ಕರ್ನಾಟಕ-ರೈಲು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ-ರೈಡ್) ಬೆಂಗಳೂರು ಉಪನಗರ ರೈಲ್ವೆ ಯೋಜನೆಯ 2ನೇ ಹಂತದ ‘ಕನಕ ಮಾರ್ಗ’ ಕಾಮಗಾರಿಗೆ ಟೆಂಡರ್ ಕರೆದಿದೆ.
ಬೆಂಗಳೂರು (ಜ.31) : ಕರ್ನಾಟಕ-ರೈಲು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ-ರೈಡ್) ಬೆಂಗಳೂರು ಉಪನಗರ ರೈಲ್ವೆ ಯೋಜನೆಯ 2ನೇ ಹಂತದ ‘ಕನಕ ಮಾರ್ಗ’ ಕಾಮಗಾರಿಗೆ ಟೆಂಡರ್ ಕರೆದಿದೆ.
ಒಟ್ಟಾರೆ 148 ಕಿಮೀ ಉದ್ದದ .15,767 ಕೋಟಿ ಮೊತ್ತದ ಉಪನಗರ ರೈಲ್ವೆ ಯೋಜನೆ(Suburban Railway Project) ಇದಾಗಿದೆ. ಈ ಯೋಜನೆಯಲ್ಲಿ ಇದೀಗ 4ನೇ ಕಾರಿಡಾರ್ 46.8 ಕಿ.ಮೀ. ಉದ್ದದ ಯಲಹಂಕ ಮೂಲಕ ಹೀಲಲಿಗೆ-ರಾಜನಕುಂಟೆ ನಡುವಿನ ಕನಕ ಮಾರ್ಗದ ಸಿವಿಲ್ ಕಾಮಗಾರಿಯನ್ನು ಈ ಟೆಂಡರ್ ಒಳಗೊಂಡಿದೆ. ಕೆ-ರೈಡ್ ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಟೆಂಡರ್ ಪ್ರಕಟಿಸಿದ್ದು, ಏ.27 ಟೆಂಡರ್‌ಗೆ ಬಿಡ್ ಸಲ್ಲಿಸಲು ಕೊನೆಯ ದಿನ ಎಂದು ಸಂಸ್ಥೆ ತಿಳಿಸಿದೆ.
Namma Metro: ಮೆಟ್ರೋ ನಿಲ್ದಾಣಕ್ಕೆ 6 ನಿಮಿಷದಲ್ಲಿ ತಲುಪಲು ಫೀಡರ್ ಸಾರಿಗೆ ವ್ಯವಸ್ಥೆ
ಈ ಮಾರ್ಗ 19 ಸಂಪರ್ಕ ನಿಲ್ದಾಣ ಹೊಂದಿದೆ. ರಾಜನಕುಂಟೆ, ಮುದ್ದೇನಹಳ್ಳಿ, ಯಲಹಂಕ, ಜಕ್ಕೂರು, ಆರ್‌ಕೆ ಹೆಗಡೆ ನಗರ, ತಣ್ಣೀಸಂದ್ರ, ಹೆಣ್ಣೂರು, ಹೊರಮಾವು, ಚನ್ನಸಂದ್ರ, ಬೆನ್ನಿಗಾನಹಳ್ಳಿ, ಕಗ್ಗದಾಸಪುರ, ಮಾರತ್ತಹಳ್ಳಿ, ಬೆಳ್ಳಂದೂರು ರಸ್ತೆ, ಕಾರ್ಮೆಲರಾಂ, ಅಂಬೇಡ್ಕರ್ ನಗರ, ಹೊಸೂರು, ಸಿಂಗಾರ ಅಗ್ರಹಾರ, ಬೊಮ್ಮಸಂದ್ರ ಹಾಗೂ ಹೀಲಲಿಗೆ ಸೇರಿವೆ.
ಟೆಂಡರ್ ಪಡೆವ ಸಂಸ್ಥೆ, ಪ್ರಮುಖ ಜಂಕ್ಷನ್, ನಿಲ್ದಾಣಗಳ ಕಟ್ಟಡ, ಸರ್ವಿಸ್ ರಸ್ತೆ, ಒಳಚರಂಡಿ ವ್ಯವಸ್ಥೆಗಳ ನಿರ್ಮಾಣ ಈ ಕಾಮಗಾರಿಯಲ್ಲಿ ಕೈಗೊಳ್ಳಬೇಕಿದೆ. ಜತೆಗೆ ರಸ್ತೆ ಅಗಲೀಕರಣ, ಎಲಿವೆಟಿಡ್ ಕಾರಿಡಾರ್ ಕೂಡ ಸೇರಿದೆ. ಟೆಂಡರ್ ಸಲ್ಲಿಸುವ ಸಂಸ್ಥೆ ಇವುಗಳ ವಿನ್ಯಾಸ, ಗ್ರಾಫಿಕ್‌ಗಳನ್ನು ಸಲ್ಲಿಸಬೇಕಿದೆ.
ಯಲಹಂಕದಲ್ಲಿ ಕನಕ ಹಾಗೂ ಮಲ್ಲಿಗೆಯ 2 ಕಿ.ಮೀ. ಕಾಮನ್ ಕಾರಿಡಾರ್ ಹಾದುಹೋಗಲಿದೆ. ಅಲ್ಲದೆ, ಮೆಟ್ರೋದ ಹಂತ 1, 2ರಲ್ಲಿ ಬೆನ್ನಿಗಾನಹಳ್ಳಿ ಬಳಿ ಸುಮಾರು 650 ಮೀ. ಉದ್ದ ಸಬ್‌ಅರ್ಬನ್ ರೈಲು ಹಾಗೂ ಮೆಟ್ರೋ ಸಾಮಾನ್ಯ ಕಾರಿಡಾರ್ ಹಂಚಿಕೊಳ್ಳಲಿವೆ. ಜತೆಗೆ ಕೆ.ಆರ್.ಪುರಂ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೆಟ್ರೋ ಮಾರ್ಗದಲ್ಲಿ ಒಂದೇ ಪಿಲ್ಲರ್‌ನ 18-20 ಮೀ. ಎತ್ತರದಲ್ಲಿ ಸಬ್‌ಅರ್ಬನ್ ರೈಲು ಹಾದು ಹೋಗಲಿದೆ. ಇವೆರಡಕ್ಕೂ ಒಂದೇ ಕಾಮಗಾರಿ ಆಗುವುದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು .300 ಕೋಟಿ ಉಳಿತಾಯವಾಗಲಿದೆ.
ಈಗಾಗಲೇ ಮಲ್ಲಿಗೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ಚಿಕ್ಕಬಾಣಾವರ (25.01 ಕಿ.ಮೀ.) ನಡುವಿನ ಒಂದು ಮಾರ್ಗಕ್ಕೆ ಟೆಂಡರ್ ನೀಡಲಾಗಿದೆ. ಎಲ್ ಆ್ಯಂಡ್ ಟಿ ಸಂಸ್ಥೆಗೆ ಭೂಮಿ ಹಸ್ತಾಂತರಿಸುವ ವಿಚಾರ ವಿಳಂಬವಾದ ಹಿನ್ನೆಲೆಯಲ್ಲಿ ಕಾಮಗಾರಿಯೂ ವಿಳಂಬವಾಗಿ ಆರಂಭವಾಗಿದೆ. ಡಿಸೆಂಬರ್‌ನಲ್ಲಷ್ಟೇ ನೈಋುತ್ಯ ರೈಲ್ವೆಯು ಕೆ-ರೈಡ್‌ಗೆ 157 ಎಕರೆ ಭೂಮಿಯನ್ನು ಹಸ್ತಾಂತರಿಸಿದೆ. ಎಕರೆಗೆ .1ನಂತೆ 35 ವರ್ಷಕ್ಕೆ ಭೂಮಿಯನ್ನು ಗುತ್ತಿಗೆಗೆ ನೀಡಲಾಗಿದೆ. ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಉಳಿದ ಎರಡು ಕಾರಿಡಾರ್‌ಗಳಿಗೆ ಇನ್ನಷ್ಟೇ ಟೆಂಡರ್ ಕರೆಯಬೇಕಿದೆ.
Namma Metro ಪಿಲ್ಲರ್ ದುರಂತ: ಮೆಟ್ರೋ ಎಂಡಿ ಅಜುಂ ಪರ್ವೇಜ್‌ಗೆ ಪೊಲೀಸರ ಗ್ರಿಲ್
ಮಲ್ಲಿಗೆ ಮಾರ್ಗದ ಕೆಎಸ್‌ಆರ್ ಬೆಂಗಳೂರು-ದೇವನಹಳ್ಳಿ ಮತ್ತು ಪಾರಿಜಾತ ಮಾರ್ಗ ಕೆಂಗೇರಿ-ಕಂಟೋನ್ಮೆಂಟ್-ವೈಟ್‌ಫೀಲ್ಡ್‌ನ ಉಪನಗರ ರೈಲ್ವೇ ಯೋಜನೆಯನ್ನು 2026ರಲ್ಲಿ ಮುಕ್ತಾಯಗೊಳಿಸಬೇಕಿದೆ. ಆದರೆ, ಭೂಮಿ ಹಸ್ತಾಂತರ, ಟೆಂಡರ್ ಸೇರಿ ಹಲವು ಪ್ರಕ್ರಿಯೆಗಳು ವಿಳಂಬವಾಗಿ ಆಗುತ್ತಿರುವ ಕಾರಣ ಯೋಜನೆ ವಿಳಂಬವಾಗಬಹುದು ಎನ್ನಲಾಗಿದೆ.