
ಹೊಸಪೇಟೆ (ಏ.17): ಬಡವ, ಶ್ರೀಮಂತ, ಉನ್ನತ ಕುಲ, ಹಣ ಇದ್ದವರು ಎನ್ನದೇ ಎಲ್ಲರೂ ಜಪ ಮಾಡುವ ಮಂತ್ರ ರಾಮ ತಾರಕ ಮಂತ್ರವಾಗಿದೆ. ರಾಮ ಜಪದಿಂದ ಎಲ್ಲ ಲೋಪಗಳಿಗೂ ಪರಿಹಾರ ಸಿಗಲಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ತಾಲೂಕಿನ ಗುಂಡ್ಲವದ್ದಿಗೇರಿ ಗ್ರಾಮದ ಶ್ರೀ ಸೀತಾರಾಮಚಂದ್ರ ಹಾಗೂ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಶ್ರೀರಾಮ ತಾರಕ ಮಹಾಮಂತ್ರ ಸಪ್ತಾಹದ ಸುವರ್ಣ ಮಹೋತ್ಸವ ಹಾಗೂ ಶ್ರೀಗಳ ಪುರ ಪ್ರವೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಬುಧವಾರ ಆಶೀರ್ವಚನ ನೀಡಿದ ಶ್ರೀಗಳು, ರಾಮ ತಾರಕ ಜಪದಿಂದ ಎಲ್ಲರ ಕಷ್ಟಗಳು ಪರಿಹಾರ ಆಗಲಿ. ಮದುವೆ ಆಗದವರಿಗೆ ಮದುವೆ ಆಗಲಿ, ಮನೆ ಕಟ್ಟಿಸುವ ಸಂಕಲ್ಪ ತೊಟ್ಟವರು ಗೃಹ ನಿರ್ಮಾಣ ಮಾಡಲಿ. ರೈತರ ಬದುಕು ಕೂಡ ಹಸನಾಗಲಿ ಎಂದರು.
ಇದನ್ನೂ ಓದಿ: ಮಂತ್ರಾಲಯ: ರಾಘವೇಂದ್ರ ಸ್ವಾಮಿಗಳ ಹೆಸರಲ್ಲಿ ಶೀಘ್ರ ವಿಶ್ವವಿದ್ಯಾಲಯ, ಸುಬುಧೇಂದ್ರ ಶ್ರೀ
ಶಿವ ಪರಮಾತ್ಮ ಪಾರ್ವತಿ ದೇವಿಗೆ ಮಹಾ ವಿಷ್ಣುವಿನ ಸಹಸ್ರನಾಮ ಸ್ತೋತ್ರದ ಬಗ್ಗೆ ವಿವರಣೆ ನೀಡಿದ್ದು, ವಿಷ್ಣುವಿನ ಪರಮ ನಾಮ ಶ್ರೀರಾಮ ರಾಮ ರಾಮೇತಿ ಆಗಿದೆ. ಎಲ್ಲಾ ನಾಮಗಳ ಸಾರ, ರಾಮ ನಾಮ ಆಗಿದೆ. ರಾಮ ಹೆಸರಿನಲ್ಲಿ ಎರಡು ಅಕ್ಷರಗಳಿವೆ. ರಾ ಅಕ್ಷರ ಎಲ್ಲ ರಾಶಿ, ರಾಶಿ ದೋಷಗಳ ಪರಿಹಾರ ಮಾಡಲಿದೆ. ಮ ಎಂದು ಉಚ್ಚರಿಸಿದಾಗ ಪರಿಹಾರ ಆದ ದೋಷ ಮತ್ತೆ ಒಳ ಹೊಕ್ಕುವುದಿಲ್ಲ. ರಾಮ, ನಾಮ ಜಪ, ಎಲ್ಲ ಪಾಪಗಳ ಪರಿಹಾರ ಮಾಡಲಿದೆ ಎಂದರು.
ಕಳೆದ 50 ವರ್ಷಗಳಿಂದ ಈ ದೇವಾಲಯದಲ್ಲಿ ಪ್ರತಿ ವರ್ಷ ಶ್ರೀರಾಮ ತಾರಕ ಮಹಾಮಂತ್ರ ಸಪ್ತಾಹ ನಡೆಸುತ್ತಿರುವುದು ಧಾರ್ಮಿಕ ಕಾರ್ಯ ಆಗಿದೆ ಎಂದರು.
ಈ ದೇವಾಲಯದಲ್ಲಿ ರಾಮ, ಕೃಷ್ಣ, ಶಿವ, ನವಗ್ರಹಗಳಿವೆ. ರೈತರು ಏಳು ದಿನ ಉಳುಮೆ ಕಾರ್ಯದ ಮಧ್ಯೆ ಪ್ರತಿ ವರ್ಷ ರಾಮಜಪ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಎಲ್ಲರೂ ರಾಮಜಪ ಮಾಡಬೇಕು ಎಂದರು.
ಇದನ್ನೂ ಓದಿ: ಶ್ರೀ ರಾಘವೇಂದ್ರ ಸ್ವಾಮಿ 353ನೇ ಆರಾಧನಾ ಮಹೋತ್ಸವ ಆರಂಭ: ಟಿಟಿಡಿಯ ಶ್ರೀವಾರಿ ಶೇಷವಸ್ತ್ರ ಸಮರ್ಪಣೆ
ಶ್ರೀ ಸೀತಾರಾಮಚಂದ್ರ ಹಾಗೂ ಶ್ರೀ ಪಾಂಡುರಂಗ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಗೋಪಾಲ್, ಖಜಾಂಚಿ ಜನಾರ್ದನ, ಟಿ.ವಿ. ರಾಮಚಂದ್ರಪ್ಪ, ಕಂಪ್ಲಿ ತಿಮ್ಮಪ್ಪ, ಗೋಪಾಲಪ್ಪ, ಕುರಿ ತಿಮ್ಮಪ್ಪ, ದೇಗುಲದ ಅರ್ಚಕ ಜಂಬನಗೌಡ, ಶ್ರೀಮಠದ ಭಕ್ತ ಗುರುರಾಜ ದಿಗ್ಗಾವಿ, ಗ್ರಾಮದ ಹಿರಿಯರು ಹಾಗೂ ಮುಖಂಡರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ