ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಯಡಿಯೂರಪ್ಪ ಅವರ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎಂಬ ಅನುಮಾನ ವ್ಯಕ್ತಪಡಿಸಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಈ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಶೋಭಾ ಕರಂದ್ಲಾಜೆ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದೂ ಒತ್ತಾಯಿಸಿದ್ದಾರೆ.
ಬೆಂಗಳೂರು (ಅ.20): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಯಡಿಯೂರಪ್ಪ ಅವರ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎಂಬ ಅನುಮಾನವಿದೆ. ಅವರ ಸಾವಿನ ಬಗ್ಎಯೂ ತನಿಖೆ ಆಗಬೇಕು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರ ಇದೆ ಎಂದು ನನಗೆ ಅನುಮಾನ ಇದೆ. ರಾಜ್ಯ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಳ್ಳೆಯವರು. ಅವರ ಮಕ್ಕಳು ಕೂಡ ಒಳ್ಳೆಯವರು. ಹಾಗಾದರೆ, ಯಡಿಯೂರಪ್ಪನವರ ಪತ್ನಿ ಮೈತ್ರಾ ದೇವಿ ಅವರ ಸಾವು ಹೇಗಾಯ್ತು. ಆ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಪಾತ್ರ ಇರುವ ಬಗ್ಗೆ ನನಗೆ ಅನುಮಾನ ಇದೆ. ಅವರ ಸಾವಿನ ಬಗ್ಗೆ ತನಿಖೆ ಆಗಬೇಕು. ಸಚಿವೆ ಶೋಭಾ ಕರಂದ್ಲಾಜೆ ಅವರ ಬಂಧನ ಆಗಬೇಕು. ಕೂಡಲೇ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಮೂಲಕ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಚಿವ ಬೈರತಿ ಸುರೇಶ್ ಅವರನ್ನು ಬಂಧಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದ ಮಾತಿಗೆ ವೈಯಕ್ತಿಕವಾಗಿಯೇ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಅಕಾಲಿಕ ಮಳೆಗೆ ರೈತರ ಬೆಳೆಹಾನಿ, ಉಡಾಫೆ ಉತ್ತರ ಕೊಟ್ಟ ಕೃಷಿ ಸಚಿವರಿಗೆ ತಿವಿದ ಆರ್. ಅಶೋಕ್!
ಮೈಸೂರಿನ ಶಾಸಕ ಒಬ್ರಿದ್ದಾರೆ, ಮಾತ್ತೆತ್ತಿದರೆ ಸುಳ್ಳು. ಒಳಗಡೆ ಪೂಜೆ ಮಾಡಿಕೊಂಡು ಬಂದು ಹೊರಗಡೆ ಸುಳ್ಳು ಹೇಳಬಾರದು. ಒಳಗಡೆ ಪೂಜೆ ಮಾಡಿ ಹಣೆಗೆ ನಾಮ ಇಟ್ಟುಕೊಂಡ ಮಾತ್ರಕ್ಕೆ ಒಳ್ಳೆಯವರಾಗಲ್ಲ. ಹೊರಗಡೆ ಸುಳ್ಳು ಹೇಳಿದರೆ ದೇವರು ಮೆಚ್ಚಲ್ಲ. ನಾನು ಈಗಲೂ ಸವಾಲು ಹಾಕ್ತೇನೆ. ಒಂದೇ ಒಂದು ಫೈಲ್ ಮಿಸ್ ಆಗಿದ್ದರೆ ನಾನು ಚಾಮುಂಡೇಶ್ವರಿಗೆ ಬಂದು ಪ್ರಮಾಣ ಮಾಡ್ತೇನೆ. ಅವರೂ ಬೇಕಿದ್ರೆ ಚಾಮುಂಡೇಶ್ವರಿಗೆ ಅಥವಾ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ನಾನು ಸವಾಲು ಹಾಕಿ ಎರಡು ದಿನಗಳಾದರೂ ಶ್ರೀವತ್ಸ ಆಗ್ಲಿ ಬೇರೆಯವರಾಗಲಿ ಇದಕ್ಕೆ ಉತ್ತರ ಕೊಟ್ಟಿಲ್ಲ. ಪಾಪ ಶೋಭಾ ಕರಂದ್ಲಾಜೆಗೆ ಹೊಟ್ಟೆ ಉರಿ. ಯಡಿಯೂರಪ್ಪ, ಯಡಿಯೂರಪ್ಪ ಮಕ್ಕಳು ಒಳ್ಳೆಯವರೇ. ಆದರೆ, ಇವರಿಗೆ ನನ್ನ ಕ್ಷೇತ್ರದಲ್ಲಿ ಲೀಡ್ ಬರಲಿಲ್ಲ ಎನ್ನೋ ಹೊಟ್ಟೆ ಉರಿ. ಅದಕ್ಕಾಗಿ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು. ಅವರು ಚಾಮುಂಡೇಶ್ವರಿ ಗೆ ಬರ್ತಾರೆ ಅಂದರೆ, ನಾನು ಈಗಲೇ ಬರ್ತೇನೆ. ಹೆಲಿಕಾಪ್ಟರ್‌ನಲ್ಲಿ ಬರೋದಕ್ಕಾಗಲ್ಲ, ಗಾಡಿಯಲ್ಲಿ ಬರ್ತೇನೆ. ಶ್ರೀವತ್ಸ ಸುಳ್ಳು ಹೇಳುವುದು ಬಿಡಬೇಕು ಎಂದು ಕಿಡಿಕಾರಿದರು.
ಇದನ್ನೂ ಓದಿ: ಕಿಚ್ಚನ ತಾಯಿಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತಾ? ಸುದೀಪನಿಗೆ ಒಂದೇ ದಿನ 2 ಬಾರಿ ಆಶೀರ್ವಾದ ಮಾಡಿದ್ದ ಅಮ್ಮ!