ಹಿಜಾಬ್ ವಿವಾದದ ಮೂಲಕ ರಾಜ್ಯಾದ್ಯಂತ ಧರ್ಮ ಸಂಘರ್ಷದ ಕಿಡಿ ಹತ್ತಿಸಿದ ಉಡುಪಿ ಜಿಲ್ಲೆಯಲ್ಲಿ ಈಗ ಹೊಸ ಆಯಾಮದಲ್ಲಿ ಮತ್ತೊಂದು ಹೋರಾಟ ಚುರುಕುಗೊಂಡಿದೆ.
ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಮೇ.06): ಹಿಜಾಬ್ ವಿವಾದದ (Hijab Row) ಮೂಲಕ ರಾಜ್ಯಾದ್ಯಂತ ಧರ್ಮ ಸಂಘರ್ಷದ ಕಿಡಿ ಹತ್ತಿಸಿದ ಉಡುಪಿ (Udupi) ಜಿಲ್ಲೆಯಲ್ಲಿ ಈಗ ಹೊಸ ಆಯಾಮದಲ್ಲಿ ಮತ್ತೊಂದು ಹೋರಾಟ ಚುರುಕುಗೊಂಡಿದೆ. ಶ್ರೀರಾಮಸೇನೆಯು (Sri Rama Sene) ಆಜಾನ್ (Azaan) ವಿರುದ್ಧ ರಾಜ್ಯಾದ್ಯಂತ ನಡೆಸುತ್ತಿರುವ ಹೋರಾಟ ಉಡುಪಿಗೂ ಕಾಲಿರಿಸಿದೆ. ಮೇ 9ರಂದು ಉಡುಪಿಯಲ್ಲೂ ಆಜಾನ್‌ಗೆ ವಿರುದ್ಧವಾಗಿ ಸುಪ್ರಭಾತ (Suprabhata) ಮೊಳಗಿಸಲು ಶ್ರೀರಾಮಸೇನೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
undefined
ಮಸೀದಿಗಳಲ್ಲಿ ಆಜಾನ್‌ನ ಶಬ್ದ ಕಡಿಮೆ ಮಾಡುವಂತೆ ಆಗ್ರಹಿಸಿ ಶ್ರೀರಾಮಸೇನೆ ಅಭಿಯಾನ ಹಮ್ಮಿಕೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ನ್ಯಾಯಾಲಯದ ತೀರ್ಪನ್ನು ಪಾಲಿಸಬೇಕು ಇಲ್ಲವಾದರೆ ಮೇ 9ರಂದು ಹೋರಾಟ ತೀವ್ರಗೊಳಿಸುವುದಾಗಿ ಹೇಳಿದ್ದಾರೆ. ಆಜಾನ್ ಶಬ್ದ ಕಡಿಮೆಯಾಗದಿದ್ದರೆ ದೇವಾಲಯಗಳಲ್ಲಿ ಸುಪ್ರಭಾತ ಮುಳುಗಿಸಲು ಚಿಂತನೆ ನಡೆಸಿದ್ದೇವೆ, ಈ ಕುರಿತು ಜಿಲ್ಲೆಯ ದೇವಾಲಯಗಳಿಗೆ ಮನವಿ ಮಾಡಿದ್ದೇವೆ ಎಂದು ಶ್ರೀರಾಮಸೇನೆಯ ಮಂಗಳೂರು ವಿಭಾಗದ ಅಧ್ಯಕ್ಷ ಮೋಹನ್ ಭಟ್ ತಿಳಿಸಿದ್ದಾರೆ.
ಆಜಾನ್ ವಿರುದ್ದದ ನಮ್ಮ ಸುಪ್ರಭಾತ ತಡೆದರೆ ಸಂಘರ್ಷ: ಮುತಾಲಿಕ್ ಎಚ್ಚರಿಕೆ
ರಾತ್ರಿ 10 ರಿಂದ 6:00 ತನಕ ಯಾವುದೇ ಶಬ್ದಮಾಲಿನ್ಯಕ್ಕೆ ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ (Supreme Court) ಸ್ಪಷ್ಟವಾಗಿ ಹೇಳಿದೆ. ಅಲಹಾಬಾದ್ ಹೈಕೋರ್ಟ್ ಕೂಡ ಅದೇ ತೀರ್ಪನ್ನು ನೀಡಿದೆ. ಉತ್ತರ ಪ್ರದೇಶದಲ್ಲಿ ಈ ತೀರ್ಪು ಪಾಲನೆಯಾಗುತ್ತದೆ ಆದರೆ ಕರ್ನಾಟಕ ಸರ್ಕಾರ ಕೋರ್ಟ್ ಆದೇಶವನ್ನು ಪರಿಪಾಲನೆ ಮಾಡುತ್ತಿಲ್ಲ. ಒಂದು ವೇಳೆ ಮಠ-ಮಂದಿರಗಳಲ್ಲಿ ಶಬ್ದ ಹೆಚ್ಚಾದರೆ ಬಂದು ಸೀಜ್ ಮಾಡುತ್ತಾರೆ. ಬೆಳ್ಳಂಬೆಳಗ್ಗೆ ಸುಪ್ರಭಾತ ಕೇಳುವ ಪದ್ಧತಿ ನಮ್ಮಲ್ಲೂ ಇದೆ. ಒಂದು ವೇಳೆ ಆಜಾನ್ ಶಬ್ದ ನಿಲ್ಲದಿದ್ದರೆ ಕಾನೂನಿಗೆ ಗೌರವ ಕೊಟ್ಟು ನಮ್ಮ ಸಂಪ್ರದಾಯವನ್ನು ಮತ್ತೆ ಪ್ರಾರಂಭಿಸುತ್ತೇವೆ. ದೇವಾಲಯಗಳಲ್ಲಿ ಸುಪ್ರಭಾತ ಮೊಳಗಿಸುತ್ತೇವೆ ಎಂದು ಶ್ರೀರಾಮಸೇನೆ ಹೇಳಿದೆ.
ನ್ಯಾಯಾಲಯದ ಮೊರೆ ಹೋಗಲು ತೀರ್ಮಾನ: ನಾವೇನು ಮಸೀದಿಗಳ ಮುಂದೆ ಭಜನೆ ಮಾಡಲು ಹೋಗುವುದಿಲ್ಲ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಮತ್ತು ಅದು ಪಾಲನೆ ಆಗಬೇಕು. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಅಪೀಲು ಹಾಕುತ್ತೇವೆ ಸುಪ್ರೀಂಕೋರ್ಟ್ ಆದೇಶ ಪಾಲನೆಯಾಗುತ್ತಿಲ್ಲ ಎಂಬ ಬಗ್ಗೆ ಗಮನ ಸೆಳೆಯುತ್ತಿವೆ ಎಂದು ಮೋಹನ್ ಭಟ್ ತಿಳಿಸಿದ್ದಾರೆ.
ಹಾರ್ನ್ ಮೈಕ್ ತೆಗೀರಿ ಸ್ಪೀಕರ್ ಬಾಕ್ಸ್ ಅಳವಡಿಸಿ: ಇನ್ನೊಂದೆಡೆ ಉಡುಪಿ ಶಾಸಕ ರಘುಪತಿ ಭಟ್ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ವಿನಂತಿಸಿದ್ದಾರೆ. ಮಸೀದಿಗಳ ಎದುರು ಹೋಗಿ ಭಜನೆ ಮಾಡಿದರೆ ಸಂಘರ್ಷ ಆಗಬಹುದು. ಆಜಾನ್ ಕುರಿತಾಗಿ ಸರಕಾರ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುತ್ತೆ. ಆದರೆ ಉಡುಪಿ ಜಿಲ್ಲೆಯಲ್ಲಿ ಶಬ್ದದ ಪ್ರಮಾಣ ಕಡಿಮೆಯಾಗಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳು ಹಾರ್ನ್ ಮೈಕುಗಳನ್ನು ತೆಗೆದು ಸ್ಪೀಕರ್ ಬಾಕ್ಸ್‌ಗಳನ್ನು ಅಳವಡಿಸಬೇಕು. ಧರ್ಮ ಕೇಂದ್ರಗಳ ಒಳಗೆ ಮತ್ತು ಸುತ್ತು ಬಂದವರಿಗೆ ಮಾತ್ರ ಪ್ರಾರ್ಥನೆ ಕೇಳಿದರೆ ಸಾಕು.
ಮಸೀದಿಯ 100 ಮೀಟರ್ ಒಳಗೆ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಪಠಿಸುವಂತಿಲ್ಲ
ಉಡುಪಿಯ ದೇವಸ್ಥಾನಗಳಲ್ಲಿ ಸುಪ್ರಭಾತ ಹಾಕಿದಾಗಲೂ ಸಾರ್ವಜನಿಕರಿಂದ ಆಕ್ಷೇಪಗಳು ಬಂದಿದ್ದವು. ಅನೇಕ ಹಿಂದೂಗಳೇ ಇದನ್ನು ವಿರೋಧಿಸಿದ್ದರು. ಹಾಗಾಗಿ ಹಾರ್ನ್ ಮೈಕ್ ಬದಲು ಸೌಂಡ್ ಬಾಕ್ಸ್ ಉಪಯೋಗಿಸುವುದೇ ಪರಿಹಾರ. ಯಾವುದಾದರೂ ಮಸೀದಿಗಳಲ್ಲಿ ಶಬ್ದಮಾಲಿನ್ಯ ಇದ್ದರೆ ಅವರ ಮನವೊಲಿಸಲು ಪ್ರಯತ್ನ ಮಾಡೋಣ ಸಂಘರ್ಷ ಬೇಡ ಎಂದು ಹೇಳಿದ್ದಾರೆ. ಧಾರ್ಮಿಕತೆಗೆ ಒತ್ತು ನೀಡುವ ದೇವಾಲಯಗಳ ನಗರಿ ಉಡುಪಿಯಲ್ಲಿ ಮೇ 9ರಂದು ಶ್ರೀರಾಮ ಸೇನೆಯ ಹೋರಾಟ ಯಾವ ಸ್ವರೂಪದ್ದಾಗಿರುತ್ತದೆ ಎಂಬ ಬಗ್ಗೆ ಸ್ಪಷ್ಟತೆ ದೊರೆತಿಲ್ಲ. ಸುಪ್ರಭಾತ ಮೊಳಗಿಸುವ ಸಂಘಟನೆಯ ಬೇಡಿಕೆಗೆ ದೇವಾಲಯಗಳು ಯಾವ ರೀತಿಯಲ್ಲಿ ಸ್ಪಂದಿಸುತ್ತಿದೆ ಕಾದು ನೋಡಬೇಕು.