ಯೋಗೇಶ್‌ ಗೌಡ ಹ*ತ್ಯೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂ ನೋಟಿಸ್, ಶಿಕ್ಷೆ ತಡೆ ಹಿಡಿದ ಹೈಕೋರ್ಟ್ ವಿರುದ್ಧ ಗರಂ

Published : Oct 01, 2026, 01:45 PM IST
yogesh gowda vinay kulkarni case

ಸಾರಾಂಶ

ಧಾರವಾಡ ಜಿ.ಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ನೀಡಿದ್ದ ಜಾಮೀನು ಮತ್ತು ತಡೆಯಾಜ್ಞೆ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ತಡೆ ನೀಡಿದ್ದಕ್ಕೆ ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿರುವ ನ್ಯಾಯಪೀಠ, ವಿನಯ್ ಕುಲಕರ್ಣಿ ಸೇರಿ ಇತರರಿಗೆ ನೋಟಿಸ್ ಜಾರಿ ಮಾಡಿದೆ.

ನವದೆಹಲಿ: ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್‌ ಗೌಡ ಭೀಕರ ಹ*ತ್ಯೆ ಪ್ರಕರಣದಲ್ಲಿ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ಶಾಕ್ ಎದುರಾಗಿದೆ. ಹೈಕೋರ್ಟ್ ನೀಡಿದ್ದ ಜಾಮೀನು ಮತ್ತು ಜೀವಾವಧಿ ಶಿಕ್ಷೆಯ ತಡೆಯಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್‌‌ ಕ್ರಮದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವಿನಯ್ ಕುಲಕರ್ಣಿ ಸೇರಿದಂತೆ ಇತರ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಕೊ*ಲೆ ಪ್ರಕರಣದಲ್ಲಿ ಶಿಕ್ಷೆಗೆ ತಡೆ ಹೇಗೆ ಸಾಧ್ಯ? – ಸುಪ್ರೀಂ ತೀವ್ರ ತರಾಟೆ

ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಚಂದ್ರಶೇಖರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (CBI) ಹಾಗೂ ಮೃತ ಯೋಗೇಶ್ ಗೌಡ ಸಹೋದರ ಗುರುನಾಥ ಗೌಡ ಅವರು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತು.

ವಿಚಾರಣೆ ವೇಳೆ ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ತೀವ್ರ ಗರಂ ಆದ ಪೀಠವು ಗಂಭೀರವಾದ ಪ್ರಶ್ನೆ ಮಾಡಿದೆ. "ಕೊ*ಲೆಯಂತಹ ತೀವ್ರ ಸ್ವರೂಪದ ಗಂಭೀರ ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ತಡೆಯಾಜ್ಞೆ ನೀಡಲು ಹೇಗೆ ಸಾಧ್ಯ? ಈ ರೀತಿಯಾಗಿ ಎಲ್ಲ ಪ್ರಕರಣಗಳಲ್ಲೂ ತಡೆಯಾಜ್ಞೆ ನೀಡುತ್ತಾ ಹೋದರೆ, ನಾಳೆ ಶಾಸನಸಭೆ ಅಥವಾ ವಿಧಾನಸಭೆಯ ಮಹಡಿಯ ಮೇಲೆ ಕೊ*ಲೆಗಡುಕರು ಹಾಗೂ ದರೋಡೆಕೋರರೇ ತುಂಬಿ ತುಳುಕುತ್ತಾರೆ! ಎಂದು ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿತು.

ಅಲ್ಲದೆ, "ಇಂತಹ ಅತ್ಯಂತ ಗಂಭೀರ ಅಪರಾಧ ಆರೋಪ ಹೊತ್ತಿರುವ ವ್ಯಕ್ತಿಗಳು ಜನಪ್ರತಿನಿಧಿಗಳಾಗಿ ವಿಧಾನಸಭೆಯಲ್ಲಿ ಇರಲು ನಿಜಕ್ಕೂ ಅರ್ಹರೇ? ಇಂಥವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು," ಎಂದು ನ್ಯಾಯಪೀಠ ತೀವ್ರವಾಗಿ ಅಭಿಪ್ರಾಯಪಟ್ಟಿತು.

ಅರ್ಜಿ ವಜಾಕ್ಕೆ ವಕೀಲರ ಯತ್ನ, ಮಣಿಯದ ಸುಪ್ರೀಂ

ವಿಚಾರಣೆ ವೇಳೆ ಶಾಸಕ ವಿನಯ್ ಕುಲಕರ್ಣಿ ಪರ ವಾದ ಮಂಡಿಸಿದ ವಕೀಲರು, ಸಿಬಿಐ ಮತ್ತು ದೂರುದಾರರು ಸಲ್ಲಿಸಿರುವ ಈ ಅರ್ಜಿಗಳನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ಈ ಮನವಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಅರ್ಜಿಗಳನ್ನು ವಜಾಗೊಳಿಸಲು ನಿರಾಕರಿಸಿತು.

ತದನಂತರ, ಕುಲಕರ್ಣಿ ಪರ ವಕೀಲರು ಕನಿಷ್ಠ ಪಕ್ಷ ವಾದ ಮಂಡಿಸಲು ಕಾಲಾವಕಾಶ ನೀಡಿ ಸಂಪೂರ್ಣ ವಿಚಾರಣೆ ನಡೆಸುವಂತೆ ಕೋರಿದರು. ಈ ಮನವಿಗೆ ಒಪ್ಪಿಗೆ ಸೂಚಿಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠವು, ವಿನಯ್ ಕುಲಕರ್ಣಿ ಹಾಗೂ ಪ್ರಕರಣದ ಇತರ ಆರೋಪಿಗಳಿಗೆ ಅಧಿಕೃತ ನೋಟಿಸ್ ಜಾರಿಗೊಳಿಸಿ ಉತ್ತರ ನೀಡುವಂತೆ ಸೂಚಿಸಿತು.

ಅಕ್ಟೋಬರ್ 9ಕ್ಕೆ ವಿಚಾರಣೆ ಮುಂದೂಡಿಕೆ

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಿದೆ. ಉನ್ನತ ನ್ಯಾಯಾಲಯವು ಪ್ರಸ್ತುತ ತೋರಿರುವ ಕಟ್ಟುನಿಟ್ಟಿನ ಧೋರಣೆಯಿಂದಾಗಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಮುಂದಿನ ದಿನಗಳಲ್ಲಿ ಜಾಮೀನು ರದ್ದಾಗುವ ಹಾಗೂ ಶಿಕ್ಷೆ ಮರುಸ್ಥಾಪನೆಯಾಗುವ ಭೀತಿ ಎದುರಾಗಿದ್ದು, ಅವರ ರಾಜಕೀಯ ಮತ್ತು ಕಾನೂನು ಭವಿಷ್ಯ ತೂಗು ಉಯ್ಯಾಲೆಯಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೇಷನ್ ಕಾರ್ಡ್ ಇ-ಕೆವೈಸಿ ಮೊಬೈಲ್‌ನಲ್ಲೇ ಅಪ್ಡೇಟ್ ಮಾಡಲು 'ಅನ್ನ ಸೇವೆ' ಆ್ಯಪ್ ಬಿಡುಗಡೆ ಮಾಡಿದ ಸರ್ಕಾರ!
113 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಮಾಡಿದ ನಟಿ ರನ್ಯಾ ರಾವ್; ಸ್ಮಗ್ಲರ್ ಗ್ಯಾಂಗ್‌ಗೆ ₹244 ಕೋಟಿ ದಂಡ!