ಬೆಂಗಳೂರು (ಜ.31) : ಸಮೂಹ ಸಾರಿಗೆ ಬಳಕೆ ಹೆಚ್ಚಿಸುವ ಉದ್ದೇಶದಿಂದ ರೂಪಿಸಲಾದ ‘ಸಂಚಾರ ಆಧಾರಿತ ಅಭಿವೃದ್ಧಿ’ (ಟಿಒಡಿ) ನೀತಿಯನ್ನು ಬೆಂಗಳೂರು ಮೆಟ್ರೋ ರೈಲ್ ನಿಗಮ ನಿಯಮಿತ ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯ ಜೊತೆಗೂಡಿ ಮೆಟ್ರೋದ ಆರು ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಮುಂದಾಗಿವೆ.
ಮೆಟ್ರೋ, ಬಸ್, ಮುಂಬರುವ ಸಬ್‌ಅರ್ಬನ್ ರೈಲು ಸೇರಿ ಇತರೆ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಜನರ ಪ್ರಯಾಣ ಹೆಚ್ಚಿಸಲು ಸಾರ್ವಜನಿಕರಿಗೆ ಉತ್ತೇಜನ ನೀಡುವ ಸೌಲಭ್ಯ ಒದಗಿಸುವ ಯೋಜನೆ ಇದು. ರೇಷ್ಮೆ ಕೇಂದ್ರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಆರು ನಿಲ್ದಾಣದಲ್ಲಿ ಇದನ್ನು ಅನುಷ್ಠಾನಗೊಳಿಸುವ ಪ್ರಯತ್ನ ನಡೆದಿದೆ. ಇಲ್ಲಿನ ಪ್ರತಿಕ್ರಿಯೆ ಗಮನಿಸಿ ಮುಂದೆ ಎಲ್ಲ ಮೆಟ್ರೋ ನಿಲ್ದಾಣದಲ್ಲಿ ವಿಸ್ತರಿಸುವ ಗುರಿ ಇದೆ ಎಂದು ಮೂಲಗಳು ತಿಳಿಸಿವೆ.
Namma Metro ಪಿಲ್ಲರ್ ದುರಂತ: ಮೆಟ್ರೋ ಎಂಡಿ ಅಜುಂ ಪರ್ವೇಜ್‌ಗೆ ಪೊಲೀಸರ ಗ್ರಿಲ್
ಮೆಟ್ರೋದಲ್ಲಿ ಟಿಒಡಿ
ಮೆಟ್ರೊ ರೈಲು ನೀತಿ- 2017ರ ಪ್ರಕಾರ ರಾಜ್ಯ ಸರ್ಕಾರ ಟಿಒಡಿ ನೀತಿ, ಸಮಗ್ರ ಸಾರಿಗೆ ಯೋಜನೆ ಹೊಂದುವುದು ಕಡ್ಡಾಯ. ಹೀಗಾಗಿ ಮೆಟ್ರೊದ ಜನಬಳಕೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಟಿಒಡಿಯನ್ನು ಪ್ರಾಯೋಗಿಕವಾಗಿ ಅಳವಡಿಸುವ ಪ್ರಯತ್ನ ನಡೆದಿದೆ. ಇದಕ್ಕಾಗಿ ಡಲ್ಟ್ ವಲಯವಾರು ಯೋಜನೆಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಟಿಒಡಿ ನೀತಿಗೆ 2022ರ ನ.17ರಂದು ಸರ್ಕಾರ ಅನುಮೋದನೆ ನೀಡಿದೆ.
ಮೆಟ್ರೋ ಇಕ್ಕೆಲದ 500 ಮೀಟರ್‌ವರೆಗಿನ ಪ್ರದೇಶವನ್ನು ತೀವ್ರ ದಟ್ಟಣೆಯ ವಲಯ, 500 ಮೀ. ದೂರದಿಂದ 1 ಸಾವಿರ ಮೀ. ದೂರದವರೆಗಿನ ಪ್ರದೇಶವನ್ನು ಸಾಧಾರಣ ದಟ್ಟಣೆಯ ವಲಯ ಹಾಗೂ 1 ಸಾವಿರ ಮೀ. ದೂರದಿಂದ 2 ಸಾವಿರ ಮೀ. ದೂರದವರೆಗಿನ ಪ್ರದೇಶವನ್ನು ಪರಿವರ್ತನಾ ವಲಯವಾಗಿ ಗುರುತಿಸಲಾಗಿದೆ.
ನಿಲ್ದಾಣಕ್ಕೆ ಹೆಚ್ಚಿನ ಜನ
ನಡಿಗೆ, ಸೈಕಲ್ ಮತ್ತು ಬಸ್‌ಗಳ ಬಳಕೆಯನ್ನೂ ಹೆಚ್ಚಿಸಲು ನಿಲ್ದಾಣಗಳಿಗೆ ಹತ್ತಿರ ಇರುವ ಜಾಗಗಳನ್ನು ಸಾರ್ವಜನಿಕ ಉದ್ದೇಶಗಳಿಗೆ ಬಳಕೆ ಮಾಡುವುದು. ಮೆಟ್ರೋ ಸನಿಹದ ಪ್ರಮುಖ ಸ್ಥಳದಿಂದ ಆರು ನಿಮಿಷದಲ್ಲಿ ನಿಲ್ದಾಣಕ್ಕೆ ನಡೆಯಬಹುದಾದ ಮತ್ತು ಸೈಕಲ್‌ನಲ್ಲಿ ತೆರಳಬಹುದಾದ ಜಾಗದಲ್ಲಿ ಟಿಒಡಿ ವಲಯ ನಿರ್ಮಿಸಿಕೊಳ್ಳಲಾಗಿದೆ. ಅದೇ ರೀತಿ 6 ನಿಮಿಷದಲ್ಲಿ ಸಾಗಬಹುದಾದ ಫೀಡರ್ ಸಾರಿಗೆ ಸೇವೆ ಒದಗಿಸುವ ವ್ಯವಸ್ಥೆ ಅಭಿವೃದ್ಧಿಪಡಿಸುವುದು ಈ ನೀತಿಯಲ್ಲಿದೆ. ಅಂದರೆ ಒಟ್ಟಾರೆ, ಮೆಟ್ರೋ ಸನಿಹದ ನಿವಾಸಿಗಳು, ಸೇರುವ ಜನತೆ ಹೆಚ್ಚಾಗಿ ಈ ವ್ಯವಸ್ಥೆಯನ್ನೇ ಬಳಸುವಂತೆ ಮಾಡುವುದು ಇದರ ಉದ್ದೇಶ.
ಕೆಆರ್ ಪುರಂ -ವೈಟ್‌ಫೀಲ್ಡ್ ನಡುವಿನ ಮೆಟ್ರೋ ಸೇವೆ ಮಾರ್ಚ್ ನಲ್ಲಿ ಆರಂಭ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಲ್ಟ್ ವ್ಯವಸ್ಥಾಪಕ ನಿರ್ದೇಶಕಿ ವಿ.ಮಂಜುಳಾ, ‘ಮೆಟ್ರೋದ ಹಂತ 2ಎ ಮತ್ತು 2ಬಿ ಆಯ್ದ ನಿಲ್ದಾಣಗಳಲ್ಲಿ ಟಿಒಡಿ ನೀತಿ ಅನುಷ್ಠಾನಕ್ಕೆ ಯೋಜಿಸಲಾಗಿದೆ. ಇದಕ್ಕಾಗಿ ತಾಂತ್ರಿಕವಾಗಿ ಲಭ್ಯವಿರುವ ಆರು ಸ್ಟೇಷನ್‌ಗಳನ್ನು ಶಾರ್ಚ್‌ಲಿಸ್ವ್ ಮಾಡಿಕೊಳ್ಳಲಾಗುತ್ತಿದೆ. ಸಾರ್ವಜನಿಕ ಸಂಚಾರ ಹೆಚ್ಚಿಸುವ ಮೂಲಕ ಸುಸ್ಥಿರ ಸಂಚಾರ ವ್ಯವಸ್ಥೆಗೆ ಹೆಚ್ಚು ಒತ್ತು ನೀಡುವುದು ಇದರ ಉದ್ದೇಶ’ ಎಂದು ತಿಳಿಸಿದರು.