* ಭಾರೀ ಮಳೆಗೆ 7.31 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿ
* ಜುಲೈನಿಂದ ನ.16ರವರೆಗಿನ ಬೆಳೆಹಾನಿ ಅಂದಾಜಿಸಿದ ಕೃಷಿ ಇಲಾಖೆ
* ಕಲಬುರಗಿ, ಬೀದರ್, ಬೆಳಗಾವಿಯಲ್ಲಿ ಹೆಚ್ಚು ಹಾನಿ
* ಮಳೆಯಿಂದ ಸಾವಿರಾರು ಕೋಟಿ ರು. ರೈತರಿಗೆ ನಷ್ಟ,
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು, (ನ.18): ಭಾರೀ ಮಳೆಯಿಂದಾಗಿ ರಾಜ್ಯದ ರೈತರು ತತ್ತರಿಸಿದ್ದು ಕೈಗೆ ಬರಬೇಕಿದ್ದ ಫಸಲು ಕಣ್ಣ ಮುಂದೆಯೇ ನೆಲಕಚ್ಚುತ್ತಿದೆ. ಕೃಷಿ ಇಲಾಖೆಯ ಪ್ರಾಥಮಿಕ ಅಂದಾಜಿನ ಪ್ರಕಾರ ಜುಲೈನಿಂದ ನವೆಂಬರ್ 16 ರವರೆಗೂ 7.31 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆ ಹಾನಿಗೊಳಗಾಗಿ ಸಾವಿರಾರು ಕೋಟಿ ರು. ನಷ್ಟಉಂಟಾಗಿದೆ.
ಬೆಳೆ ಹಾನಿ ಬಗ್ಗೆ ಮೊದಲು ಕೃಷಿ ಇಲಾಖೆ ನಷ್ಟದ ಅಂದಾಜಿನ ಬಗ್ಗೆ ಪ್ರಾಥಮಿಕ ವರದಿಯನ್ನು ಕಂದಾಯ ಇಲಾಖೆಗೆ ಶೀಘ್ರದಲ್ಲೇ ಸಲ್ಲಿಸಲಿದ್ದು, ಬಳಿಕ ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ ಹಾನಿಯ ಅಂದಾಜು ಮಾಡಲಿವೆ. ಸೆಪ್ಟೆಂಬರ್‌ನಿಂದ ಅಕ್ಟೋಬರ್ ವರೆಗಿನ ಅಂದಾಜನ್ನು ಲೆಕ್ಕ ಹಾಕಲಾಗಿದೆ. ನವೆಂಬರ್‌ನಲ್ಲಿ ಅಕಾಲಿಕ ಮಳೆ ಮುಂದುವರೆಯುತ್ತಿರುವುದರಿಂದ ಕೃಷಿ ಇಲಾಖೆಯು ಪ್ರಾಥಮಿಕ ಮಾಹಿತಿ ಸಂಗ್ರಹಿಸುತ್ತಿದ್ದು ಕಂದಾಯ ಇಲಾಖೆಗೆ ರವಾನಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
Ballari| ವರುಣನ ಅಬ್ಬರಕ್ಕೆ 760 ಕ್ವಿಂಟಲ್ ಮೆಣಸಿನಕಾಯಿ ಹಾನಿ
ಪ್ರಸ್ತುತ ಜುಲೈನಿಂದ ನ.16ರ ವರೆಗೆ ಮಳೆ ಹಾನಿಯಿಂದ 7.31ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯುಂಟಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಇದರಲ್ಲಿ ಉತ್ತರ ಕರ್ನಾಟಕ ಭಾಗದ 3 ಜಿಲ್ಲೆಯಲ್ಲೇ ಮುಕ್ಕಾಲು ಪಾಲು ಹಾನಿ ಸಂಭವಿಸಿದೆ. ಕಲಬುರಗಿಯಲ್ಲಿ 2,44,223 ಹೆಕ್ಟೇರ್, ಬೀದರ್‌ನಲ್ಲಿ 1,84,649 ಹೆಕ್ಟೇರ್, ಬೆಳಗಾವಿಯಲ್ಲಿ 1,15,661 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿಯಾಗಿದೆ.
ಜುಲೈ ತಿಂಗಳಿನಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ 19 ಜಿಲ್ಲೆಯ 4.08 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದ್ದು, ಕೃಷಿ ಇಲಾಖೆ ಅಂತಿಮ ವರದಿ ಸಿದ್ಧಪಡಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 4926 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಭತ್ತ, ಶಿವಮೊಗ್ಗದ 4016 ಹೆಕ್ಟೇರ್, ರಾಯಚೂರಿನ 1802, ಉತ್ತರ ಕನ್ನಡದ 1652 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಭತ್ತ ಹಾನಿಗೊಳಗಾಗಿದೆ. ಬೆಳಗಾವಿಯಲ್ಲಿ 12194 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಹಾವೇರಿಯ 5032, ಧಾರವಾಡದ 3846 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಮೆಕ್ಕೆಜೋಳಕ್ಕೆ ಹಾನಿಯಾಗಿದೆ.
Uttara Kannada| ಅಕಾಲಿಕ ಮಳೆಗೆ ನೀರುಪಾಲಾದ ಬೆಳೆ, ಕಂಗಾಲಾದ ಅನ್ನದಾತ..!
ಬೆಳಗಾವಿಯ 14598 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಸೋಯಾಬಿನ್, ಕಲಬುರಗಿಯ 7267 ಹೆಕ್ಟೇರ್ ಪ್ರದೇಶದ ಉದ್ದು, 32638 ಹೆಕ್ಟೇರ್‌ನ ತೊಗರಿ, ಬೆಳಗಾವಿಯ 2757 ಹೆಕ್ಟೇರ್‌ನ ಶೇಂಗಾ, 1879 ಹೆಕ್ಟೇರ್‌ನ ಹತ್ತಿ, 62058 ಹೆಕ್ಟೇರ್‌ನ ಕಬ್ಬು ಸೇರಿದಂತೆ ಒಟ್ಟಾರೆ 19 ಜಿಲ್ಲೆಯಲ್ಲಿ 2.50 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿದ್ದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಆಗಸ್ಟ್‌ನಲ್ಲಿ ಬೀದರ್ ಜಿಲ್ಲೆಯಲ್ಲಿ ಹೆಸರು 266 ಹೆಕ್ಟೇರ್, ಉದ್ದು 310, ತೊಗರಿ, 453, ಸೋಯಾ 697 ಹೆಕ್ಟೇರ್ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಬೆಳೆದಿದ್ದ 1692 ಹೆಕ್ಟೇರ್ ಮೆಕ್ಕೆ ಜೋಳಕ್ಕೆ ಮಳೆಯಿಂದ ಹಾನಿ ಉಂಟಾಗಿದೆ.
ಬೀದರ್, ಕಲಬುರಗಿಯಲ್ಲಿ ಸಂಕಷ್ಟ:
ಸೆಪ್ಟೆಂಬರ್ ತಿಂಗಳಿನಲ್ಲಿ ಬೀದರ್ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಬೆಳೆ ಹಾನಿಯಾಗಿ ರೈತರಿಗೆ ಸಂಕಷ್ಟಉಂಟಾಗಿದೆ. ಬೀದರ್ ಜಿಲ್ಲೆಯ 9645 ಹೆಕ್ಟೇರ್ ಪ್ರದೇಶದ ಹೆಸರು, 8210 ಹೆಕ್ಟೇರ್ ಉದ್ದು, 60048 ತೊಗರಿ, 101283 ಸೋಯಾಬೀನ್, 2054 ಹೆಕ್ಟೇರ್ ಕಬ್ಬು ಬೆಳೆ ಹಾನಿಗೊಳಗಾಗಿದೆ. ಇನ್ನೂ, ಕಲಬುರಗಿ ಜಿಲ್ಲೆಯಲ್ಲಿ 3099 ಹೆಕ್ಟೇರ್ ಹೆಸರು, 6145 ಉದ್ದು, 155616 ತೊಗರಿ, 2246 ಸೋಯಾಬೀನ್, 11144 ಕಬ್ಬು, 11201 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಹತ್ತಿ ಸೇರಿದಂತೆ ಈ ಎರಡೂ ಜಿಲ್ಲೆಯಲ್ಲಿ ಒಟ್ಟಾರೆ 3.71 ಲಕ್ಷ ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿಯಾಗಿದೆ.
Chikkamagaluru ಧಾರಾಕಾರ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲು
ಅಕ್ಟೋಬರ್‌ನಲ್ಲಿ ರಾಯಚೂರಿನಲ್ಲಿ 1152 ಹೆಕ್ಟೇರ್ ಭತ್ತ, ಯಾದಗಿರಿಯಲ್ಲಿ 404 ಹೆಕ್ಟೇರ್, ದಾವಣಗೆರೆಯಲ್ಲಿ 238 ಹೆಕ್ಟೇರ್ ಮೆಕ್ಕೆಜೋಳ, ವಿಜಯಪುರದಲ್ಲಿ 51286 ಹೆಕ್ಟೇರ್ ತೊಗರಿ, ಯಾದಗಿರಿಯಲ್ಲಿ ಬೆಳೆದಿದ್ದ 1364 ಹೆಕ್ಟೇರ್ ಪ್ರದೇಶದ ರಾಗಿಗೆ ಹಾನಿಯಾಗಿದೆ. 12 ಜಿಲ್ಲೆಯಲ್ಲಿ ಒಟ್ಟಾರೆ 57914 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿಯಾಗಿದೆ.
15 ದಿನದಲ್ಲಿ 48 ಸಾವಿರ ಹೆಕ್ಟೇರ್‌ಗೆ ಹಾನಿ
ನವೆಂಬರ್ 16 ರವರೆಗೆ 14 ಜಿಲ್ಲೆಯ 48647 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಕೋಲಾರದಲ್ಲಿ ಅತಿ ಹೆಚ್ಚು ಅಂದರೆ 34447 ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ. ರಾಮನಗರ 10371, ಚಾಮರಾಜನಗರ 1566, ಉತ್ತರ ಕನ್ನಡದಲ್ಲಿ 794 ಹೆಕ್ಟೇರ್‌ನಲ್ಲಿದ್ದ ಬೆಳೆಗೆ ಹಾನಿ ಉಂಟಾಗಿದೆ. ಇನ್ನುಳಿದ ಕೆಲ ಜಿಲ್ಲೆಗಳಲ್ಲಿ ಕಡಿಮೆ ಹಾನಿಯಾಗಿದ್ದು ಮಳೆ ಮುಂದುವರೆಯುತ್ತಿರುವುದರಿಂದ ಹಾನಿ ಪ್ರಮಾಣ ಇನ್ನೂ ಹೆಚ್ಚಲಿದೆ.
ತಿಂಗಳು ಬೆಳೆ ಹಾನಿ(ಹೆಕ್ಟೇರ್‌ಗಳಲ್ಲಿ)
ಜುಲೈ 250322
ಆಗಸ್ಟ್ 3421
ಸೆಪ್ಟೆಂಬರ್ 371647
ಅಕ್ಟೋಬರ್ 57914
ನವೆಂಬರ್ 48647
ಒಟ್ಟಾರೆ 731951