ನಮ್ಮ ಕ್ಲಿನಿ​ಕ್‌​ನಲ್ಲಿ ಎಲ್ಲರಿಗೂ ಶುಗರ್‌ ಟೆಸ್ಟ್‌: ಸಚಿವ ಸುಧಾಕರ್‌

By Govindaraj SFirst Published Nov 29, 2022, 2:40 AM IST
Highlights

ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ನಮ್ಮ ಕ್ಲಿನಿಕ್‌ಗಳ ಮೂಲಕ 30 ವರ್ಷ ಮೇಲ್ಪಟ್ಟಪ್ರತಿ ವ್ಯಕ್ತಿಗೂ ಮಧುಮೇಹದ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. 

ಬೆಂಗಳೂರು (ನ.29): ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ನಮ್ಮ ಕ್ಲಿನಿಕ್‌ಗಳ ಮೂಲಕ 30 ವರ್ಷ ಮೇಲ್ಪಟ್ಟಪ್ರತಿ ವ್ಯಕ್ತಿಗೂ ಮಧುಮೇಹದ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು. ಮುಂದಿನ 18 ತಿಂಗಳಲ್ಲಿ ರಾಜ್ಯದ ಶೇ.100ರಷ್ಟು ಜನರಿಗೆ ಆರೋಗ್ಯ ತಪಾಸಣೆ ಗುರಿ ಹೊಂದ​ಲಾ​ಗಿದೆ ಎಂದೂ ಹೇಳಿ​ದ​ರು. ಸೆಂಟ್‌ಜಾನ್ಸ್‌ ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ ನಡೆದ ಆರೋಗ್ಯ ಸಿಟಿ ಸಮ್ಮಿಟ್‌ನಲ್ಲಿ ಮಾತನಾಡಿದ ಅವರು, ‘ಅಸಾಂಕ್ರಾಮಿಕ ರೋಗಗಳ ನಿರ್ವಹಣೆಗೆ ನಗರಗಳಲ್ಲಿ 438 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲಾಗುತ್ತಿದೆ. 

ಮಧುಮೇಹ ಪ್ರಮುಖ ಅಸಾಂಕ್ರಾಮಿಕ ಕಾಯಿಲೆಯಾಗಿದ್ದು, ಶೇ.75ರಷ್ಟುಜನಕ್ಕೆ ಮಧುಮೇಹ ಇರುವುದೇ ತಿಳಿದಿಲ್ಲ, ಚಿಕಿತ್ಸೆಯನ್ನು ಪಡೆಯುತ್ತಿಲ್ಲ. ಹೀಗಾಗಿ, ನಮ್ಮ ಕ್ಲಿನಿಕ್‌ಗಳ ಮೂಲಕ 30 ವರ್ಷ ವಯಸ್ಸು ಮೇಲ್ಪಟ್ಟ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಮಧುಮೇಹ ಪತ್ತೆ ಮಾಡಲಾಗುವುದು’ ಎಂದರು. ‘ಗ್ರಾಮೀಣ ಮತ್ತು ನಗರ ಭಾಗದಲ್ಲಿ 6,500 ಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ. ಇವುಗಳ ಮೂಲಕ ಕೂಡ ಮಧುಮೇಹ ತಪಾಸಣೆ ಮಾಡಲಾಗುವುದು. 200 ಕ್ಕೂ ಅಧಿಕ ನಮ್ಮ ಕ್ಲಿನಿಕ್‌ ಸಿದ್ಧವಾಗಿದ್ದು, ತಿಂಗಳಾಂತ್ಯದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ನಗರದಲ್ಲಿ 100 ಕ್ಲಿನಿಕ್‌ ಉದ್ಘಾಟಿಸಲಾಗುವುದು. 

Chikkaballapur: ಎತ್ತಿನಹೊಳೆ ಯೋಜನೆಗೆ 23 ಸಾವಿರ ಕೋಟಿ: ಸಚಿವ ಸುಧಾಕರ್‌

ಕೊಳೆಗೇರಿ, ಬಡ ಜನರು ವಾಸಿಸುವ ಪ್ರದೇಶಗಳಲ್ಲಿ ಇಂತಹ ಕ್ಲಿನಿಕ್‌ ಆರಂಭಿಸಿ ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ’ ಎಂದು ತಿಳಿಸಿದರು. ನರ್ಸಿಂಗ್‌ ಕಾಲೇ​ಜು​ಗ​ಳ ಮೇಲೆ ಸರ್ಕಾರ ಕಣ್ಣು: ನಮ್ಮ ಸರ್ಕಾರದಿಂದ ಒಂದೇ ಒಂದು ನರ್ಸಿಂಗ್‌- ಜಿಎನ್‌ಎಮ್‌ (ಜನರಲ್‌ ನರ್ಸಿಂಗ್‌) ಸಂಸ್ಥೆಗೆ ಪರವಾನಗಿ ನೀಡಿಲ್ಲ. ಹಿಂದಿನ ಸರ್ಕಾರದಲ್ಲಿ ಯಾವುದೇ ಮೂಲಸೌಕರ್ಯವನ್ನು ಪರಿಶೀಲಿಸದೆ ಕೆಲ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ಸದ್ಯ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಸುಮಾರು 850 ನರ್ಸಿಂಗ್‌ ಕಾಲೇಜುಗಳಿವೆ. ಸರ್ಕಾರದಿಂದ ಒಂದು ಸಮಿತಿ ರಚಿಸಿ ಈ ಎಲ್ಲಾ ಸಂಸ್ಥೆಗಳಲ್ಲಿ ಪರಿಶೀಲನೆ ನಡೆಸಲು ಉದ್ದೇಶಿಸಲಾಗಿದೆ. ಆ ಸಮಿತಿಯಿಂದ ವರದಿ ಪಡೆದು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳಿ: ಆರೋಗ್ಯವನ್ನು ಕಾಪಾಡಿಕೊಳ್ಳಲು ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಸಲಹೆ ನೀಡಿದರು. ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ ನಡೆದ ವಿವಿಧ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 60 ವರ್ಷ ಮೇಲ್ಪಟ್ಟಎಲ್ಲಾ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮಾಡಿ, ನ್ಯೂನ್ಯತೆ ಇದ್ದರೆ ಚಿಕಿತ್ಸೆ ನೀಡಲಾಗುವುದು. ಸರ್ಕಾರ ಆರೋಗ್ಯ ಕರ್ನಾಟಕ ಮಾಡುವ ಎಡೆಗೆ ನಡೆಯುತ್ತಿದೆ ಎಂದರು. ಕರ್ನಾಟಕ ರಾಜ್ಯವು ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. 

ಆರೋಗ್ಯ ವೃತ್ತಿಪರರ ನೋಂದಣಿ, ದೇಶಕ್ಕೇ ಕರ್ನಾಟಕ ಪ್ರಥಮ: ಸಚಿವ ಸುಧಾಕರ್‌

ದೇಶದ ಉತ್ತಮ ಆರೋಗ್ಯ ನಗರ ಬೆಂಗಳೂರು ಎಂದು ಘೋಷಣೆಯಾಗಿದೆ. ರಾಜ್ಯದಲ್ಲಿ ಆರಂಭಿಸಿದ ಇ- ಮನಸ್‌ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಮಾದರಿಯಾಗಿಸಿಕೊಂಡು ಹೊಸ ಕಾರ್ಯಕ್ರಮ ಆರಂಭಿಸಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ರೋಗಗಳಾದ ಕಾಲರ, ದಡಾರ ಮುಂತಾದ ರೋಗಗಳಿಗೆ ನಮ್ಮಲ್ಲಿ ಚಿಕಿತ್ಸೆ ಇದೆ. ಅಸಾಂಕ್ರಮಿಕ ರೋಗಗಳಾದ ಸಕ್ಕರೆ ಕಾಯಿಲೆ, ರಕ್ತದೊತ್ತಡ ಗಳನ್ನು ನಿಯಂತ್ರಿಸಲು 6500 ಸಬ್‌ ಸೆಂಟರ್‌ಗಳನ್ನು ಹೆಲ್ತ್‌ ಸೆಂಟರ್‌ಗಳಾಗಿ ಮೆಲ್ದರ್ಜೆಗೆ ಏರಿಸಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಚಿಕಿತ್ಸೆ ನೀಡಲು ಕಷ್ಟವಾದಾಗ ಗುಣಮಟ್ಟದ ಚಿಕಿತ್ಸೆ ಕಟ್ಟಕಡೆಯ ವ್ಯಕ್ತಿಗೂ ಸಿಗಲಿ ಎಂಬ ಕಾರಣಕ್ಕೆ ದೇಶದಲ್ಲೇ ಮೊದಲು ಆರಂಭಿಸಿದ್ದ ಟೆಲಿ ಐಸಿಯು ಇಂದು ದೇಶಕ್ಕೆ ಮಾದರಿಯಾಗಿದೆ ಎಂದರು.

click me!