ಜ.22 ರಂದು ರಾಮಮಂದಿರ ಉದ್ಘಾಟನೆಗೆ ರಜೆ ಮಾಡುವ ಮಕ್ಕಳಿಗೆ 1000 ರೂ ದಂಡದ ಎಚ್ಚರಿಕೆ ನೀಡಿದ ಕ್ರೈಸ್ತ ಶಾಲೆ!

By Ravi JanekalFirst Published Jan 20, 2024, 8:22 PM IST
Highlights

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಭಜನೆ, ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮತ್ತೊಂದು ಕಡೆ ಸರ್ಕಾರಿ ಶಾಲೆ, ಖಾಸಗಿ ಶಾಲೆಗಳು, ಖಾಸಗಿ ಸಂಸ್ಥೆಗಳಿಗೆ ರಜೆ ನೀಡಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದೆ. ಆದ್ರೆ ಇಲ್ಲೊಂದು ಕ್ರೈಸ್ತ ಶಾಲೆ ಜನವರಿ 22 ರಂದು ಮಕ್ಕಳು ರಜೆ ಹಾಕಿದ್ರೆ 1000 ಸಾವಿರ ದಂಡ ಹಾಕ್ತೀವಿ ಅಂತ ಎಚ್ಚರಿಕೆ ನೀಡಿದೆ. 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಜ.20) : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಭಜನೆ, ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮತ್ತೊಂದು ಕಡೆ ಸರ್ಕಾರಿ ಶಾಲೆ, ಖಾಸಗಿ ಶಾಲೆಗಳು, ಖಾಸಗಿ ಸಂಸ್ಥೆಗಳಿಗೆ ರಜೆ ನೀಡಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದೆ. ಆದ್ರೆ ಇಲ್ಲೊಂದು ಕ್ರೈಸ್ತ ಶಾಲೆ ಜನವರಿ 22 ರಂದು ಮಕ್ಕಳು ರಜೆ ಹಾಕಿದ್ರೆ 1000 ಸಾವಿರ ದಂಡ ಹಾಕ್ತೀವಿ ಅಂತ ಎಚ್ಚರಿಕೆ ನೀಡಿದೆ. 

ಶಾಲೆಯಿಂದ ದಂಡದ ಎಚ್ಚರಿಕೆ : 

ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠೆ ದಿನವಾದ ಜನವರಿ 22 ರಂದು ಶಾಲೆಗೆ ರಜೆ ಹಾಕಿದರೆ 1000 ರೂ. ದಂಡ ವಿಧಿಸುವುದಾಗಿ ಮಕ್ಕಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಆರೋಪಿಸಿ ವಿಶ್ವಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಚಿಕ್ಕಮಗಳೂರು  ನಗರದ ಸಂತ ಜೋಸೆಫರ ಕಾನ್ವೆಂಟ್ ಶಾಲೆ(Saint Joseph's Convent School Chikkamagaluru)ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯರನ್ನೇ ಕರೆದಿಲ್ಲ; ಇದು ಕನ್ನಡಿಗರಿಗೆ ಮಾಡಿದ ಅವಮಾನ : ಚಲುವರಾಯಸ್ವಾಮಿ

ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಬಜರಂಗದಳದ ಮುಖಂಡ ರಂಗನಾಥ್ ಸೇರಿದಂತೆ ಇತರೆ ಕಾರ್ಯಕರ್ತರು ಶಾಲೆಗೆ ತೆರಳಿ ಈ ರೀತಿ ಮಕ್ಕಳ ಮೇಲೆ ದಬ್ಬಾಳಿಕೆ ಮಾಡುದು ಎಷ್ಟು ಸರಿ ಎಂದು ಪ್ರಶ್ನಿಸಿ, ದಂಡ ಕಟ್ಟುವುದು ದೊಡ್ಡ ವಿಚಾರವಲ್ಲ. ಆದರೆ ಇದರಿಂದ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಯೋಚಿಸಬೇಕಲ್ಲವೆ ಎಂದರು. ಒಂದು ಧರ್ಮದ ಮಕ್ಕಳ ಮೇಲೆ ಶಾಲೆ ಈ ರೀತಿ ದಬ್ಬಾಳಿಕೆ ಮಾಡುವುದು ಸರಿಯಲ್ಲ.  ವಿಶ್ವಹಿಂದೂ ಪರಿಷತ್-ಬಜರಂಗದಳ ಸಂಘಟನೆ ಇಡೀ ಜಿಲ್ಲೆಯ ಮಕ್ಕಳ ಬೆನ್ನಿಗೆ ನಿಂತಿದೆ. ಜನವರಿ 22ರಂದು ಯಾವುದೇ ಮಕ್ಕಳಿಗೆ ರಾಮ ಮಂದಿರ ಕಾರ್ಯಕ್ರಮದ ನೇರ ಪ್ರಸಾರ ನೋಡಬೇಕು ಅನ್ನಿಸಿದರೆ ರಜೆ ಹಾಕಿ ಮನೆಯಲ್ಲೇ ನೋಡಿ. ಜಿಲ್ಲೆಯ ಯಾವುದೇ ಶಾಲೆಯ ಯಾವುದೇ ಮಕ್ಕಳಿಗೆ ಯಾರಾದರೂ ದಂಡ ಹಾಕಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿದರು.

ಶಾಲೆಗೆ ಪೊಲೀಸರ ಭೇಟಿ : 

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಮತ್ತು ಸಿಬ್ಬಂದಿ  ಭೇಟಿ ನೀಡಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಗೂ ಶಾಲಾ ಆಡಳಿತ ಮಂಡಳಿ  ಜೊತೆ ಮಾತನಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ನಿನ್ನೆ ಸಂಜೆ ಶಾಲೆಯ ಮಕ್ಕಳಿಗೆ ತಿಳಿಸಿದ್ದಾರೆ ಎಂದಯ ಸಂಘಟನೆ ಮುಖಂಡರು ಆರೋಪಿಸಿದ್ದಾರೆ. ಇಂದು ಶಾಲೆಯಲ್ಲಿ ನವೋಂದಯ ಪರೀಕ್ಷೆ ನಡೆಯುತ್ತಿದ್ದು ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ನಾಳೆ ಭಾನುವಾರ, ಸೋಮವಾರ ಕಡ್ಡಾಯವಾಗಿ ಶಾಲೆಗೆ ಬರುವಂತೆ ಸೂಚನೆಯನ್ನು ಶಾಲೆ ಆಡಳಿತ ಮಂಡಳಿ ನೀಡಿದೆ ಎನ್ನುವ ಆರೋಪಿ ಕೇಳಿಬಂದಿದೆ. 

ಆರೋಪ ನಿರಾಕರಣೆ

ಮಕ್ಕಳಿಗೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ ಎನ್ನುವ ಆರೋಪವನ್ನು ಶಾಲೆಯ ಮುಖ್ಯೋಪಾದ್ಯಾಯರಾದ ಜೀನ್ ಅವರು ನಿರಾಕರಿಸಿದರು. ಮೂರ್ನಾಲ್ಕು ದಿನ ಸರಣಿ ರಜೆ ಇರುವ ಸಂದರ್ಭದಲ್ಲಿ ಮಕ್ಕಳು ಹೆಚ್ಚುವರಿಯಾಗಿ ರಜೆ ಹಾಕುವ ಸಂದರ್ಭ ಇರುತ್ತದೆ. ಇದರಿಂದ ತರಗತಿಗಳು ತಪ್ಪಿ ಹೋಗುತ್ತದೆ. ಈ ಕಾರಣಕ್ಕೆ ಪ್ರತಿ ಮಕ್ಕಳನ್ನೂ ಕರೆದು ಎಚ್ಚರಿಕೆ ಕೊಡುತ್ತೇವೆ. ಅದೇ ರೀತಿಯ ಎಚ್ಚರಿಕೆಯನ್ನು ಈಗಲೂ ಕೊಟ್ಟಿದ್ದೇನೆ. ಇದಕ್ಕೂ ಅಯೋಧ್ಯಾ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ನಾನೂ ಓರ್ವ ಧಾರ್ಮಿಕ ವ್ಯಕ್ತಿ, ಎಲ್ಲ ಧರ್ಮಗಳನ್ನು ಗೌರವಿಸುವವಳು, ಎಲ್ಲ ಮಕ್ಕಳನ್ನೂ ಸಮಾನವಾಗಿ ನೋಡುತ್ತೇನೆ ಎಂದು ನನ್ನ ಶಾಲೆಯ ಮಕ್ಕಳೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಜನವರಿ ೨೨ ರಂದು ಶಾಲೆಗೆ ಬರದಿದ್ದರೆ ದಂಡ ವಿಧಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದರು.

ಜ.22 ರಂದು ಅಯೋಧ್ಯಾ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಸರ್ಕಾರಿ ರಜೆ ನೀಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ: ಸಿಎಂ

ಡಿಡಿಪಿಐ ಭೇಟಿ 

ಡಿಡಿಪಿಐ ಪ್ರಕಾಶ್ ಅವರು ವಿಚಾರ ತಿಳಿದು ಶಾಲೆಗೆ ಭೇಟಿ ನೀಡಿ ಮುಖ್ಯಸ್ಥರ ಜೊತೆ ಚರ್ಚಿಸಿದರು. ನಂತರ ಮಾತನಾಡಿ ಮಾಮೂಲಿನಂತೆ ರಜೆ ಮುಗಿದ ನಂತರ ಕಡ್ಡಾಯವಾಗಿ ಶಾಲೆಗೆ ಬರಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದ್ದಾರೆ. ರಾಮ ಮಂದಿರ ಕಾರ್ಯಕ್ರಮಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಂದು ರಜೆ ಅಗತ್ಯ ಇದ್ದವರು ರಜೆ ಪಡೆಯಬಹುದು ಎಂದು ಪೋಷಕರಿಗೂ ಮೆಸೇಜ್ ಹಾಕಿದ್ದಾರೆ. ನಾವು ಮಕ್ಕಳೊಂದಿಗೂ ಮಾತನಾಡುತ್ತೇವೆ ಎಂದು ತಿಳಿಸಿದರು. ಒಟ್ಟಾರೆ ಜನವರಿ 22 ರಂದು ರಾಮಲಲ್ಲನ ಪ್ರತಿಷ್ಠಾಪನೆಯ ವಿಶೇಷ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ತುದಿಗಾಲಲ್ಲಿ ನಿಂತಿದ್ರೆ ಇತ್ತ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡದ ಕೆಲವು ಖಾಸಗಿ ಶಾಲೆಗಳು ಈ ಮಕ್ಕಳಿಗೆ ರಜೆ ಹಾಕಿದ್ರೆ ದಂಡ ವಿಧಿಸೋ ಪಂತ್ವಾ ಹೊರಡಿಸಿರೋ ಆದೇಶ ಎಷ್ಟು ಸರಿ ಅನ್ನೋ ಮೂಡಿದೆ.

click me!