
ಬೆಂಗಳೂರು(ಆ.21): ಇತ್ತೀಚಿನ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಸುಮಾರು 40ಕ್ಕೂ ಹೆಚ್ಚು ಆರೋಪಿಗಳಿಗೆ ಭಯೋತ್ಪಾದಕ ಸಂಘಟನೆಗಳ ನಂಟು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆ ಕುರಿತ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
"
ಈಗಾಗಲೇ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದ ಆರೋಪಿಗಳ ಕುರಿತು ಸಿಸಿಬಿಯಿಂದ ಎನ್‌ಐಎ ಸಹ ಔಪಚಾರಿಕ ಮಾಹಿತಿ ಪಡೆದಿದೆ. ಈ ತನಿಖೆ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದಿರುವ ಮುಖ್ಯಮಂತ್ರಿಗಳು, ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಡಿಕೆಶಿ ಹೇಳಿಕೆ ಗಲಭೆಕೋರರ ರಕ್ಷಿಸುವ ತಂತ್ರ: ಗೃಹ ಸಚಿವ ಬೊಮ್ಮಾಯಿ
ಗಲಭೆ ಪ್ರಕರಣದ ತನಿಖೆ ಮುಂದುವರೆದಂತೆ ರಾಜಕೀಯ ತಿರುವು ಪಡೆದುಕೊಳ್ಳಲಾರಂಭಿಸಿದೆ. ಸ್ಥಳೀಯ ಕಾಂಗ್ರೆಸ್ ಪಕ್ಷದ ಒಳ ಜಗಳವು ಗಲಾಟೆಗೆ ಪ್ರಮುಖ ಪ್ರೇರಣೆಯಾಗಿ ಕಂಡು ಬಂದಿದೆ. ಹೀಗಾಗಿ ಬೆಂಗಳೂರು ಪೊಲೀಸರು ತನಿಖೆ ನಡೆಸಿದರೆ ರಾಜಕೀಯವಾಗಿ ವಿರೋಧ ಪಕ್ಷಗಳ ಆರೋಪ ಎದುರಿಸಬೇಕಾಗುತ್ತದೆ ಎಂಬ ಆತಂಕವೂ ಇದೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೇರವಾಗಿ ಆಯುಕ್ತರನ್ನೇ ಬಿಜೆಪಿ ಪಕ್ಷದ ಏಜೆಂಟ್ ರೀತಿ ಕೆಲಸ ಮಾಡಬೇಡಿ ಎಂದು ವಾಗ್ದಾಳಿ ನಡೆಸಿರುವುದು ಅಧಿಕಾರಿಗಳಿಗೆ ಬೇಸರ ತಂದಿದೆ. ಈ ರಾಜಕೀಯ ಮೇಲಾಟದ ಹಿನ್ನೆಲೆಯಲ್ಲಿ ಗಲಭೆ ಪ್ರಕರಣದ ಎನ್‌ಐಎ ತನಿಖೆಗೆ ಕೆಲವು ಹಿರಿಯ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ದೂರಗಾಮಿ ಅಲೋಚನೆಯಿಂದಲೇ ಗಲಭೆಕೋರರ ಮೇಲೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಸಿಸಿಬಿ ಪ್ರಕರಣ ದಾಖಲಾಗಿಸಿದೆ. ಇದರಿಂದ ತಾಂತ್ರಿಕವಾಗಿ ಎನ್‌ಐಎ ತನಿಖೆ ನಡೆಸಲು ಸಹ ಯಾವುದೇ ಅಡ್ಡಿಯಿಲ್ಲ. ಸರ್ಕಾರ ಅಧಿಕೃತ ಆದೇಶ ಹೊರಡಿಸಿದರೆ ಎನ್‌ಐಎ ತನಿಖೆ ಅಧಿಕೃತವಾಗಿ ತನಿಖೆ ಪ್ರಾರಂಭಿಸಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕೆಲ ದಿನಗಳ ಹಿಂದೆ ಗಲಭೆ ಪ್ರಕರಣ ಸಂಬಂಧ ಎಚ್‌ಬಿಆರ್ ಲೇಔಟ್‌ನ ಸೈಯದ್ ಸಮೀವುದ್ದೀನ್‌ನನ್ನು ಸಿಸಿಬಿ ಬಂಧಿಸಿತು. ಬಳಿಕ ವಿಚಾರಣೆ ವೇಳೆ ಆತನಿಗೆ ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಪ್ರಕರಣದ ಆರೋಪಿಗಳ ಜತೆ ನಂಟು ಬಯಲಾಯಿತು. ಈ ಮಾಹಿತಿ ಬೆನ್ನು ಹತ್ತಿದಾಗ ಮತ್ತೆ 40ಕ್ಕೂ ಹೆಚ್ಚಿನ ಆರೋಪಿಗಳಿಗೆ ಆತಂಕವಾದಿ ಗುಂಪುಗಳ ಜತೆ ಸ್ನೇಹ ಗೊತ್ತಾಯಿತು.
2013ರ ಬಿಜೆಪಿ ಕಚೇರಿ ಸಮೀಪ ಬಾಂಬ್ ಸ್ಫೋಟದಲ್ಲಿ ತಮಿಳುನಾಡು ಮೂಲದ ನಿಷೇಧಿತ ಉಗ್ರಗಾಮಿ ಸಂಘಟನೆ ಅಲ್ ಉಮ್ಮಾ, 2015ರ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್ ಹಾಗೂ 2016ರ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ನಡೆದಿದ್ದ ಶಿವಾಜಿನಗರದ ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಕೊಲೆ ಪ್ರಕರಣದಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಪಾತ್ರ ಬೆಳಕಿಗೆ ಬಂದಿತ್ತು. ಈಗ ಗಲಭೆಕೋರರಿಗೆ ಈ ಮೂರು ಸಂಘಟನೆಗಳೊಂದಿಗೆ ಸಂಪರ್ಕವಿರುವ ಮಾಹಿತಿ ಸಿಸಿಬಿ ತನಿಖೆಯಲ್ಲಿ ಗೊತ್ತಾಗಿದೆ.
ಈ ಆತಂಕವಾದಿ ಸಂಘಟನೆಗಳು ದೇಶವ್ಯಾಪಿ ಜಾಲ ಹೊಂದಿವೆ. ಅವುಗಳ ಸಂಪರ್ಕ ಜಾಲ ಶೋಧನೆಗೆ ಎನ್‌ಐಎ ತನಿಖೆ ಅಗತ್ಯವಿದೆ. ರುದ್ರೇಶ್ ಕೊಲೆ ಹಾಗೂ ಚಚ್‌ರ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣಗಳ ತನಿಖೆಯನ್ನು ಎನ್‌ಐಎ ತನಿಖೆ ನಡೆಸಿತ್ತು. ಹಾಗಾಗಿ ಹಳೇ ಪ್ರಕರಣಗಳ ಆರೋಪಿಗಳ ಬಗ್ಗೆ ತನಿಖೆ ನಡೆಸಲು ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಸರ್ಕಾರ ಮಟ್ಟದಲ್ಲಿ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ