ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಶನಿವಾರ ರಾತ್ರಿ ರೈಲು ಹಳಿಗಳ ಮೇಲೆ ಜಲ್ಲಿಕಲ್ಲು ಪೇರಿಸಿಟ್ಟ ಘಟನೆಗೆ ಸಂಬಂಧಿಸಿ ದುಷ್ಕರ್ಮಿಗಳು ವಿಧ್ವಂಸಕ ಕೃತ್ಯಕ್ಕೆಸಂಚು ನಡೆಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ.
ಮಂಗಳೂರು (ಅ.21): ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಶನಿವಾರ ರಾತ್ರಿ ರೈಲು ಹಳಿಗಳ ಮೇಲೆ ಜಲ್ಲಿಕಲ್ಲು ಪೇರಿಸಿಟ್ಟ ಘಟನೆಗೆ ಸಂಬಂಧಿಸಿ ದುಷ್ಕರ್ಮಿಗಳು ವಿಧ್ವಂಸಕ ಕೃತ್ಯಕ್ಕೆಸಂಚು ನಡೆಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ. ಇದೇ ವೇಳೆ ರೈಲು ಹಳಿಯಲ್ಲಿ ಕಂಡುಬಂದಿರುವ ಜಲ್ಲಿಕಲ್ಲು ಮಕ್ಕಳು ಪೇರಿಸಿಟ್ಟಿರುವುದು ರೈಲ್ವೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ನಿರ್ಮಾಣ ಕಾಮಗಾರಿಗೆ ಹೊರ ರಾಜ್ಯಗಳಿಂದ ಆಗಮಿಸಿದ ಕಾರ್ಮಿಕರು ರೈಲು ಹಳಿಗಳ ಆಸುಪಾಸಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಾರ್ಮಿಕರ ಮಕ್ಕಳು ಶನಿವಾರ ರಾತ್ರಿ ವೇಳೆ ಮಕ್ಕಳಾಟದಲ್ಲಿ ಹಳಿಗಳ ಮೇಲೆ ಜಲ್ಲಿಕಲ್ಲು ಪೇರಿಸಿದ್ದಾರೆ.
ರಾತ್ರಿ 8.45ಕ್ಕೆ ಕೇರಳದಿಂದ ಮಂಗಳೂರಿಗೆ ಆಗಮಿಸುವ ಹಾಗೂ ಮಂಗಳೂರಿನಿಂದ ಕೇರಳಕ್ಕೆ ತೆರಳುವ ರೈಲುಗಳು ಸಂಚರಿಸಿದಾಗ ಜಲ್ಲಿಕಲ್ಲು ಹಳಿಯಿಂದ ಸಿಡಿದಿದೆ. ಅದುವೇ ದೊಡ್ಡ ಸದ್ದು ಆಗಿ ಕೇಳಿಸಿದೆ. ಬೋಗಿಯ ಗಾಲಿಗೆ ಸಿಲುಕಿ ಜಲ್ಲಿಕಲ್ಲುಗಳು ಪರಸ್ಪರ ತಳ್ಳಲ್ಪಟ್ಟಾಗ ಸದ್ದು ಉಂಟಾಗಿದೆ. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಬಂದ ಕೂಡಲೇ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಹೆಚ್ಚಿನ ತನಿಖೆಗೆ ಭಾನುವಾರ ಕೂಡ ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಸ್ಥಳೀಯರು ಹಾಗೂ ಸುತ್ತಮುತ್ತಲಿನವರ ತನಿಖೆ ನಡೆಸಿದಾಗ ಹಳಿಯಲ್ಲಿ ಮಕ್ಕಳು ಜಲ್ಲಿಕಲ್ಲು ಪೇರಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೂ ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
undefined
ಚನ್ನಪಟ್ಟಣ ಉಪಚುನಾವಣೆ: ಜೆಡಿಎಸ್ ಟಿಕೆಟ್ ಆಫರ್ ಒಪ್ಪುತ್ತಿಲ್ಲ ಯೋಗೇಶ್ವರ್
ಹಳಿ ತಪ್ಪಿಸುವ ಎಚ್ಚರಿಕೆ ನೀಡಿದ್ದ ಉಗ್ರರು: ಇತ್ತೀಚೆಗಷ್ಟೇ ಉಗ್ರ ಸಂಘಟನೆಯ ಪಾಕ್ ಭಯೋತ್ಪಾದಕ ಫರ್ಹಾತುಲ್ಲಾ ಘೋರಿ ಭಾರತದಾದ್ಯಂತ ರೈಲುಗಳನ್ನು ಹಳಿ ತಪ್ಪಿಸುವ ಎಚ್ಚರಿಕೆ ನೀಡಿದ್ದನು. ಉಗ್ರರ ಸ್ಲಿಪರ್ ಸೆಲ್‌ಗಳಿಗೆ ಕರೆ ನೀಡಿದ ಬೆನ್ನಲ್ಲೇ ದೇಶದ ಹಲವಡೆ ರೈಲು ಹಳಿ ತಪ್ಪಿಸುವ ಪ್ರಯತ್ನಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ರೈಲು ಹಳಿ ತಪ್ಪಿಸಲು ಸಂಚು ನಡೆದಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರೈಲ್ವೆ ಪೊಲೀಸರು, ಆರ್‌ಪಿಎಫ್ ಪೊಲೀಸರು ಹಾಗೂ ಉಳ್ಳಾಲ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ರಾತ್ರಿ ರೈಲು ಹಳಿ ಮೇಲೆ ಇಬ್ಬರು ಟಾರ್ಚ್ ಹಾಕಿ ನಿಂತಿದ್ದವರು ಎಂದು ಸ್ಥಳೀಯ ಮಹಿಳೆಯರು ಮಾಹಿತಿ ನೀಡಿದ್ದಾರೆ.
ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿಗಳಲ್ಲೂ ಆಗಂತುಕರ ಫೋಟೋ ವಿಡಿಯೋ ಸೆರೆ ಆಗಿದೆಯೇ ಎಂಬುದನ್ನು ಶೋಧಿಸುತ್ತಿದ್ದಾರೆ. ಹಲವು ತಿಂಗಳ ಹಿಂದೆ ಮಂಗಳೂರು ಗಡಿ ಭಾಗದ ಕಾಸರಗೋಡಿನ ಹಲವೆಡೆ ರೈಲು ಹಳಿ ತಪ್ಪಿಸಲು ವಿಫಲಯತ್ನ ನಡೆಸಲಾಗಿತ್ತು. ರೈಲು ಹಳಿ ಮೇಲೆ ಕಲ್ಲು, ಕಬ್ಬಿಣದ ಸರಳು, ಕಾಂಕ್ರಿಟ್ ತುಂಡುಗಳನ್ನು ಇರಿಸಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಲಾಗಿತ್ತು. ಕಾಸರಗೋಡಿನ ತೃಕ್ಕನ್ನಾಡು, ಕುಂಬಳೆ, ಹೊಸದುರ್ಗ, ತಳಂಗರೆಗಳಲ್ಲಿ ರೈಲು ಹಳಿ ತಪ್ಪಿಸಲು ಯತ್ನಿಸಲಾಗಿತ್ತು. ಇದೀಗ ಮೊದಲ ಬಾರಿಗೆ ಮಂಗಳೂರಿನಲ್ಲೂ ರೈಲು ಹಳಿಯಲ್ಲಿ ಕಲ್ಲುಗಳನ್ನಿಡುವ ದುಷ್ಕೃತ್ಯ ನಡೆದಿದೆ.
ಬೈಎಲೆಕ್ಷನ್‌ನಿಂದ ಡಿಕೆಶಿಗೆ ಚನ್ನಪಟ್ಟಣ ನೆನಪಾಗ್ತಿದೆ: ಎಚ್.ಡಿ.ಕುಮಾರಸ್ವಾಮಿ
ತೊಕ್ಕೊಟ್ಟಿನಲ್ಲಿ ಆಗಿದ್ದು ಏನು?: ಮಂಗಳೂರಿನ ತೊಕ್ಕೊಟ್ಟು ಬಳಿ ಶನಿವಾರ ರಾತ್ರಿ ಕೇರಳದಿಂದ ಮಂಗಳೂರಿಗೆ ಬರುವ ರೈಲು ಹಾಗೂ ಮಂಗಳೂರಿನಿಂದ ಕೇರಳಕ್ಕೆ ಹೋಗುವ ಎರಡೂ ರೈಲುಗಳು ಹಳಿಯ ಮೇಲೆ ಸಾಗುವಾಗ ದೊಡ್ಡ ಪ್ರಮಾಣದಲ್ಲಿ ಕಂಪನ ಹಾಗೂ ಶಬ್ದ ಉಂಟಾಗಿದ್ದು, ಸ್ಥಳೀಯರಿಗೆ ರೈಲು ಬಿದ್ದ ಅನುಭವವಾಗಿದೆ. ಇದರ ಬೆನ್ನಲ್ಲಿಯೇ ಸ್ಥಳ ಪರಿಶೀಲನೆ ಮಾಡಿದಾಗ ರೈಲು ಹಳಿಯ ಮೇಲೆ ಸಾಲಾಗಿ ಕಲ್ಲು ಇಟ್ಟಿದ್ದು, ರೈಲುಗಳು ಹೋದಾಗ ಅವುಗಳು ಪುಡಿ ಪುಡಿಯಾಗಿ ಬಿದ್ದಿರುವ ಘಟನೆ ನಡೆದಿದೆ. ಇದು ರೈಲು ಹಳಿ ತಪ್ಪಿಸಲು ನಡೆಸಿದ ಕಿಡಿಗೇಡಿ ಕೃತ್ಯ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿ ಸ್ಥಳೀಯ ಹಾಗೂ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.