ಬೆಳಗಾವಿಯಲ್ಲಿ ಕೋವಿಡ್‌ನ ಮತ್ತೊಂದು ಲಸಿಕೆ ಪ್ರಯೋಗ!| ಕೋವ್ಯಾಕ್ಸಿನ್ ಪ್ರಯೋಗಿಸಿದ್ದ ಜೀವನ ರೇಖಾ ಆಸ್ಪತ್ರೆಯಲ್ಲೇ 100 ಮಂದಿಗೆ ಜೈಕ್ಯಾಡಿಲಾ ಲಸಿಕೆ
ಬ್ರಹ್ಮಾನಂದ ಎನ್.ಹಡಗಲಿ
ಬೆಳಗಾವಿ(ಆ.21): ಕೋವಿಡ್ 19 ಮಹಾಮಾರಿಗೆ ಹೈದರಾಬಾದ್ ಮೂಲದ ಭಾರತ ಬಯೋಟೆಕ್ ಸಂಸ್ಥೆ ತಯಾರಿಸಿರುವ ಕೋವ್ಯಾಕ್ಸಿನ್‌ನ ಕ್ಲಿನಿಕಲ್ ಟ್ರಯಲ್ ನಡೆಸುತ್ತಿರುವ ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯಲ್ಲಿ ಇದೀಗ ಮತ್ತೊದು ಕಂಪನಿಯ ಕೋವಿಡ್ ಲಸಿಕೆಯ ಪ್ರಯೋಗವನ್ನೂ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಸಾವು, ಸೋಂಕು ವರದಿ : ಗುರುವಾರದ ರಿಪೋರ್ಟ್ ಎಷ್ಟು..?
ಅಹಮದಾಬಾದ್ ಮೂಲದ ಕೆಡಿಲಾ ಹೆಲ್ತ್‌ಕೇರ್ ಲಿ.ನ ಜೈಡಸ್ ಕ್ಯಾಡಿಲಾ ತಯಾರಿಸಿರುವ ಜೈಕೋವ್-ಡಿ ಎಂಬ ಮತ್ತೊಂದು ಲಸಿಕೆಯನ್ನು ಜೀವನ ರೇಖಾ ಆಸ್ಪತ್ರೆ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದೆ. ಜೈಡಸ್ ಕ್ಯಾಡಿಲಾ ಸಂಸ್ಥೆಯು ಈಗಾಗಲೇ ಮೊದಲ ಹಂತದಲ್ಲಿ ದೇಶದ ಕೆಲವು ಆಸ್ಪತ್ರೆಗಳಲ್ಲಿ ತನ್ನ ಲಸಿಕೆಯ ಕ್ಲಿನಿಕಲ್ ಟ್ರಯಲ್ ಆರಂಭಿಸಿದೆ. ಈಗ ಎರಡನೇ ಹಂತದಲ್ಲಿ ದೇಶದ ಕೆಲವೇ ಕೆಲವು ಆಸ್ಪತ್ರೆಗಳನ್ನು ಪ್ರಯೋಗಕ್ಕೆ ಆಯ್ದುಕೊಂಡಿದ್ದು, ಈ ಪೈಕಿ ಕರ್ನಾಟಕದ ಏಕೈಕ ಆಸ್ಪತ್ರೆಯಾಗಿ ಜೀವನ ರೇಖಾ ಆಸ್ಪತ್ರೆಯನ್ನೇ ಆಯ್ಕೆ ಮಾಡಿದೆ.
ಲಸಿಕೆ ಪ್ರಯೋಗ ಆರಂಭ: ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿರುವ ಆಸ್ಪತ್ರೆ ವೈದ್ಯ ಡಾ.ಅಮಿತ್ ಭಾಟೆ, ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಜೈಕೋವ್-ಡಿ ಲಸಿಕೆ ಈಗಾಗಲೇ ಪ್ರಯೋಗಕ್ಕೆ ಒಳಗಾಗಿದೆ. ಅದರಂತೆ ಜೀವನ ರೇಖಾ ಆಸ್ಪತ್ರೆಯಲ್ಲಿ ಈಗಾಗಲೇ 100 ಜನರಿಗೆ ಈ ಲಸಿಕೆಯನ್ನು ನೀಡಲಾಗಿದೆ ಎಂದು ಖಚಿತ ಪಡಿಸಿದ್ದಾರೆ. ಇದು ಕೂಡ ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ರೂಪಿಸಲಾಗಿರುವ ಲಸಿಕೆಯಾಗಿದೆ. ಜನರೇ ಮುಂದೆ ಬಂದು ಲಸಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
'ಕೊರೋನಾ ಸೋಂಕಿತರನ್ನು ಆಸ್ಪತ್ರೆಗಳು ವಾಪಸ್ ಕಳುಹಿಸುವಂತಿಲ್ಲ'
ಸೆಪ್ಟೆಂಬರ್‌ನಲ್ಲಿ ಕೋವ್ಯಾಕ್ಸಿನ 2ನೇ ಸುತ್ತಿನ ಪ್ರಯೋಗ!
ಈಗಾಗಲೇ ಮೊದಲ ದಿನ ಮತ್ತು 14ನೇ ದಿನಕ್ಕೆ ಎಂಬಂತೆ ನಾಲ್ವರಿಗೆ 2 ಬಾರಿ ಕೋ ವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಕೋವ್ಯಾಕ್ಸಿನ್‌ನ 2ನೇ ಹಂತದಲ್ಲಿ ಲಸಿಕೆ ಹಾಕಲಾಗುವುದು. ಸದ್ಯ ಲಸಿಕೆ ಪಡೆದವರಲ್ಲಿ ಯಾರಿಗೂ ಯಾವುದೇ ಅಡ್ಡ ಪರಿಣಾಮ ಕಂಡು ಬಂದಿಲ್ಲ. ಅವರ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಗೊಳ್ಳಲು ಕನಿಷ್ಠ 28 ದಿನ ಬೇಕಾಗುತ್ತದೆ. ಇದಾದ ಮೇಲೆ ಪ್ರತಿ ತಿಂಗಳಿಗೊಮ್ಮೆ ತಪಾಸಣೆ ಮಾಡಲಾಗುವುದು ಎಂದು ಡಾ.ಭಾಟೆ ವಿವರಿಸಿದ್ದಾರೆ.