ಬೈಕ್ ಮೇಲೆ ಸಾಹಸ: ಭಾರತೀಯ ಸೇನೆ 3 ವಿಶ್ವ ದಾಖಲೆ!

By Kannadaprabha NewsFirst Published Dec 5, 2022, 12:32 PM IST
Highlights

ಭಾರತೀಯ ಸೇನೆಯ ‘ಆರ್ಮಿ ಸರ್ವಿಸ್‌ ಕಾಫ್ಸ್‌’(ಎಎಸ್‌ಸಿ) ಪ್ರದರ್ಶನ ತಂಡ ‘ಟೊರ್ನೆಡೋಸ್‌’ ತನ್ನ ಸ್ಥಾಪನಾ ದಿನದ ಅಂಗವಾಗಿ ಬೈಕ್‌ ಸಾಹಸದಲ್ಲಿ ಮೂರು ವಿಶ್ವದಾಖಲೆಗಳನ್ನು ನಿರ್ಮಿಸಿದೆ. ತನ್ಮೂಲಕ ಟೊರ್ನೆಡೋಸ್‌ ಹೆಸರಲ್ಲಿನ ದಾಖಲೆಗಳ ಸಂಖ್ಯೆ 32ಕ್ಕೆ ಏರಿದಂತಾಗಿದೆ.

ಬೆಂಗಳೂರು (ಡಿ.5) : ಭಾರತೀಯ ಸೇನೆಯ ‘ಆರ್ಮಿ ಸರ್ವಿಸ್‌ ಕಾಫ್ಸ್‌’(ಎಎಸ್‌ಸಿ) ಪ್ರದರ್ಶನ ತಂಡ ‘ಟೊರ್ನೆಡೋಸ್‌’ ತನ್ನ ಸ್ಥಾಪನಾ ದಿನದ ಅಂಗವಾಗಿ ಬೈಕ್‌ ಸಾಹಸದಲ್ಲಿ ಮೂರು ವಿಶ್ವದಾಖಲೆಗಳನ್ನು ನಿರ್ಮಿಸಿದೆ. ತನ್ಮೂಲಕ ಟೊರ್ನೆಡೋಸ್‌ ಹೆಸರಲ್ಲಿನ ದಾಖಲೆಗಳ ಸಂಖ್ಯೆ 32ಕ್ಕೆ ಏರಿದಂತಾಗಿದೆ.

ಭಾನುವಾರ ನಗರದಲ್ಲಿನ ಎಎಸ್‌ಸಿ ಸೆಂಟರ್‌ನಲ್ಲಿ ನಡೆದ ಸಾಹಸ ಪ್ರದರ್ಶನದಲ್ಲಿ ಟೊರ್ನೆಡೋಸ್‌ನ ಟೀಂ ಕ್ಯಾಪ್ಟನ್‌ ಅಭಿಜಿತ್‌ ಸಿಂಗ್‌ ಗ್ರೆವಾಲ್‌ ಮೋಟರ್‌ ಸೈಕಲ್‌ ಮೇಲೆ ನಿಂತುಕೊಂಡು ದೀರ್ಘಾವಧಿ ಚಾಲನೆ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅವರು 3 ಗಂಟೆ 29 ನಿಮಿಷ ಒಟ್ಟು 114 ಕಿ.ಮೀ. ದೂರ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಆರ್ಮಿ ಸಿಗ್ನಲ್ಸ್‌ನ ಮೋಟಾರ್‌ ಸೈಕಲ್‌ ತಂಡ ಡೇರ್‌ಡೆವಿಲ್ಸ್‌ 75.2 ಕಿ.ಮೀ. ಕ್ರಮಿಸಿದ ದಾಖಲೆ ಪತನಗೊಂಡಿದೆ.

ಹವಲ್ದಾರ್‌ ಹರಿಕೇಷ್‌ ಯಾದವ್‌ ಬೈಕ್‌ನ ಹಿಂಬಾದಿಯಲ್ಲಿನ ಲೈಟ್‌ನ ಮೇಲ್ಬಾಗ (ಟೈಲ್‌ ಲೈಟ್‌) ಮೇಲೆ 9 ಗಂಟೆ 17 ನಿಮಿಷ ಕೂತು 356 ಕಿ.ಮೀ. ಬೈಕ್‌ ಚಲಾಯಿಸಿ ನೂತನ ದಾಖಲೆ ಬರೆದಿದ್ದಾರೆ. ಇದರೊಂದಿಗೆ 111 ಕಿ.ಮೀ. ಚಲಾಯಿಸಿ ಡೇರ್‌ ಡೆವಿಲ್ಸ್‌ ನಿರ್ಮಿಸಿದ್ದ ದಾಖಲೆ ಮುರಿದು ಬಿದ್ದಿದೆ.

13,560 ಕಿಮೀ ಹಕ್ಕಿಯ ನಾನ್‌ಸ್ಟಾಪ್‌ ಯಾನ, ವಿಮಾನ, ಜಿಪಿಎಸ್ ಯಾವ ಲೆಕ್ಕ?

ರಾಯಲ್‌ ಎನ್‌ಫೀಲ್ಡ್‌ 350 ಸಿಸಿಯ ಮೇಲೆ 2.4 ಕಿ.ಮೀ. ವ್ಹೀಲಿಂಗ್‌ ನಡೆಸಿ ಹವಲ್ದಾರ್‌ ಮನೀಷ್‌ ಹೊಸ ದಾಖಲೆ ನಿರ್ಮಿಸಿದ್ದಾರೆ. ಗಿನ್ನಿಸ್‌ ಬುಕ್‌ ಆಫ್‌ ವಲ್ಡ್‌ರ್‍ ರೆಕಾರ್ಡ್ಸ್, ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್, ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ಸ್ ನ ಮಾನದಂಡಗಳಿಗೆ ಅನುಗುಣವಾಗಿ ಸಾಹಸ ಪ್ರದರ್ಶಿಸಲಾಗಿದೆ ಎಂದು ರಕ್ಷಣಾ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

click me!