
ಬೆಂಗಳೂರು: ಮುಂಬರುವ ಘಟಿಕೋತ್ಸವದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನ್ಯಾ। ಸೂರ್ಯಕಾಂತ್ ಮತ್ತು ಭಾರತೀಯ ವಕೀಲರ ಪರಿಷತ್ (ಬಿಸಿಐ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಭಾಗವಹಿಸುವುದಕ್ಕೆ ಬೆಂಗಳೂರಿನ ನಾಗರಬಾವಿಯಲ್ಲಿರುವ ಭಾರತೀಯ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದ (ಎನ್‌ಎಲ್‌ಎಸ್‌ಐಯು) ಹಾಲಿ ಮತ್ತು ಹಳೆಯ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಜಿರಳೆ ಪಕ್ಷದ ಹೋರಾಟದ ಬಗ್ಗೆ ನ್ಯಾ। ಸೂರ್ಯಕಾಂತ್ ಕೆಲವು ಕಟು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಹೈದರಾಬಾದ್‌ನ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನೆಯ ಅಕಾಡೆಮಿಯ (ಎನ್‌ಎಎಲ್‌ಎಸ್‌ಎಆರ್) ವಿದ್ಯಾರ್ಥಿಗಳು ಆಕ್ಷೇಪಿಸಿ, ವಿವಿಯ ಸಮಾರಂಭಕ್ಕೆ ನ್ಯಾ। ಕಾಂತ್ ಬರಬಾರದು ಎಂದು ಆಗ್ರಹಿಸಿದ್ದರು. ಇದಕ್ಕೆ ಕಿಡಿಕಾಎಇದ್ದ ಬಿಸಿಐ, ಸಿಜೆಐಗೆ ವಿರೋಧ ಮಾಡಿದವರ ವಕೀಲಿಕೆ ನೋಂದಣಿ ತಡೆಹಿಡಿದು (ಸದ್ಯ ಹಿಂಪಡೆದಿರುವ) ಆದೇಶ ಹೊರಡಿಸಿತ್ತು.
ಇದೀಗ ಬಿಸಿಐ ನಡೆ ಖಂಡಿಸಿ ಎನ್‌ಎಲ್‌ಎಸ್‌ಐಯು ಹಾಲಿ ಮತ್ತು ಹಳೆಯ ವಿದ್ಯಾರ್ಥಿಗಳು ಈ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಹೇಳಿಕೆಗೆ 2026ನೇ ಸಾಲಿನಲ್ಲಿ ಪಾಸಾಗಿ ಘಟಿಕೋತ್ಸವದಲ್ಲಿ ಪದವಿ ಸ್ವೀಕಾರಕ್ಕೆ ಕಾದಿರುವ 165 ವಿದ್ಯಾರ್ಥಿಗಳು ಮತ್ತು 409 ಹಾಲಿ (ಇನ್ನೂ ಕಲಿಯುತ್ತಿರುವ) ಹಾಗೂ 128 ಹಳೆಯ ವಿದ್ಯಾರ್ಥಿಗಳು ಸಹಿ ಮಾಡಿದ್ದಾರೆ.
ಸತ್ಯ ಹೇಳುವ ಮೂಲಕ ಧೈರ್ಯ ಮತ್ತು ನೈತಿಕ ದೃಢವಿಶ್ವಾಸ ತೋರಿಸಿರುವ ಎನ್‌ಎಎಲ್‌ಎಸ್‌ಎಆರ್ ವಿದ್ಯಾರ್ಥಿಗಳಿಗೆ ನಮ್ಮ ಬೆಂಬಲವಿದೆ ಈ ವಿದ್ಯಾರ್ಥಿಗಳ ವಿರುದ್ಧದ ಎಲ್ಲ ಪ್ರಕ್ರಿಯೆಗಳನ್ನು ಬಿಸಿಐ ಮುಕ್ತಾಯಗೊಳಿಸಿದ್ದರೂ ಶಾಸನಬದ್ಧ ಸಂಸ್ಥೆಯಿಂದ ವಿದ್ಯಾರ್ಥಿಗಳ, ವಿವಿಯ ಸಿಬ್ಬಂದಿಯ ವಿರುದ್ಧ ಅಸಂವಿಧಾನಿಕ ಮತ್ತು ಅಕ್ರಮವಾದ ಪ್ರಕ್ರಿಯೆ ಆರಂಭಿಸಬಹುದು. ಸಾರ್ವಜನಿಕ ವಿವಿಯ ನಿರ್ಧಾರವು ಅಂತಹ ಕ್ರಮಗಳ ಸ್ವರೂಪ ಅಥವಾ ದೊಡ್ಡ ಪರಿಣಾಮವನ್ನು ಬದಲಾಯಿಸುವುದಿಲ್ಲ ಎಂದು ಎನ್‌ಎಲ್‌ಎಸ್‌ಐಯು ಹಾಲಿ ಮತ್ತು ಹಳೆಯ ವಿದ್ಯಾರ್ಥಿಗಳು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಸಿಐ ತನ್ನ ಕ್ರಮವನ್ನು ಅನಿಯಂತ್ರಿತ ಮತ್ತು ಕಾನೂನುಬಾಹಿರ ಸ್ವರೂಪವೆಂದು ಒಪ್ಪಿಕೊಂಡಿದೆ. ಘಟಿಕೋತ್ಸವವು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಸ್ಮರಣೀಯ ಕಾರ್ಯಕ್ರಮವಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಹೋರಾಟಗಳ ಬಗ್ಗೆ ಸಾರ್ವಜನಿಕವಾಗಿ ತಿರಸ್ಕಾರ, ಅವಮಾನ ಮತ್ತು ಅಪಹಾಸ್ಯವನ್ನು ವ್ಯಕ್ತಪಡಿಸಿದ ಉನ್ನತ ಹುದ್ದೆ ಹೊಂದಿರುವವರನ್ನು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪ್ರದಾನ ಮಾಡಲು ಆಹ್ವಾನಿಸುವುದು ಸರಿಯಲ್ಲ. ಹಾಗಾಗಿ, ಘಟಿಕೋತ್ಸವಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಬಿಸಿಐ ಅಧ್ಯಕ್ಷರನ್ನು ಆಹ್ವಾನಿಸಿರುವುದನ್ನು ಮರು ಪರಿಶೀಲನೆ ನಡೆಸಬೇಕು ಎಂದು ವಿದ್ಯಾಥಿಗಳು ವಿವಿಗೆ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ