'ನನ್ನ ಫೋಟೋಗೆ ಹಾರ ಹಾಕುವುದಕ್ಕೆ ಮುಂಚೆಯೇ ಪೆರಿಫೆರಲ್‌ ಆರಂಭಿಸಿ' ಡಿಸಿಎಂ ಎದುರು ರೈತರು ಕಣ್ಣೀರು!

By Ravi Janekal  |  First Published Aug 1, 2023, 7:41 AM IST

 ‘ನನ್ನ ಫೋಟೋಗೆ ಹಾರ ಹಾಕುವುದಕ್ಕೆ ಮೊದಲು ಭೂಸ್ವಾಧೀನ ಮಾಡಿಕೊಂಡು ನಮಗೆ ಪರಿಹಾರ ನೀಡಿ, ಯೋಜನೆ ಆರಂಭಿಸಿ, ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಬಂದ ಹಣದಿಂದ ನಿರ್ಮಿಸಿದ ಮನೆಯಲ್ಲಿ ವಾಸ ಮಾಡದ ಪರಿಸ್ಥಿತಿ ಎದುರಾಗಿದೆ, ಪೆರಿಫೆರಲ್‌ ರಿಂಗ್‌ ರಸ್ತೆ ಮಾರ್ಗ ಬದಲಿಸುವ ಮೂಲಕ ನಮಗೆ ನೆಮ್ಮದಿ ನೀಡಬೇಕು’ ಭೂಮಿ ಕಳೆದುಕೊಂಡ ನಿವೃತ್ತ ಯೋಧರೊಬ್ಬರು ನೋವಿನ ಮಾತು


ಬೆಂಗಳೂರು (ಆ.1) :  ‘ನನ್ನ ಫೋಟೋಗೆ ಹಾರ ಹಾಕುವುದಕ್ಕೆ ಮೊದಲು ಭೂಸ್ವಾಧೀನ ಮಾಡಿಕೊಂಡು ನಮಗೆ ಪರಿಹಾರ ನೀಡಿ, ಯೋಜನೆ ಆರಂಭಿಸಿ, ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಬಂದ ಹಣದಿಂದ ನಿರ್ಮಿಸಿದ ಮನೆಯಲ್ಲಿ ವಾಸ ಮಾಡದ ಪರಿಸ್ಥಿತಿ ಎದುರಾಗಿದೆ, ಪೆರಿಫೆರಲ್‌ ರಿಂಗ್‌ ರಸ್ತೆ ಮಾರ್ಗ ಬದಲಿಸುವ ಮೂಲಕ ನಮಗೆ ನೆಮ್ಮದಿ ನೀಡಬೇಕು’

-ಇವು ಪೆರಿಫೆರಲ್‌ ರಿಂಗ್‌ ರಸ್ತೆ ಯೋಜನೆಗೆ ಭೂಮಿ ನೀಡುತ್ತಿರುವ ರೈತರು/ಭೂಮಾಲಿಕರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌(DK Shivakumar) ಸೋಮವಾರ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಭೂಮಾಲಿಕರು ಯೋಜನೆಯಿಂದ ತಮಗಾಗುತ್ತಿರುವ ಸಮಸ್ಯೆಗಳು, ತಮ್ಮ ಬೇಡಿಕೆಗಳನ್ನು ಹೇಳಿಕೊಂಡರು.

Tap to resize

Latest Videos

ಪೆರಿಫೆರಲ್‌ ರಸ್ತೆ ಯೋಜನೆ ರದ್ದುಗೊಳಿಸಲು ಸಾಧ್ಯವಿಲ್ಲ: ಡಿಸಿಎಂ ಡಿಕೆ ಶಿವಕುಮಾರ

ಶಿವಕುಮಾರ್‌ ಎಂಬುವವರು ಮಾತನಾಡಿ, 2007ರಲ್ಲಿ ಪೆರಿಫೆರಲ್‌ ರಿಂಗ್‌ರಸ್ತೆ ಅಂತಿಮ ನೋಟಿಫಿಕೇಷನ್‌ ಆದ ನಂತರ 5 ಬಾರಿ ಮಾರ್ಗ ಬದಲಿಸಲಾಗಿದೆ. ಪ್ರತಿ ಬಾರಿ ಅಲೈನ್‌ಮೆಂಟ್‌ ಮಾಡಿದಾಗಲೂ ಅಲ್ಲಿ ರಾಜಕಾರಣಿಗಳು, ಪ್ರಭಾವಿಗಳ ಭೂಮಿಯು ಯೋಜನೆಗಾಗಿ ಸ್ವಾಧೀನವಾಗುತ್ತದೆ ಎಂದು ಹೇಳಲಾಗುತ್ತಿತ್ತು. ಅದಕ್ಕಾಗಿ ಪದೇಪದೆ ಅಲೈನ್‌ಮೆಂಟ್‌ ಬದಲಿಸಲಾಗಿದೆ. ಅದೇ ರೀತಿ ಈಗ ರೈತರ ಭೂಮಿ ಉಳಿಸಲು ಮಾರ್ಗ ಬದಲಿಸಿ ಎಂದು ಆಗ್ರಹಿಸಿದರು.

ದೇಶದ ನೆಮ್ಮದಿಗಾಗಿ ದುಡಿದೆ, ನನಗೇ ನೆಮ್ಮದಿಯಿಲ್ಲ:

ಭೂಮಾಲಿಕರೊಬ್ಬರು ಮಾತನಾಡಿ, 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಿಂದ ಬಂದ ದುಡ್ಡಿನಲ್ಲಿ 2004ರಲ್ಲಿ ನಾಗೇನಹಳ್ಳಿಯಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಿದೆ. ಆದರೆ, ಮನೆ ಗೃಹ ಪ್ರವೇಶ ಮಾಡಿದ ನಂತರ ಪೆರಿಫೆರಲ್‌ ರಿಂಗ್‌ರಸ್ತೆ ನೋಟಿಫಿಕೇಷನ್‌ ಮಾಡಲಾಯಿತು. ಆಗ ಬಿಡಿಎ ಅಧಿಕಾರಿಗಳು ಬದಲಿ ನಿವೇಶನ ನೀಡುತ್ತೇವೆ ಎಂದು ಹೇಳಿದರು. ಆದರೆ, ಈವರೆಗೆ ನನಗೆ ಬದಲಿ ನಿವೇಶನ ದೊರೆತಿಲ್ಲ. ದೇಶಕ್ಕಾಗಿ ದುಡಿದ ನನಗೆ ಈಗ ನಿದ್ದೆಯಿಲ್ಲದೆ, ನೆಮ್ಮದಿಯಿಲ್ಲದೆ ಮನೆಯಲ್ಲಿ ವಾಸಿಸುವ ಪರಿಸ್ಥಿತಿ ಬಂದೊದಗಿದೆ ಎಂದು ಅಳಲು ತೋಡಿಕೊಂಡರು.

ಸಾಯೋಕು ಮುಂಚೆ ಯೋಜನೆ ಮಾಡಿ:

ದೇವರಸೇಗೌಡ ಎಂಬುವವರು ಮಾತನಾಡಿ, ಕಳೆದ 18 ವರ್ಷಗಳಿಂದ ಯೋಜನೆ ಬಗ್ಗೆ ಮಾತನಾಡುತ್ತಿದ್ದೇವೆ. ಆದರೂ ಇನ್ನೂ ಯೋಜನೆ ಜಾರಿಯ ಬಗ್ಗೆ ನಿಶ್ಚಿತತೆಯಿಲ್ಲ. ನನಗೀಗ 75 ವರ್ಷ ವಯಸ್ಸಾಗಿದೆ. ಯೋಜನೆಯಿಂದ ಕಳೆದುಕೊಳ್ಳುವ ಭೂಮಿಗೆ ಪರಿಹಾರ ಪಡೆಯಬೇಕೆನ್ನುವುದು ನನ್ನ ಆಸೆ. ಸರ್ಕಾರ ಯಾವುದೇ ನಿರ್ಧಾರಕ್ಕೆ ಬಂದರೂ ನನಗೆ ಒಪ್ಪಿಗೆಯಿದೆ. ಆದರೆ, ನನ್ನ ಮಕ್ಕಳು ನನ್ನ ಫೋಟೋಗೆ ಹಾರ ಹಾಕುವುದಕ್ಕೆ ಮುನ್ನ ಸಮಸ್ಯೆ ಬಗೆಹರಿಸಿ ಎಂದರು.

ನೀವೇ ನಮ್ಮ ಪರ ಮೇಲ್ಮನವಿ ಸಲ್ಲಿಸಿ:

ನಾವು ರೈತರು. ನಮ್ಮ ಬಳಿ ಹಣವಿಲ್ಲ. ನೀವು ನಮ್ಮ ನಾಯಕರು. ಹೀಗಾಗಿ ನೀವೇ ನಮ್ಮ ಪರವಾಗಿ ಸುಪ್ರೀಂಕೋರ್ಚ್‌ನಲ್ಲಿ ಮೇಲ್ಮನವಿ ಸಲ್ಲಿಸಿ ರೈತರಿಗೆ ನ್ಯಾಯ ದೊರಕುವಂತೆ ಮಾಡಿ. ಇಲ್ಲದಿದ್ದರೆ ಯೋಜನಾ ವೆಚ್ಚ ಹೆಚ್ಚಿಸಿ ರೈತರಿಗೆ ಹೆಚ್ಚಿನ ಪರಿಹಾರ ನೀಡುವುದಕ್ಕೆ ಕ್ರಮ ಕೈಗೊಳ್ಳಿ ಎಂದು ಭೂಮಾಲಿಕರೊಬ್ಬರು ಡಿ.ಕೆ.ಶಿವಕುಮಾರ್‌ ಅವರನ್ನು ಮನವಿ ಮಾಡಿಕೊಂಡರು.

ವಿಷ ಕೊಡಿ ಸಾಯುತ್ತೇವೆ:

ನಮ್ಮ ಕುಟುಂಬ ತಲೆತಲಾಂತರದಿಂದ ಕೃಷಿ ಮಾಡುತ್ತಾ ಬಂದಿದೆ. ಆದರೀಗ ಪಿಆರ್‌ಆರ್‌ಗಾಗಿ ನಮ್ಮ ಭೂಮಿಯನ್ನು ಬಿಟ್ಟುಕೊಡಬೇಕು ಎಂದು ಹೇಳುತ್ತಿದ್ದಾರೆ. ಆದರೆ ಅದಕ್ಕೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡುತ್ತಿಲ್ಲ. ನಮಗೆ ವಿಷ ಕೊಡಿ, ಕುಡಿದು ಸಾಯುತ್ತೇವೆ. ವ್ಯವಸಾಯ ಮನೆ ಮಂದಿಯೆಲ್ಲ ಸಾಯ ಎಂಬ ಮಾತಿದೆ. ಸರ್ಕಾರದ ನಿರ್ಧಾರದಿಂದ ಅದೇ ರೀತಿಯಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ರೈತ ಅನಂತಕುಮಾರ್‌ ಹೇಳಿದರು

ತಹಸೀಲ್ದಾರ್‌ ವಿರುದ್ಧ ಕ್ರಮ?

ಚನ್ನಸಂದ್ರದ ಕಿರಣ್‌ ಎಂಬುವವರು ಮಾತನಾಡಿ, ಚನ್ನಸಂದ್ರದಲ್ಲಿ ಪಿಆರ್‌ಆರ್‌ ಮಾರ್ಗವನ್ನು ಬೇಕೆಂದೇ ಬದಲಿಸಲಾಗಿದೆ. ಮಾರ್ಗ ಸಾಗುವ ಪಕ್ಕದಲ್ಲಿ 32 ಎಕರೆ ಸರ್ಕಾರಿ ಭೂಮಿಯಿದೆ. ಅದನ್ನು ಹೊರತುಪಡಿಸಿ ಖಾಸಗಿ ಭೂಮಿ ಸ್ವಾಧೀನಕ್ಕೆ ಮುಂದಾಗಿದೆ. ಅಲ್ಲದೆ, ಕಳೆದ ನಾಲ್ಕೈದು ವರ್ಷಗಳ ಹಿಂದೆ ಭೂಸ್ವಾಧೀನವಾಗಲಿರುವ ಜಾಗದಲ್ಲಿ ಭೂ ಪರಿವರ್ತನೆ ಮಾಡಿಕೊಡಲಾಗಿದ್ದು, ಅಲ್ಲಿ ಬಡಾವಣೆ ನಿರ್ಮಿಸಲು ಅನುಮತಿಸಲಾಗಿದೆ. ಇದಕ್ಕೆ ಪರಿಹಾರ ಕೊಡಿ ಎಂದು ಕೋರಿದರು.

ಅದಕ್ಕೆ ಡಿ.ಕೆ.ಶಿವಕುಮಾರ್‌ ಅವರು, ಭೂ ಪರಿವರ್ತನೆ ಮಾಡಿಕೊಟ್ಟತಹಸೀಲ್ದಾರ್‌ ಸೇರಿದಂತೆ ಇತರ ಅಧಿಕಾರಿಗಳ ವಿವರ ನೀಡಿ, ಕೂಡಲೇ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಮೇವು ಸರಬರಾಜು ಮಾಡಿ ಸಭೆಯಲ್ಲಿ ಡಾ ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡುತ್ತಿರುವ ರೈತರೊಬ್ಬರು ಮಾತನಾಡಿ, ಡಾಶಿವರಾಮ ಕಾರಂತ ಬಡಾವಣೆ ನಿರ್ಮಾಣದಿಂದಾಗಿ ನೂರಾರು ಜಾನುವಾರುಗಳಿಗೆ ಆಶ್ರಯವಿಲ್ಲದಂತಾಗಿದೆ. ಅಲ್ಲದೆ, ಜಾನುವಾರುಗಳಿಗೆ ಮೇವು ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರದ ವತಿಯಿಂದ ಅಲ್ಲಿನ ಜಾನುವಾರುಗಳಿಗೆ ಮೇವು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

Brand Bengaluru ವಿರುದ್ಧ ಬೀದಿಗಿಳಿದ ವ್ಯಾಪಾರಿಗಳು; ಸೌಟು, ತಟ್ಟೆಹಿಡಿದು ಪ್ರತಿಭಟನೆ

ನನ್ನ ಜಮೀನೂ ಸ್ವಾಧೀನ ಆಗುತ್ತಿದೆ: ಶಿವಕುಮಾರ್‌

ಪಿಆರ್‌ಆರ್‌ ನಿರ್ಮಾಣವಾಗುವ ಜಾಗದಲ್ಲಿ ನನ್ನ ಭೂಮಿಯೂ ಇದೆ. ಅದನ್ನೂ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಆದರೆ, ಯೋಜನೆಗಾಗಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ತಲೆಬಾಗಲೇಬೇಕು. ರೈತರು, ಭೂಮಾಲಿಕರ ಕಷ್ಟನನಗೆ ಅರಿವಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

click me!