
ಬೆಂಗಳೂರು (ಏ.11): ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಪ್ರತಿನಿತ್ಯ 6,500 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದನೆ ಆಗುತ್ತಿದ್ದು, ವಿಭಜಿತ ಕಸವನ್ನು ಮಿಶ್ರಣವಾಗಿ ತೆಗೆದುಕೊಂಡು ಬಂದು ಭೂ ಭರ್ತಿ ಮಾಡುವ ಕ್ರಮವನ್ನು ವೀಕ್ಷಣೆ ಮಾಡಿದ ಸ್ವಚ್ಛಭಾರತ ಮಿಷನ್ ತಂಡದ ಅಧಿಕಾರಿಗಳು ಛೀಮಾರಿ ಹಾಕಿದ್ದಾರೆ. ಭೂಭರ್ತಿ ಕೇಂದ್ರದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವಂತೆ ಸಲಹೆಯನ್ನು ನೀಡಿದ್ದಾರೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ವಚ್ಚ ಭಾರತ್ ಮಿಷನ್ (ನಗರ) [SBM(U)]-2.O ನಿರ್ದೇಶಕರಾದ ಬಿನಯ್ ಝಾ ಶುಕ್ರವಾರ ಬಿ.ಎಸ್.ಡಬ್ಲ್ಯೂ.ಎಂ.ಎಲ್ ಕಛೇರಿಗೆ ಭೇಟಿ ನೀಡಿ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ಹಣಾ ಅಧಿಕಾರಿ ಡಾ. ಕೆ ಹರೀಶ್ ಕುಮಾರ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಯಾವ ರೀತಿ ಮಾಡಲಾಗುತ್ತಿದೆ, ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಮುಂದಿನ ದಿನಗಳಲ್ಲಿ ರೂಪಿಸಿರುವ ಯೋಜನೆಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಸಮಗ್ರ ಮಾಹಿತಿಯನ್ನು ನೀಡಿದರು. ನಗರದಲ್ಲಿ ಪ್ರಸ್ತುತ ಪ್ರತಿನಿತ್ಯ 6,500 ಮೆ.ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಪ್ರತಿ ಮನೆ-ಮನೆಗೆ ತೆರಳಿ ಆಟೋ ಟಿಪ್ಪರ್ ಗಳ ಮೂಲಕ ಹಸಿ-ಒಣ ಹಾಗೂ ನೈರ್ಮಲ್ಯ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್‌ಗಳಿಗೆ ಆರ್.ಎಫ್.ಐ.ಡಿ ಅಳವಡಿಸಿದ್ದು, ಮಾರ್ಷಲ್ ಗಳು ಪ್ರತಿನಿತ್ಯ ಮೊಬೈಲ್ ತಂತ್ರಾಂಶದ ಮೂಲಕ ಹಾಜರಾತಿ ಪಡೆಯಲಿದ್ದಾರೆ ಎಂದು ಹೇಳಿದರು.
ನಗರದಲ್ಲಿ ರಸ್ತೆ ಬದಿ ತ್ಯಾಜ್ಯ ಬಿಸಾಡುವವರ ಮೇಲೆ ಮಾರ್ಷಲ್‌ಗಳು ದಂಡ ವಿಧಿಸಲಿದ್ದಾರೆ. ರಾತ್ರಿ ವೇಳೆ ಗಸ್ತು ತಿರುಗುವ ವೇಳೆ ರಸ್ತೆ ಬದಿ ಕಸ ಬಿಸಾಡುವವರನ್ನು ಹಿಡಿದು ದಂಡ ವಿಧಿಸಿ ಮತ್ತೆ ರಸ್ತೆ ಬದಿ ಕಸ ಬಿಸಾಡದಂತೆ ಎಚ್ಚರಿಕೆ ನೀಡಲಿದ್ದಾರೆ. ಅದಲ್ಲದೆ ಮನೆ-ಮನೆ ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಗಳಿಗೆ ಕಸವನ್ನು ನೀಡಲು ಅರಿವು ಮೂಡಿಸುತ್ತಾರೆ ಎಂದು ತಿಳಿಸಿದರು. ಇದಲ್ಲದೆ ಘನತ್ಯಾಜ್ಯ ನಿರ್ವಣೆಯ ಮೇಲ್ವಿಚಾರಣೆಗಾಗಿ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ನಿರ್ಮಾಣ, ಕಸ ವಿಲೇವಾರಿಯ ಮೇಲ್ವಿಚಾರಣೆಗಾಗಿ ತಂತ್ರಾಂಶಗಳ ಅಭಿವೃದ್ಧಿಪಡಿಸುತ್ತಿರುವ ಬಗ್ಗೆಯೂ ಮಾಹಿತಿ ನೀಡಲಾಯಿತು.
ಇದನ್ನೂ ಓದಿ: Bengaluru: ಮೆಟ್ರೋ ನಿಲ್ದಾಣದಲ್ಲೇ ಯುವ ಜೋಡಿಯ ರೋಮ್ಯಾನ್ಸ್, ಇದೆಂಥಾ ಅಸಹ್ಯ ಎಂದ ನೆಟ್ಟಿಗರು!
ಘನತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಭೇಟಿ: ಸ್ವಚ್ಛ ಭಾರತ ಅಭಿಯಾನದ ಧ್ಯೆಯೋದ್ದೆಶಗಳಲ್ಲೊಂದಾದ ಘನತ್ಯಾಜ್ಯದ ಸಮರ್ಪಕ ನಿರ್ವಹಣೆಯ ಕುರಿತು ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆಯುವ ಸಲುವಾಗಿ ಭೂಭರ್ತಿ ಘಟಕಕ್ಕೆ ಮತ್ತು ಕೆ.ಸಿ.ಡಿ.ಸಿ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿದರು. ಭೂಭರ್ತಿ ಘಟಕದಲ್ಲಿ ವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿರುವ ಮಿಶ್ರ ತ್ಯಾಜ್ಯ ವಿಲೇವಾರಿಯನ್ನು ಗಮನಿಸಿ ಹಲವಾರು ಸಲಹೆಗಳನ್ನು ನೀಡಿದರು. ಭೂಭರ್ತಿ ಘಟಕದಲ್ಲಿ ವಿಲೇಗೊಳಿಸುತ್ತಿರುವ ಮಿಶ್ರ ತ್ಯಾಜ್ಯದ ಪ್ರಮಾಣವನ್ನು ಕುಂದಿಸಲು ಮೂಲದಲ್ಲಿಯೇ ತ್ಯಾಜ್ಯದ ವಿಂಗಡಣೆಯ ಪ್ರತಿಶತವನ್ನು ವೃದ್ಧಿಸಲು ಸಾರ್ವಜನಿಕರಿಗೆ ಫಲಿತಾಂಶ ಆಧಾರಿತ ಹೆಚ್ಚೆಚ್ಚು ಮಾಹಿತಿ, ಶಿಕ್ಷಣ ಮತ್ತು ಸಂವಹನ ಕೈಗೊಳ್ಳಲು ಸಲಹೆಯನ್ನು ನೀಡಿದರು.
ನಿರ್ಮಾಣ ಹಂತದ ಸಂಸ್ಕರಣ ಘಟಕಕ್ಕೆ ಭೇಟಿ: ಪೂರ್ಣ ಪ್ರಮಾಣದಲ್ಲಿ ಅಂದಾಜು ರೂ.150 ಕೋಟಿಗಳ ಖಾಸಗಿ ವೆಚ್ಚದಲ್ಲಿ ಮೆ. ಮುಕ್ಕಾ ಪ್ರೋಟಿನ್ಸ್ ಲಿಮಿಟೆಡ್ ವತಿಯಿಂದ ಅಂತರಾಷ್ಟ್ರೀಯ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ತಂತ್ರಜ್ಞಾನದ ಹಾಗೂ ಕಾರ್ಯಾಚರಣೆಯ ಕುರಿತು ಮಾಹಿತಿಯನ್ನು ಪಡೆದರು. ಸಂಸ್ಕರಣಾ ಘಟಕದಲ್ಲಿ ಅಂದಾಜು 1,000 ಮೆ.ಟನ್ ಸಾಮರ್ಥ್ಯದ ಸಂಸ್ಕರಣ ಘಟಕವೊಂದು ಬೆಂಗಳೂರು ನಗರಕ್ಕೆ ಅಗತ್ಯವಿರುವ ಕುರಿತು ವಿಶ್ಲೇಷಿಸಿ ನಗರಕ್ಕೆ ಕೊಡುಗೆಯನ್ನು ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಖಾಸಗಿ ಸಂಸ್ಥೆಯ ನಿರ್ಧಾರ ಮತ್ತು ಸಾಹಸಕ್ಕೆ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪಾರ್ಕ್ ಬಳಿ ಬೈಕ್‌ನಲ್ಲಿ ಕೂತಿದ್ದ ಹಿಂದೂ ಯುವಕ-ಮುಸ್ಲಿಂ ಯುವತಿ ಮೇಲೆ ಹಲ್ಲೆ, ಪ್ರಿಯಾಂಕ್ ಖರ್ಗೆ ಆಕ್ರೋಶ!
ಅಂತರಾಷ್ಟ್ರೀಯ ತಂತ್ರಜ್ಞಾನದೊಂದಿಗೆ ಬೃಹತ್ ಸಾಮರ್ಥ್ಯದ ಸಂಸ್ಕರಣ ಘಟಕ ನಿರ್ಮಿಸುತ್ತಿರುವ ಕುರಿತು ಪ್ರಸ್ತಾವನೆಯನ್ನು ಕ್ರಮಾನುಗತವಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಡಿಯ ಸ್ವಚ್ಛ ಭಾರತ ಅಭಿಯಾನದ ರಾಷ್ಟ್ರೀಯ ಉಸ್ತುವಾರಿ ಸಮಿತಿಗೆ ಸಲ್ಲಿಸಿದಲ್ಲಿ, ಸದರಿ ಮೆ. ಮುಕ್ಕಾ ಪ್ರೋಟಿನ್ಸ್ ಲಿಮಿಟೆಡ್ ನ ಭಾರಿ ಪ್ರಮಾಣದ ತಂತ್ರಜ್ಞಾನವನ್ನು ಅನುಮೋದಿಸಿ ರಾಜ್ಯ ಹಾಗೂ ದೇಶದ ಇತರೆ ಮಹಾನಗರ ಪಾಲಿಕೆಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸೂಚಿಸಿ ಮಾರ್ಗಸೂಚಿಗಳನ್ನು ಹೊರಡಿಸಲಾಗವುದೆಂದು ಆಶ್ವಾಸನೆಯನ್ನು ನೀಡಿದರು. ಪ್ರಸ್ತಾವನೆಯನ್ನು ಸಲ್ಲಿಸಲು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾದ ರಮಾಮಣಿ, ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಲೋಕೇಶ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ