ಸಿಎಂ ಸ್ಥಾನದಿಂದ ಬಿಎಸ್‌ವೈ ಕೆಳಗಿಳಿಸಬೇಡಿ: ಮಠಾಧೀಶರ ಒಕ್ಕೊರಲ ನಿರ್ಣಯ

By Kannadaprabha NewsFirst Published Jul 26, 2021, 8:38 AM IST
Highlights

* ಯಡಿಯೂರಪ್ಪ ಅಧಿಕಾರ ಪೂರ್ಣಗೊಳಿಸಲು ಬಿಡಿ
* ಮಠಾಧೀಶರ ಸಮಾವೇಶದಲ್ಲಿ ಒಕ್ಕೊರಲ ಬೇಡಿಕೆ
* ಸಂತೋಷ್‌, ಜೋಶಿ ವಿರುದ್ಧ ಘೋಷಣೆ
 

ಬೆಂಗಳೂರು(ಜು.26): ಸ್ಥಾನದಿಂದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಬದಲಾಯಿಸಬಾರದು, ಹುಟ್ಟು ಹೋರಾಟಗಾರನ ಸ್ವಾಭಿಮಾನಕ್ಕೆ ಧಕ್ಕೆ ತರಬಾರದು. ಸರ್ವರ ಶ್ರೇಯೋಭಿವೃದ್ಧಿಗೂ ಶ್ರಮಿಸಿ ಸಮರ್ಥವಾಗಿ ಆಡಳಿತ ನಡೆಸುತ್ತಿರುವುದರಿಂದ ಅಧಿಕಾರವಧಿ ಪೂರ್ಣಗೊಳಿಸಲು ಬಿಜೆಪಿ ಹೈಕಮಾಂಡ್‌ ಅವಕಾಶ ಮಾಡಿಕೊಡಬೇಕು ಎಂಬ ಒಕ್ಕೊರಲ ನಿರ್ಣಯವನ್ನು ಮಠಾಧೀಶರು ಕೈಗೊಂಡಿದ್ದಾರೆ.

ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿಲ್ಲ. ಜಾತಿ ಅಥವಾ ಮಠಾಧೀಶರ ಶಕ್ತಿ ಪ್ರದರ್ಶನ ಸಹ ಅಲ್ಲ, ತಪ್ಪು ಮಾಡಲು ಹೊರಟಾಗ ಜಾಗೃತಿ ಮೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ಸ್ವಾರ್ಥ ಇಲ್ಲ ಎಂದು ಮಾತನಾಡಿದ ವಿವಿಧ ಮಠಾಧೀಶರು, ಕೆಲವು ಸ್ವಪಕ್ಷೀಯರು, ಜಾತಿವಾದಿಗಳ ಕುತಂತ್ರಕ್ಕೆ ಬಲಿಯಾಗಬಾರದು, ಈ ನಿಟ್ಟಿನಲ್ಲಿ ಹೈಕಮಾಂಡ್‌ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಬಳ್ಳಾರಿ ರಸ್ತೆಯ ಅರಮನೆ ಮೈದಾನದಲ್ಲಿ ರಾಜ್ಯದ ವಿವಿಧ ಭಾಗಗಳ ನೂರಾರು ಮಠಾಧೀಶರು, ಸಮಾವೇಶ ನಡೆಸಿ ಬಿಜೆಪಿ ಹೈಕಮಾಂಡ್‌ಗೆ ಖಡಕ್‌ ಸಂದೇಶ ರವಾನಿಸಿದ್ದಾರೆ.

ಸಸಿಗೆ ನೀರೆರೆಯುವ ಮೂಲಕ ಸಮಾವೇಶ ಉದ್ಘಾಟಿಸಿದ ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಕೊನೆಗೊಳ್ಳಬೇಕು. ಬಿಜೆಪಿ ಹೈಕಮಾಂಡ್‌ ಇದನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಬೇಕು. ಮುಖ್ಯಮಂತ್ರಿ ಪದವಿ ಸಾರ್ವಜನಿಕ ಆಸ್ತಿಯಾಗಿದೆ. ಯಡಿಯೂರಪ್ಪನವರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಸರ್ವ ಜನಾಂಗದವರ ವಿಶ್ವಾಸಕ್ಕೂ ಪಾತ್ರರಾಗಿದ್ದಾರೆ. ಆದ್ದರಿಂದ ಅವರನ್ನು ಬದಲಾಯಿಸಬಾರದು ಎಂದು ಅಭಿಪ್ರಾಯಪಟ್ಟರು.

ಬಿಎಸ್‌ವೈ ಪರ ಇಂದು 1,000 ಸ್ವಾಮೀಜಿಗಳ ಶಕ್ತಿ ಪ್ರದರ್ಶನ!

ಅಗೌರವದಿಂದ ಇಳಿಸಿದರೆ ಸಂಸ್ಕೃತಿಯಲ್ಲ:

ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಪಕ್ಷಕ್ಕಾಗಿ ಯಡಿಯೂರಪ್ಪ ಬಹಳಷ್ಟುದುಡಿದಿದ್ದಾರೆ. ಅವರನ್ನು ಅಗೌರವದಿಂದ ಇಳಿಸಿದರೆ ಅದು ಸಂಸ್ಕೃತಿಯಲ್ಲ. ಆಡಳಿತಾವಧಿ ಪೂರ್ಣಗೊಳಿಸಲು ಅವಕಾಶ ಮಾಡಿಕೊಡಬೇಕು. ಎಲ್ಲ ಸಮುದಾಯದ ಮಠಗಳಿಗೆ ಹೆಚ್ಚು ಅನುದಾನ ನೀಡಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಬೆಂಬಲ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಮಠಾಧೀಶರು ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ ನಾವು ರಾಜಕಾರಣ ಮಾಡುತ್ತಿಲ್ಲ. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯದ ನಂತರವೂ ಮಠಗಳು ಉತ್ತಮ ಕೆಲಸ ಮಾಡುತ್ತಿವೆ. ರಾಜಕೀಯ ಪಕ್ಷಗಳು ಅಸ್ತಿತ್ವ ಕ್ಕೆ ಬರುವ ಮುಂಚೆಯೇ ಮಠಗಳು ಇದ್ದವು. ಜನಹಿತದ ದೃಷ್ಟಿಯಿಂದ ನಾವು ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿದ್ದೇವೆ ಅಷ್ಟೇ ಎಂದು ಸಮರ್ಥಿಸಿಕೊಂಡರು.

ಸ್ವಪಕ್ಷದ ಕೆಲವರು ಹಾಗೂ ಜಾತಿವಾದಿಗಳಿಂದ ಯಡಿಯೂರಪ್ಪ ಅವರ ವಿರುದ್ಧ ಕುತಂತ್ರ ನಡೆಯುತ್ತಿದೆ. ಇಂತಹವರ ವಿರುದ್ಧ ಹೈಕಮಾಂಡ್‌ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಂತವರನ್ನು ಹೈಕಮಾಂಡ್‌ ನಿಯಂತ್ರಿಸುವ ಕೆಲಸ ಮಾಡದ ಕಾರಣ ಮಠಾಧೀಶರಾದ ನಾವು ಮುಂದೆ ಬರಬೇಕಾಯಿತು ಎಂದು ಹೇಳಿದರು.

ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬೆಂಗಳೂರಿನ ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು, ನರೇಂದ್ರಬಾಬು ಶರ್ಮ ಗುರೂಜಿ ಮತ್ತಿತರರು ಪಾಲ್ಗೊಂಡಿದ್ದರು.

ಸ್ವಾಮೀಜಿಗಳನ್ನು ಜಾತಿವಾದಿಗಳು ಎಂದು ಕರೆಯಬಾರದು. ಹಿಂದೆ ಸಿದ್ದರಾಮಯ್ಯ ಅಹಿಂದ ಚಳವಳಿ ನಡೆಸಿದಾಗ ಜಾತಿಭೇದ ಮರೆತು ನಾವು ಬೆಂಬಲ ನೀಡಿದ್ದೆವು. ಮಠಾಧೀಶರಿಗೆ ನಾಡಿನ ಮತ್ತು ಜನರ ಶ್ರೇಯ ಮಾತ್ರ ಮುಖ್ಯ. ಯಡಿಯೂರಪ್ಪ ಅಭಿವೃದ್ಧಿ ರಾಜಕಾರಣ ಮಾಡುತ್ತಿರುವುದರಿಂದ ಬೆಂಬಲ ನೀಡುತ್ತಿದ್ದೇವೆ ಎಂದು ಚಿತ್ರದುರ್ಗ ಬೃಹನ್ಮಠ ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.  

'ಬಿಎಸ್‌ವೈ ಸರಿಸಾಟಿಯಾಗಬಲ್ಲ ನಾಯಕ ಸದ್ಯಕ್ಕೆ ಯಾರೂ‌ ಇಲ್ಲ'

ಯಡಿಯೂರಪ್ಪ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬಾರದು ಎಂದು ಎಲ್ಲ ಸಮುದಾಯದ ಮಠಾಧೀಶರು, ವೀರಶೈವ ಮಹಾಸಭೆ, ಕಾಂಗ್ರೆಸ್‌ ಮತ್ತು ಬಿಜೆಪಿಯ ಹಿರಿಯ ನಾಯಕರೇ ಹೇಳಿದ್ದಾರೆ. ಆದ್ದರಿಂದ ಬಿಜೆಪಿ ಹೈಕಮಾಂಡ್‌ ಈ ಬಗ್ಗೆ ಯೋಚಿಸಬೇಕು ಎಂದು ಬಾಲೆಹೊಸೂರು ಮಠ ದಿಂಗಾಲೇಶ್ವರ ಸ್ವಾಮೀಜಿಗಳು ಹೇಳಿದ್ದಾರೆ.  

ಸಂತೋಷ್‌, ಜೋಶಿ ವಿರುದ್ಧ ಘೋಷಣೆ

ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರೆಸಬೇಕು ಎಂದು ಸಮಾವೇಶದಲ್ಲಿ ಮಠಾಧೀಶರು ಭಾಷಣ ಮಾಡುತ್ತಿದ್ದಾಗ, ಸಭಿಕರ ಸಾಲಿನಲ್ಲಿ ಕುಳಿತಿದ್ದ ಕೆಲವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮತ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದು ಕಂಡುಬಂತು.
 

click me!