೆ ನಡೆದ ಮರ್ಯಾದಾ ಹತ್ಯೆ ಕುರಿತ ವಿಚಾರ ಗಮನಕ್ಕಿದೆ. ಇದರ ತಡೆಗೆ ಕಾನೂನು ಜಾರಿಗೊಳಿಸಲು ಒತ್ತಾಯವಿದೆ. ಆದರೆ, ಕೇವಲ ಕಾನೂನು ತಂದರೆ ಸಾಲದು ಅದನ್ನು ಜಾರಿ ಮಾಡುವ ಕೆಲಸ ಕೂಡ ಗಂಭೀರವಾಗಿ ಆಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಲಿದೆ’ ಎಂದು ಹೇಳಿದರು.
ಇತ್ತೀಚೆಗೆ ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ತಂದೆಯೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿತ್ತು.
ತಂದೆಯಿಂದ ಹತ್ಯೆಯಾದ ಮಾನ್ಯ ಪಾಟೀಲ್ ಮತ್ತು ಮದುವೆಯಾದ ಹುಡುಗ ವಿವೇಕಾನಂದ ಒಂದೇ ಗ್ರಾಮದವರಾಗಿದ್ದರು. ಇಬ್ಬರದ್ದೂ ಬೇರೆ ಬೇರೆ ಜಾತಿಯಾಗಿದ್ದರಿಂದ ಹುಡುಗಿಯ ಕುಟುಂಬದವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ವಿರೋಧದ ನಡುವೆ ಮೇ ತಿಂಗಳಲ್ಲಿ ಇಬ್ಬರ ಮದುವೆಯಾಗಿತ್ತು. ಮದುವೆ ನಂತರ ಇಬ್ಬರೂ ಪ್ರಾಣ ಭಯದಿಂದ ಹಾವೇರಿಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ವಾಪಸ್ ಇನಾಂ ವೀರಾಪುರಕ್ಕೆ ಬಂದು ಸಂಸಾರ ನಡೆಸುತ್ತಿದ್ದರು.
ಮಗಳು ವಾಪಸ್ ಬಂದಿರುವ ಮಾಹಿತಿ ತಿಳಿದ ಹುಡುಗಿಯ ತಂದೆ ಹಾಗೂ ಕುಟುಂಬಸ್ಥರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವಿವೇಕಾನಂದ ಹಾಗೂ ಆತನ ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ. ಇಷ್ಟಾಗಿ ಸುಮ್ಮನಾಗದೆ ಹುಡುಗನ ಮನೆಗೆ ತೆರಳಿ ಮಗಳು ಮಾನ್ಯ ಸೇರಿದಂತೆ ಮನೆಯಲ್ಲಿ ಇದ್ದ ಎಲ್ಲರ ಮೇಲೆ ಹಲ್ಲೆ ಮಾಡಿದ್ದರು. ತನ್ನ ಕುಟುಂಬದ ಮರ್ಯಾದೆ ಹಾಳು ಮಾಡಿದ್ದಾಳೆಂದು ಮಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ತೀವ್ರ ಗಾಯಗಳಿಂದಾಗಿ ಮಗಳು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಳು.
ಘಟನೆ ಬಗ್ಗೆ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಇಂತಹ ಮರ್ಯಾದಾ ಹತ್ಯೆ ಘಟನೆ ತಡೆಯಲು ವಿಶೇಷವಾದ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ