PSI Recruitment Scam: ಅಮೃತ್‌ಪೌಲ್‌ ಜಾಮೀನು ಅರ್ಜಿ ವಜಾ, ಜೈಲಿನಲ್ಲಿ ರಾಜ್ಯಾತಿಥ್ಯ ಆರೋಪ!

By Suvarna NewsFirst Published Jan 5, 2023, 9:01 PM IST
Highlights

ಸಾಕ್ಷಿಗಳ ಮೇಲೆ ಪ್ರಭಾವದ ಕಾರಣ ನೀಡಿ  ಎಡಿಜಿಪಿ ಅಮೃತ್‌ಪೌಲ್‌ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ತನಿಖೆ ಸಂಪೂರ್ಣವಾಗಿ ಮುಗಿಯದೆ ಇರುವ ಹಿನ್ನೆಲೆಯಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಕಾರಣ ನೀಡಿದೆ.

ಬೆಂಗಳೂರು (ಜ.5): ಪಿಎಸ್‌ಐ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಅಮಾನತುಗೊಂಡಿರುವ ಆರೋಪಿ ಎಡಿಜಿಪಿ ಅಮೃತ್‌ಪೌಲ್‌ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಬುಧವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಬಂಧಿತರು ಪ್ರಭಾವಿಯಾಗಿದ್ದು, ತನಿಖೆ ಸಂಪೂರ್ಣವಾಗಿ ಮುಗಿಯದೆ ಇರುವ ಹಿನ್ನೆಲೆಯಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬುದನ್ನು ಪರಿಗಣಿಸಿ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಎಡಿಜಿಪಿ ಅಮೃತ್‌ ಪಾಲ್‌ ವಿರುದ್ಧ ತನಿಖೆ ಬಹುತೇಕ ಮುಕ್ತಾಯಗೊಂಡಿದೆ. ಆದರೆ, ಕೆಲ ಆಯಾಮಗಳ ತನಿಖೆ ಮಾತ್ರ ಮುಂದುವರಿದಿದೆ. ಈ ಹಿನ್ನೆಲೆ ಜಾಮೀನು ನೀಡಬಾರದು ಎಂದು ಸರ್ಕಾರ ಪರ ವಕೀಲರು ವಾದ ಮಂಡಿಸಿದರು. ಈ ವಾದವನ್ನು ಪರಿಗಣಿಸಿದ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಪಿಎಸ್‌ಐ ನೇಮಕಾತಿ ಪರೀಕ್ಷೆಯ ಉತ್ತರ ಪತ್ರಿಕೆಗಳಿದ್ದ ಸ್ಟ್ರಾಂಗ್‌ ರೂಂ ಕೀ ಅಮೃತ್‌ ಪೌಲ್‌ ಬಳಿ ಇತ್ತು. ಇತರೆ ಆರೋಪಿಗಳಿಗೆ ಕೀ ನೀಡಿದ್ದು, ಒಎಂಆರ್‌ ಶೀಟ್‌ ತಿದ್ದಿರುವುದಾಗಿ ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢಪಟ್ಟಿತ್ತು. ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕಿದ್ದರಿಂದ ಅಮೃತ್‌ಪೌಲ್‌ ಅವರನ್ನು ಬಂಧಿಸಲಾಗಿದೆ.

ಪೌಲ್‌ಗೆ ಜೈಲನಲ್ಲಿ ವಿಶೇಷ ಸೌಲಭ್ಯ: ಪೊಲೀಸ್‌ ದಾಳಿ?
ರಾಜ್ಯಾತಿಥ್ಯ ಆರೋಪ ಹಿನ್ನೆಲೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರುವ ಎಡಿಜಿಪಿ ಅಮೃತ್‌ ಪಾಲ್‌ ಅವರ ಸೆಲ್‌ನಲ್ಲಿ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಇತ್ತೀಚೆಗೆ ಅಮೃತ್‌ ಪಾಲ್‌ ಅವರಿಗೆ ಕಾರಾಗೃಹದ ಅಧಿಕಾರಿಗಳು ಕಾನೂನುಬಾಹಿರವಾಗಿ ವಿಶೇಷ ಸೌಲಭ್ಯ ಕಲ್ಪಿಸಿದ್ದರು ಎನ್ನಲಾಗಿತ್ತು. ಈ ಆರೋಪದ ಹಿನ್ನಲೆಯಲ್ಲಿ ಪೊಲೀಸರು, ಕೇಂದ್ರ ಕಾರಾಗೃಹದ ಮೇಲೆ ಎರಡು ಬಾರಿ ದಿಢೀರ್‌ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಆದರೆ ಈ ವೇಳೆ ವಿಶೇಷ ಸೌಲಭ್ಯ ಸಂಬಂಧ ಯಾವುದೇ ಪುರಾವೆ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಇನ್ನು ತಾವು ಜೈಲಿನ ಮೇಲೆ ಯಾವುದೇ ದಾಳಿ ನಡೆಸಿಲ್ಲ. ಇದೊಂದು ವದಂತಿ ಅಷ್ಟೇ ಎಂದು ಆಗ್ನೇಯ ವಿಭಾಗದ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಪ್ರಕರಣದ 26 ಆರೋಪಿಗಳಿಗೆ ಜಾಮೀನು: ರಾಜ್ಯದ ಪೊಲೀಸ್‌ ಇಲಾಖೆಯಲ್ಲಿ ಈವರೆಗಿನ ಅತ್ಯಂತ ದೊಡ್ಡ ಹಗರಣವೆಂದೇ ಹೇಳಲಾಗುತ್ತಿರುವ 545  ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಆರೋಪದಲ್ಲಿ ಜೈಲು ಪಾಲಾದ 26 ಆರೋಪಿಗಳಿಗೆ ಜನವರಿ 5ರಂದು ಜಾಮೀನು ಮಂಜೂರು ಲಭ್ಯವಾಗಿದೆ.

PSI Recruitment : ಪರೀಕ್ಷೆ ಅಕ್ರಮದಲ್ಲಿ ಜೈಲು ಸೇರಿದ್ದ 26 ಆರೋಪಿಗಳಿಗೆ ಜಾಮೀನು

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿ ಆರೋಪದ ಮೇಲೆ 26 ಜನರು ಜೈಲು ಪಾಲಾಗಿದ್ದರು. ಕಿಂಗ್ ಪಿನ್ ದಿವ್ಯಾ ಹಾಗರಗಿ , ಮಂಜುನಾಥ್ ಮೇಳಕುಂದಿ , ಕಾಶಿನಾಥ್ ಚಿಲ್ , ಡಿ ವೈ ಎಸ್ ಪಿ ಮಲ್ಲಿಕಾರ್ಜುನ ಸಾಲಿ ಸೇರಿ 26 ಜನರಿಗೆ ಜಾಮೀನು ಲಭ್ಯವಾಗಿದೆ. ಇನ್ನು ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧಿಶರಾದ ಕೆ ಬಿ ಪಾಟೀಲ್ ರಿಂದ ಜಾಮೀನು ಮಂಜೂರು ಮಾಡಿದ್ದಾರೆ ಎಂದು ತಿಳಿದುಬಂದಿದೆ. ನ್ಯಾಯಲಯದಿಂದ ಎಲ್ಲ ಆರೋಪಿಗಳಿಗೆ ಷರತ್ತು ಬದ್ದ ಜಾಮೀನು ನೀಡಿ ಆದೇಶ ಹೊರಡಿಸಲಾಗಿದೆ.

ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಆರ್‌ಡಿಪಿಗೆ ಮತ್ತೊಂದು ಸಂಕಷ್ಟ?

click me!