ಎಸ್‌ಐ ಹಗರಣ 15 ದಿನದಲ್ಲಿ ಮುಚ್ಚಿಹಾಕ್ತಾರೆ ಎಂದ ಎಚ್‌ಡಿಕೆ

By Kannadaprabha NewsFirst Published May 6, 2022, 4:45 AM IST
Highlights

- ಈ ಪ್ರಕರಣವೂ ತಾರ್ಕಿಕ ಅಂತ್ಯ ಕಾಣಲ್ಲ

-ಸಚಿವ ಅಶ್ವತ್ಥ್ ಬಗ್ಗೆ ಮೃಧುಧೋರಣೆ ಇಲ್ಲ

ಬಿಜೆಪಿ ಸರ್ಕಾರ ಎಲ್ಲಕ್ಕೂ ಮೌನವಾಗಿದೆ. 
 

ಬೆಂಗಳೂರು (ಮೇ.6): ಪಿಎಸ್‌ಐ ನೇಮಕಾತಿ ಹಗರಣವು (PSI Recruitment Scam) ಇತರೆ ಪ್ರಕರಣಗಳಂತೆ ತಾರ್ಕಿಕ ಅಂತ್ಯ ಕಾಣುವುದಿಲ್ಲ. 15 ದಿನದಲ್ಲಿ ಗುಂಡಿತೋಡಿ ಮುಚ್ಚಿ ಹಾಕಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಹರಿಹಾಯ್ದಿದ್ದಾರೆ.

ಗುರುವಾರ ಜೆಡಿಎಸ್‌ (ಝಧಶ) ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಅಶ್ವತ್ಥನಾರಾಯಣ (cn ashwath narayan) ಬಗ್ಗೆ ನನಗೆ ಮೃದು ಧೋರಣೆ ಇದೆ ಎಂದು ಕೆಲವರು ತಿಳಿಸಿದ್ದಾರೆ. ಅಂತಹ ಯಾವ ಮೃದು ಧೋರಣೆ ನಿಲುವು ನನಗಿಲ್ಲ. ಬದಲಿಗೆ ದಾಖಲೆ ಇಟ್ಟು ಮಾತನಾಡಿ ಎಂದಿದ್ದೇನೆ. ಇದರಲ್ಲಿ ತಪ್ಪೇನಿದೆ? ಸರ್ಟಿಫಿಕೆಟ್‌ ಕೊಡಿಸುವುದರಲ್ಲಿ ಅಶ್ವತ್ಥನಾರಾಯಣ ಅವರದ್ದು ಎತ್ತಿದ ಕೈ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಿಂದೆ ಅವರು ನರ್ಸ್‌ಗಳಿಗೆ ಸರ್ಟಿಫಿಕೆಟ್‌ ಕೊಡಿಸಿ ಹೆಸರುವಾಸಿಯಾಗಿದ್ದರು. ಪರೀಕ್ಷೆ ಬರೆಯದೆ ಇದ್ದವರಿಗೂ ಕೊಟ್ಟಿದ್ದರು. ಕಾಂಗ್ರೆಸ್‌ನವರು ಅದನ್ನಾದರೂ ಹೇಳಲಿ. ಅದಕ್ಕೇ ದಾಖಲೆ ಇಟ್ಟುಕೊಂಡು ಮಾತನಾಡಲು ಹೇಳಿದ್ದು ಎಂದರು.

ಡ್ರಗ್ಸ್ ಪ್ರಕರಣ ನಡೆದಾಗ ಅದರಲ್ಲಿ ಮಾಜಿ ಮುಖ್ಯಮಂತ್ರಿ ಇದ್ದಾರೆ ಎಂದು ತೇಲಿಬಿಟ್ಟರು. ಆ ಮಾಜಿ ಮುಖ್ಯಮಂತ್ರಿ ಯಾರು ಎಂದು ಹೇಳಲೇ ಇಲ್ಲ. ಆ ಪ್ರಕರಣವೂ ಹಳ್ಳ ಹಿಡಿಯಿತು. ಆಮೇಲೆ ಲಾಟರಿ ಕೇಸ್‌ ಏನಾಯಿತು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಯಾವ ಪ್ರಕರಣಗಳಿಗೂ ತಾರ್ಕಿಕ ಅಂತ್ಯ ಕಾಣಿಸುತ್ತಿಲ್ಲ. ಪಿಎಸ್‌ಐ ಪ್ರಕರಣವನ್ನು ಸಹ ಹಾಗೆಯೇ ಮುಚ್ಚಿ ಹಾಕುತ್ತಾರೆ ಎಂದರು.

15 ದಿನ ಪಿಎಸ್‌ಐ ಹಗರಣ ಭಾರೀ ಪ್ರಚಾರದಲ್ಲಿರುತ್ತದೆ. ಆಮೇಲೆ ಗುಂಡಿ ತೋಡಿ ಮುಚ್ಚಿ ಹಾಕುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಹಾಕಿಕೊಟ್ಟ ಭ್ರಷ್ಟಾಚಾರದ ಅಡಿಪಾಯ ಇಂದು ಬೃಹತ್‌ ಆಗಿ ಬೆಳೆದು ನಿಂತಿದ್ದು, ಅದನ್ನು ಬಿಜೆಪಿ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರ ಎಲ್ಲಕ್ಕೂ ಮೌನವಾಗಿದೆ. ಪ್ರತಿ ಹಗರಣದ ಬಗ್ಗೆಯೂ ಮೌನವಾಗಿದೆ. ಕಳೆದ ಎರಡು ತಿಂಗಳಿಂದ ನಡೆದ ಗಲಾಟೆ, ಗಲಭೆಗಳು ನಡೆದಾಗಲೂ ಸರ್ಕಾರ ಸುಮ್ಮನೆ ಇತ್ತು. ಎಲ್ಲಕ್ಕೂ ಮೌನಂ ಸಮ್ಮತಿ ಲಕ್ಷಣಂ ಎನ್ನುವಂತಹ ಪರಿಸ್ಥಿತಿ ಇದೆ. ಇದು ರಾಜ್ಯ ಹಣೆಬರಹ. ಎರಡೂ ರಾಷ್ಟ್ರೀಯ ಪಕ್ಷಗಳ ನಡವಳಿಕೆಯನ್ನು ಜನ ನೋಡುತ್ತಿದ್ದಾರೆ. ರಾಜ್ಯದಲ್ಲಿ ಉತ್ತಮ ಸರ್ಕಾರ ಆಡಳಿತಕ್ಕೆ ಬರಬೇಕು. ಎರಡೂ ಪಕ್ಷಗಳ ನಾಯಕರು ನಾಡಿನ ಜನತೆಯ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಭ್ರಷ್ಟಾಚಾರದ ಕುರಿತು ಮಾತನಾಡಲು ಕಾಂಗ್ರೆಸ್‌ ನಾಯಕರಿಗೆ ಯಾವ ನೈತಿಕತೆ ಇದೆ? ಭ್ರಷ್ಟಾಚಾರ ಮತ್ತು ಕಮಿಷನ್‌ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಅಥವಾ ಕಾಂಗ್ರೆಸ್‌ ಪಕ್ಷಕ್ಕಿಲ್ಲ. ತಮಗೆ ಬೇಕಾದವರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ಮಾಡಿಕೊಂಡು ಅಮಾಯಕರ ಬಳಿ ಹಣ ಪೀಕಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಈಗ ಏನ್ ಮಾಡ್ತಿದ್ದಾರೆ, ಎಲ್ಲಿದ್ದಾರೆ ರಾಧಿಕಾ ಕುಮಾರಸ್ವಾಮಿ; ಇಲ್ಲಿದೆ ವಿವರ

ಇದಕ್ಕೂ ಮುನ್ನ PSI ಹಗರಣದ ಬಗ್ಗೆ ಮಾತನಾಡುತ್ತಾ ಎಚ್ ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದರು. ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ. ಜೆಜೆ ನಗರ ಗಲಭೆಯಲ್ಲಿ ಕಮಲ್ ಪಂಥ್ ಮೇಲೆ ಬಿಜೆಪಿ ಆರೋಪ ಮಾಡಿತ್ತು. ಅವರ ಕೆಲ ಅಭಿಮಾನಿಗಳು ಈ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು ಎಂದು ಮಾಹಿತಿ ಸೋರಿಕೆ ಮಾಡಿದ್ದಾರೆ' ಎಂದು ಕುಮಾರಣ್ಣ ಬಾಂಬ್ ಸಿಡಿಸಿದ್ದಾರೆ. 

PSI Scam: ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ ಎಂದ ಎಚ್‌ಡಿಕೆ

ಬ್ಲೂಟೂತ್‌ಗೆ ಕೆಮ್ಮುವುದನ್ನೇ ಸಂಕೇತ ಬಾಷೆಯಾಗಿ ಬಳಸಿರೋ ಗುಟ್ಟನ್ನ ಕೆಲ ದಿನಗಳ ಹಿಂದೆ ಬಿಚ್ಚಿಟ್ಟಿದ್ದ ಅಕ್ರಮ ಎಸಗಿರುವ ಅಭ್ಯರ್ಥಿಗಳು ಇದೀಗ ಪರೀಕ್ಷೆಗೂ ಮುನ್ನಾ ದಿನವೇ ಬ್ಲೂಟೂತ್‌ ಡಿವೈಸ್‌ನ್ನು ಪರೀಕ್ಷೆ ಕೇಂದ್ರದಲ್ಲಿ ಬಚ್ಚಿಟ್ಟಿದ್ದಾಗಿ ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಪರೀಕ್ಷೆಯ ಮುನ್ನಾದಿನವೇ ಕೇಂದ್ರದೊಳಗಿರುವ ಫ್ಲಾವರ್‌ ಪಾಟ್‌ನಲ್ಲಿ ಬ್ಲೂಟೂತ್‌ ಡಿವೈಸ್‌ ಬಚ್ಚಿಟ್ಟಿದ್ದೆ ಎಂದು ಇದೀಗ ಪೊಲೀಸ್‌ ವಶದಲ್ಲಿರುವ ರಾಜಾಪುರದ ಪ್ರಭು ಶರಣಪ್ಪ ಬಾಯಿ ಬಿಟ್ಟಿದ್ದಾನೆ.

click me!