ನಗರದ ಶಂಕಿತ ISIS ಉಗ್ರ ಸೆರೆ: ಟೆಕಿ ಜುಹೇಬ್‌ ಮುನ್ನಾ ಎನ್‌ಐಎ ಬಲೆಗೆ!

By Kannadaprabha NewsFirst Published Nov 18, 2021, 6:30 AM IST
Highlights

* ಯುವಕರನ್ನು ಐಸಿಸ್‌ಗೆ ಕಳುಹಿಸುತ್ತಿದ್ದ ಆರೋಪ

* ನಗರದ ಶಂಕಿತ ಐಸಿಸ್‌ ಉಗ್ರ ಸೆರೆ

* ನಗರದ ಟೆಕಿ ಜುಹೇಬ್‌ ಮುನ್ನಾ ಎನ್‌ಐಎ ಬಲೆಗೆ

* ಕುಖ್ಯಾತ ಕುರಾನ್‌ ಸರ್ಕಲ್‌ ಗ್ಯಾಂಗಿನ ಸದಸ್ಯ ಈತ

ಬೆಂಗಳೂರು(ನ.18): ಯುವಕರನ್ನು ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಆ್ಯಂಡ್‌ ಸಿರಿಯಾಗೆ (ISIS) ಕಳುಹಿಸುತ್ತಿದ್ದ ‘ಕುರಾನ್‌ ಸರ್ಕಲ್‌’ ಗ್ಯಾಂಗ್‌ನ ಮತ್ತೊಬ್ಬ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ (Software Engineer) ಜುಹೇಬ್‌ ಹಮೀದ್‌ ಶಕೀಲ್‌ ಮುನ್ನಾ ಅಲಿಯಾಸ್‌ ಜುಹೇಬ್‌ ಮುನ್ನಾ (32) ಬಂಧಿತ. ಈತನ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ನೀಡುತ್ತಿಲ್ಲ. ಈತ ಮೂಲತಃ ಬೆಂಗಳೂರು ನಿವಾಸಿಯಾಗಿದ್ದು, ನಗರದ ಸಾಫ್ಟವೇರ್‌ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಎಂಬ ಮಾಹಿತಿ ಮಾತ್ರ ನೀಡುತ್ತಾರೆ. ಆತ ಬೆಂಗಳೂರಿನಲ್ಲಿ ಯಾವ ಪ್ರದೇಶದಲ್ಲಿ ನೆಲೆಸಿದ್ದ ಎಂಬ ಬಗ್ಗೆಯೂ ಮಾಹಿತಿ ಗೌಪ್ಯವಾಗಿರಿಸಲಾಗಿದೆ.

ಮುನ್ನಾ ಪೊಲೀಸರ ವಶಕ್ಕೆ ಬೀಳಲು ಕಾರಣ, ಈತ ಸಕ್ರಿಯವಾಗಿದ್ದ ಕುರಾನ್‌ ಸರ್ಕಲ್‌ನ ಸದಸ್ಯನಾಗಿದ್ದ ಹಾಗೂ ಈ ಹಿಂದೆ ಪೊಲೀಸರ ಬಲೆಗೆ ಬಿದ್ದಿದ್ದ ದಂತ ವೈದ್ಯ ಡಾ.ತೌಕೀರ್‌ ಮೆಹಮೂದ್‌ ವಿಚಾರಣೆ ವೇಳೆ ನೀಡಿದ ಮಾಹಿತಿ. ಐಸಿಸ್‌ (ISIS) ಸಂಘಟನೆಗೆ ಯುವಕರ ನೇಮಕ ಮತ್ತು ದೇಣಿಗೆ ಸಂಗ್ರಹ ಸಂಬಂಧ ಎನ್‌ಐಎ ಅಧಿಕಾರಿಗಳು (NIA Officers) 2020ರ ಸೆಪ್ಟೆಂಬರ್‌ಲ್ಲಿ ಕಾರ್ಯಾಚರಣೆ ನಡೆಸಿ ಫ್ರೇಜರ್‌ ಟೌನ್‌ನ ಅಕ್ಕಿ ವ್ಯಾಪಾರಿ ಇರ್ಫಾನ್‌ ನಾಸೀರ್‌ ಮತ್ತು ತಮಿಳುನಾಡಿನ ಬ್ಯಾಂಕ್‌ ನೌಕರ ಅಹಮ್ಮದ್‌ ಅಬ್ದುಲ್‌ ಖಾದರ್‌, ದಂತ ವೈದ್ಯ ಡಾ.ಮಹಮ್ಮದ್‌ ತೌಕೀರ್‌ ಮೆಹಬೂಬ್‌ ಎಂಬುವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಇವರು ನೀಡಿದ ಮಾಹಿತಿ ಮೇರೆಗೆ ಜುಹೇಬ್‌ನನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಶಂಕಿತರು ಐಸಿಸ್‌ ಭಯೋತ್ಪಾದಕ ಸಂಘಟನೆಯ ನಾಯಕರ ಸಂಪರ್ಕದಲ್ಲಿದ್ದರು. ನಗರದ ಮುಸ್ಲಿಂ ಯುವಕರನ್ನು (Muslim Youths) ಧರ್ಮ ಬೋಧನೆ ನೆಪದಲ್ಲಿ ಸೆಳೆದುಕೊಂಡು ಬಳಿಕ ಅವರಲ್ಲಿ ಮೂಲಭೂತವಾದ ತುಂಬುತ್ತಿದ್ದರು. ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿದ್ದರು. ಬಳಿಕ ಆ ಯುವಕರನ್ನು ಐಸಿಸ್‌ ಸಂಘಟನೆಗೆ ನೇಮಕಾತಿ ಮಾಡುತ್ತಿದ್ದರು. ಬಳಿಕ ಅವರಿಗೆ ವೀಸಾ ಮಾಡಿಸಿ ಸಿರಿಯಾಗೆ ಕಳುಹಿಸುತ್ತಿದ್ದರು. ಇದಕ್ಕೆ ಬೇಕಾದ ಎಲ್ಲ ಆರ್ಥಿಕ ನೆರವು ನೀಡುತ್ತಿದ್ದರು. ಹೀಗೆಯೇ ಈವರೆಗೆ ನಗರದ ಹತ್ತಕ್ಕೂ ಅಧಿಕ ಯುವಕರನ್ನು ಸಿರಿಯಾಗೆ ಕಳುಹಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹೊರವಲಯದಲ್ಲಿ ಕ್ಯಾಂಪ್‌:

ಸೌದಿ ಅರೇಬಿಯಾದಲ್ಲಿ (Saudi Arabia) ನೆಲೆಸಿದ್ದ ಕೆಲ ಶಂಕಿತರು ಕುರಾನ್‌ ಸರ್ಕಲ್‌ ಗ್ಯಾಂಗ್‌ಗೆ ಆರ್ಥಿಕ ನೆರವು ನೀಡುತ್ತಿದ್ದರು. ಯಾರನ್ನು ಸೆಳೆಯಬೇಕು ಎಂಬುದರ ಬಗ್ಗೆಯೂ ಸೂಚನೆ ಕೊಡುತ್ತಿದ್ದರು. ಬೆಂಗಳೂರು ಹೊರ ವಲಯದಲ್ಲಿ ‘ಇಕ್ರಾ ಕ್ಯಾಂಪ್‌’ ನಡೆಸಿ ಉಗ್ರ ಚಟುವಟಿಕೆ ಕುರಿತು ತರಬೇತಿ ನೀಡುತ್ತಿದ್ದರು. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಐಸಿಸ್‌ ಬಲಪಡಿಸುವ ಬಗ್ಗೆಯೂ ಚರ್ಚೆ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಸಿರಿಯಾ ನಂಟು

- ಈ ಹಿಂದೆ ಬಂಧಿತನಾಗಿರುವ ದಂತವೈದ್ಯ ತೌಕೀರ್‌ನಿಂದ ಮುನ್ನಾ ಬಗ್ಗೆ ಮಾಹಿತಿ

- ತೌಕೀರ್‌, ಮುನ್ನಾ, ಇನ್ನಿಬ್ಬರಿಂದ ಯುವಕರ ಬ್ರೇನ್‌ವಾಶ್‌, ಧರ್ಮಬೋಧನೆ

- ಮೂಲಭೂತವಾದಕ್ಕೆ ಪ್ರಚೋದನೆ ನೀಡಿ ಐಸಿಸ್‌ ಸೇರಲು ಸಿರಿಯಾಕ್ಕೆ ರವಾನೆ

- ಈವರೆಗೆ ಬೆಂಗಳೂರಿನ 10ಕ್ಕೂ ಹೆಚ್ಚು ಯುವಕರನ್ನು ಸಿರಿಯಾಕ್ಕೆ ಕಳಿಸಿರುವ ತಂಡ

click me!